ಭಾನುವಾರ, ಜನವರಿ 24, 2021
27 °C
ಕೂಲಿ ಕಾರ್ಮಿಕರ ಕೊರತೆ; ಯಂತ್ರಗಳಿಗೆ ರೈತರ ಮೊರೆ

ಹುಲ್ಲು ಪೆಂಡಿ ಕಟ್ಟುವ ಯಂತ್ರಕ್ಕೂ ಬೇಡಿಕೆ

ಡಿ.ಜಿ.ಮಲ್ಲಿಕಾರ್ಜುನ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ದಿನೇ ದಿನೇ ಕೂಲಿ ಕಾರ್ಮಿಕರ ಕೊರತೆ ಹಾಗೂ ಹೆಚ್ಚಿನ ಕೂಲಿ ದರದಿಂದ ಹೈರಾಣಾಗಿರುವ ರೈತರು ಯಂತ್ರಗಳಿಗೆ ಮೊರೆ ಹೋಗುತ್ತಿದ್ದಾರೆ. ಇದೀಗ ತಾಲ್ಲೂಕಿನ ರಾಗಿ ಹೊಲಗಳಿಗೆ ಹುಲ್ಲು ಪೆಂಡಿ ಕಟ್ಟುವ ಯಂತ್ರವೂ ಕಾಲಿಟ್ಟಿದೆ. ಈ ಯಂತ್ರಕ್ಕೆ ವಿಪರೀತ ಬೇಡಿಕೆಯಿದ್ದು, ಹೆಚ್ಚು ಹಣ ಕೊಡುತ್ತೇನೆ ಮೊದಲು ನಮ್ಮ ಹೊಲಕ್ಕೆ ಬನ್ನಿ ಎನ್ನುತ್ತಾ ರೈತರು ನಾಮುಂದು ತಾಮುಂದು ಎಂದು ಕರೆದೊಯ್ಯುತ್ತಿದ್ದಾರೆ.

ಈ ಯಂತ್ರ ರೈತರಿಗೆ ವರದಾನವಾಗಿದ್ದು, ರಾಗಿ ಕೊಯ್ಲು ನಂತರ ಹೊಲದಲ್ಲಿ ಬಿದ್ದಿರುವ ಹುಲ್ಲನ್ನು ಕ್ಷಣ ಮಾತ್ರದಲ್ಲೇ 25 ಕೆಜಿ ತೂಕದಷ್ಟು ರಾಗಿ ಹುಲ್ಲಿನ ಪೆಂಡಿ ಅಂದರೆ, ಎಕರೆಗೆ ಸುಮಾರು 50ರಿಂದ 60 ಪೆಂಡಿ ಕಟ್ಟುತ್ತದೆ. ಒಬ್ಬರೇ ಆರಾಮವಾಗಿ ಪೆಂಡಿಯನ್ನು ಎತ್ತಿಡಬಹುದು. ಇಬ್ಬರು ರೈತರು ಈ ಹುಲ್ಲಿನ ಪೆಂಡಿಗಳನ್ನು ಟ್ರ್ಯಾಕ್ಟರ್‌ಗೆ ಲೋಡ್‌ ಹಾಗೂ ಅನ್‌ ಲೋಡ್‌ ಮಾಡಿ, ಬಣವೆ ಹಾಕಬಹುದಾಗಿದೆ.

‘ಕೂಲಿಕಾರರಿಂದ ರಾಗಿ ಹುಲ್ಲಿನ ಬಣವೆ ಹಾಕಲು ಪ್ರತಿ ಎಕರೆಗೆ ಸಾಕಷ್ಟು ಖರ್ಚು ಬರುತ್ತದೆ. ಯಂತ್ರದ ಮೂಲಕ ಬಣವೆ ಹಾಕಿದರೆ ಹಣ, ಸಮಯ ಮತ್ತು ಕೂಲಿ ಸಮಸ್ಯೆ ನೀಗುತ್ತದೆ. ಯಂತ್ರದಿಂದ ಮಾಡಿದ ಪೆಂಡಿಯ ಬಣವೆಯನ್ನು ಸುಲಭವಾಗಿ ಜೋಡಿಸಿಡಬಹುದು’ ಎನ್ನುತ್ತಾರೆ ರೈತ ಶ್ರೀನಿವಾಸ್.

‘ಜಾನುವಾರುಗಳ ಮೇವಿಗೆ ರಾಗಿ ಹುಲ್ಲು ಅತ್ಯಗತ್ಯ. ಹಾಗಾಗಿ ನಮಗೆ ನಷ್ಟವಾದರೂ ರಾಗಿ ಬೆಳೆಯುತ್ತೇವೆ. ಯಂತ್ರಗಳ ಮೂಲಕ ಪೆಂಡಿ ಕಟ್ಟಿಸಿದರೆ ನಮಗೆ ಶೇಖರಿಸಿಡಲು ತುಂಬ ಅನುಕೂಲ. ಖರ್ಚೂ ಕಡಿಮೆ’ ಎಂದು ರೈತರಾದ ವೇಣುಗೋಪಾಲ್ ಮತ್ತು ರವಿ ತಿಳಿಸಿದರು.

ಪೆಂಡಿ ಕಟ್ಟುವ ಯಂತ್ರಗಳು ತಮಿಳುನಾಡು, ರಾಣೆ ಬೆನ್ನೂರು ಮುಂತಾದೆಡೆಗಳಿಂದ ತಾಲ್ಲೂಕಿಗೆ ಬಂದಿವೆ. ಮೋಡ ಕವಿದ ವಾತಾವರಣವಿರುವುದರಿಂದ ಹೊಲದಲ್ಲಿ ಒಣಗಿ ಬಿದ್ದಿರುವ ಹುಲ್ಲು ನೆನೆದು ಹೋದೀತೆಂಬ ಭಯ ಕಾಡುತ್ತಿರುವುದರಿಂದ ರೈತರು ಪೆಂಡಿಗೆ ₹40 ಪಡೆಯುವ ಯಂತ್ರದ ಮಾಲೀಕರಿಗೆ ಇನ್ನೂ ₹5 ಜಾಸ್ತಿ ಕೊಡುತ್ತೇವೆಂದು ತಮ್ಮ ಹೊಲಗಳಿಗೆ ಕರೆದೊಯ್ಯುತ್ತಿದ್ದಾರೆ. ರಾತ್ರಿ 11 ಆದರೂ ಯಂತ್ರದ ಮೂಲಕ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು