ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಪ್ರಕರಣ ಹಿಂಪಡೆಯುವಂತೆ ಆಗ್ರಹ

ನಗರ ಪೊಲೀಸ್ ಠಾಣೆ ಎದುರು ರೈತಸಂಘದ ಪದಾಧಿಕಾರಿಗಳ ಪ್ರತಿಭಟನೆ
Last Updated 9 ಜನವರಿ 2020, 14:39 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರೈತಸಂಘದ ಚಿಕ್ಕಬಳ್ಳಾಪುರ ತಾಲ್ಲೂಕು ಘಟಕದ ಅಧ್ಯಕ್ಷ ರಾಮಾಂಜನಪ್ಪ ಅವರ ವಿರುದ್ಧ ನಕ್ಕಲಬಚ್ಚಹಳ್ಳಿಯ ಬಿ.ಎಚ್.ನರಸಿಂಹಯ್ಯ ಅವರು ಪರಿಶಿಷ್ಟ ಜಾತಿ, ಪಂಗಡದವರ ವಿರುದ್ಧದ ದೌರ್ಜನ್ಯ ತಡೆ (ಅಟ್ರಾಸಿಟಿ) ಆರೋಪದಡಿ ನೀಡಿದ ದೂರಿನ ಅಡಿ ದಾಖಲಿಸಿದ ಪ್ರಕರಣ ಕೈಬಿಡಬೇಕು ಎಂದು ಆಗ್ರಹಿಸಿ ರೈತಸಂಘದ ಪದಾಧಿಕಾರಿಗಳು ಗುರುವಾರ ನಗರ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ‘ನರಸಿಂಹಯ್ಯ ಅವರು ರಾಮಾಂಜನಪ್ಪ ಜನವರಿ 4 ರಂದು ತಮ್ಮ ವಿರುದ್ಧ ದೌರ್ಜನ್ಯ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು. ಆ ದಿನ ರಾಮಾಂಜನಪ್ಪ ಅವರು ನಮ್ಮೊಂದಿಗೆ ಬೆಂಗಳೂರಿನಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಭಾಗವಹಿಸಿದ್ದರು. ಹಳೆಯ ಘಟನೆಯೊಂದರ ಹಗೆ ಸಾಧಿಸಿ ಈ ರೀತಿ ಸುಳ್ಳು ಪ್ರಕರಣ ದಾಖಲಿಸಲಾಗಿದೆ’ ಎಂದು ಹೇಳಿದರು.

‘ತುಳಿತಕ್ಕೆ ಒಳಗಾದವರಿಗೆ ಅನುಕೂಲವಾಗಲಿ ಎನ್ನುವ ನಿಟ್ಟಿನಲ್ಲಿ ಅಟ್ರಾಸಿಟಿ ಕಾಯ್ದೆ ಜಾರಿಗೆ ತಂದರೆ ಅದನ್ನು ಅನೇಕರು ವೈಯಕ್ತಿಕ ದ್ವೇಷ ಸಾಧಿಸಲು ಬಳಕೆ ಮಾಡುತ್ತಿದ್ದಾರೆ. ಜಿಲ್ಲೆಯಾದ್ಯಂತ ಈ ರೀತಿ ಸುಳ್ಳು ದೂರು ದಾಖಲಿಸಿ, ಬಳಿಕ ಮಧ್ಯವರ್ತಿಗಳನ್ನು ಬಿಟ್ಟು ದುಡ್ಡು ಪಡೆದು ರಾಜೀ ಸಂಧಾನ ನಡೆಸುವ ಪ್ರವೃತ್ತಿ ಹೆಚ್ಚುತ್ತಿದೆ. ಇದಕ್ಕೆ ಪೊಲೀಸ್‌ ಅಧಿಕಾರಿಗಳು ಕಡಿವಾಣ ಹಾಕಬೇಕು. ಕೂಡಲೇ ರಾಮಾಂಜನಪ್ಪ ವಿರುದ್ಧದ ಪ್ರಕರಣ ಕೈಬಿಡಬೇಕು ಎಂದು ಆಗ್ರಹಿಸಿದರು.

ಪೊಲೀಸ್ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ರಿಪೋರ್ಟ್‌ ಹಾಕುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ರೈತಸಂಘದ ಪದಾಧಿಕಾರಿಗಳಾದ ಎಚ್.ಸಿ.ರಾಮನಾಥ್, ಉಮಾ, ರಮಣಾರೆಡ್ಡಿ, ನರಸಿಂಹರೆಡ್ಡಿ, ಮುನಿನಂಜಪ್ಪ, ಡಿ.ನಾರಾಯಣಸ್ವಾಮಿ, ವೇಣುಗೋಪಾಲ್, ಕೃಷ್ಣಪ್ಪ, ಸೋಮು, ಈಶ್ವರಾಚಾರಿ, ಶ್ರೀನಿವಾಸ್‌, ಗಂಗಾಧರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT