ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಹಾಲಿನ ಬೆಲೆ ಏರಿಸಿ; ಸಂಕಷ್ಟಕ್ಕೆ ಸ್ಪಂದಿಸಿ

ಭೂ ಸುಧಾರಣೆ, ಎಪಿಎಂಸಿ, ವಿದ್ಯುತ್ ತಿದ್ದುಪಡಿ ಕಾಯ್ದೆಗಳನ್ನು ರದ್ದುಪಡಿಲು ಆಗ್ರಹ
Last Updated 9 ಸೆಪ್ಟೆಂಬರ್ 2020, 16:39 IST
ಅಕ್ಷರ ಗಾತ್ರ

ಚಿಂತಾಮಣಿ: ‘ಹಸಿರು ಟವೆಲ್ ಹಾಕಿಕೊಂಡು ಅಧಿಕಾರ ಸ್ವೀಕರಿಸಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕೊರೊನಾ ಸಂಕಷ್ಟದಲ್ಲಿ ಒಂದೇ ಬಾರಿಗೆ ಲೀಟರ್‌ ಹಾಲಿನ ಬೆಲೆ ₹4 ಕಡಿಮೆ ಮಾಡಿ ರೈತರ ಮೇಲೆ ಬರೆ ಎಳೆದಿದ್ದಾರೆ’ ಎಂದು ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜೆ.ರಘುನಾಥರೆಡ್ಡಿ ಆರೋಪಿಸಿದರು.

ಸಂಘದ ಕಾರ್ಯಕರ್ತರು, ಮುಖಂಡರು ಹಾಲಿನ ಬೆಲೆ ಏರಿಸುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬುಧವಾರ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.

ಒಂದು ಲೀಟರ್‌ ನೀರಿನ ಬೆಲೆ ₹20, ಹಾಲಿನ ₹24 ಮಾಡಿದ್ದಾರೆ. ಕೊರೊನಾ ಸೋಂಕು ಪರಿಣಾಮ ಎಲ್ಲ ವರ್ಗದ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೀವನ ನಡೆಸುವುದೇ ದುಸ್ತರವಾಗಿದೆ. ಪಶು ಆಹಾರದ ಬೆಲೆ, ಔಷಧಿಗಳ ಬೆಲೆ ಏರಿಕೆಯಾಗಿದ್ದು, ಉತ್ಪಾದನಾ ವೆಚ್ಚವೂ ಏರಿಕೆಯಾಗಿದೆ. ಲೀಟರ್‌ಗೆ ₹40 ಏರಿಕೆ ಮಾಡಬೇಕು ಎಂದು ರೈತರು ಹೋರಾಟ ಮಾಡುತ್ತಿದ್ದರೆ, ಹಾಲು ಒಕ್ಕೂಟಗಳು ಒಂದೇ ಬಾರಿಗೆ ₹4 ಕಡಿಮೆ ಮಾಡಿರುವುದು ಖಂಡನೀಯ. ಕೂಡಲೇ ಕಡಿಮೆ ಮಾಡಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

‘ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಭೂಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ವಿದ್ಯುತ್ ಕಾಯ್ದೆ- 2020 ಸೇರಿದಂತೆ ಎಲ್ಲ ತೀರ್ಮಾನಗಳು ರೈತರಿಗೆ ಮಾರಕವಾಗಿವೆ. ರೈತರಿಗೆ ಅನುಕೂಲ ಮಾಡದಿದ್ದರೂ ಪರವಾಗಿಲ್ಲ. ತೊಂದರೆ ಕೊಡಬೇಡಿ. ರೈತರ ಶಾಲು ಹೊದ್ದುಕೊಂಡು ರೈತರಿಗೆ ಅವಮಾನ ಮಾಡಬೇಡಿ’ ಎಂದು ಮನವಿ ಮಾಡಿದರು.

ಪ್ರಧಾನ ಕಾರ್ಯದರ್ಶಿ ಕೆ.ವೆಂಕಟರಾಮಯ್ಯ ಮಾತನಾಡಿ, ಜಿಲ್ಲೆಯಲ್ಲಿ ಚಿಂತಾಮಣಿ ತಾಲ್ಲೂಕು ಜನಸಂಖ್ಯೆ, ವಿಸ್ತಾರಲ್ಲಿ ಅತ್ಯಂತ ದೊಡ್ಡ ತಾಲ್ಲೂಕಾಗಿದೆ. ಕೋಲಾರದ ಕಡೆಯಿಂದ ಕೆ.ಸಿ.ವ್ಯಾಲಿ, ಚಿಕ್ಕಬಳ್ಳಾಪುರದ ಕಡೆಯಿಂದ ಎಚ್.ಎನ್.ವ್ಯಾಲಿ ನೀರಿನ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಈ ಎರಡೂ ಯೋಜನೆಗಳಿಂದ ತಾಲ್ಲೂಕು ವಂಚಿತವಾಗಿದೆ. ನಾಮಕಾವಾಸ್ತೆಗಾಗಿ ಕೇವಲ ತಾಲ್ಲೂಕಿನ 2 ಕೆರೆಗಳಿಗೆ ಮಾತ್ರ ನೀರು ಹರಿಸಲಾಗಿದೆ ಎಂದು ದೂರಿದರು.

ಗ್ರೇಡ್-2 ತಹಶೀಲ್ದಾರ್ ಶೋಭಾ ಮನವಿ ಸ್ವೀಕರಿಸಿ ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾಕಾರರು ಪ್ರತಿಭಟನಾ ಮೆರವಣಿಗೆ ನಡೆಸಿದರು. ನಗರದ ಪ್ರಮುಖ ರಸ್ತೆಗಳ ಮೂಲಕ ತಾಲ್ಲೂಕು ಕಚೇರಿಗೆ ತಲುಪಿದರು.

ಮುಖಂಡರಾದ ಬಿ.ಎಂ.ಮುನಿ ವೆಂಕಟಪ್ಪ, ಮಿಲ್ ನಾರಾಯಣಸ್ವಾಮಿ, ಎಸ್.ವಿ.ಗಂಗುಲಪ್ಪ, ಶ್ರೀರಾಮಪ್ಪ, ನರಸಿಂಹಮೂರ್ತಿ, ವೆಂಕಟೇಶ್, ಕೆ.ಬಿ.ಶ್ರೀರಾಮರೆಡ್ಡಿ, ರಾಮಪ್ಪ, ಕೃಷ್ಣಾರೆಡ್ಡಿ, ನಾರಾಯಣಸ್ವಾಮಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT