ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗೇಪಲ್ಲಿ: ಶಿಥಿಲಗೊಂಡ ಶಾಲೆ, ಕಾಯಂ ಇಲ್ಲದ ಶಿಕ್ಷಕರು

Published 20 ಜೂನ್ 2024, 7:40 IST
Last Updated 20 ಜೂನ್ 2024, 7:40 IST
ಅಕ್ಷರ ಗಾತ್ರ

ಬಾಗೇಪಲ್ಲಿ: ವರ್ಷಗಳ ಹಿಂದೆ ನಿರ್ಮಿಸಿರುವ ಶಾಲೆಗಳು ಬೀಳುವ ಸ್ಥಿತಿಗೆ ತಲುಪಿವೆ. ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಸಿಮೆಂಟ್, ಕಲ್ಲು, ಮಣ್ಣು ಕೆಳಗೆ ಉದುರುತ್ತಿದೆ. ನೀರಿನ ತೇವಾಂಶ ಹಾಗೂ ಮಣ್ಣು ಬೀಳುವ ಕೆಳಗೆ ಶಾಲಾ ವಿದ್ಯಾರ್ಥಿಗಳು...ಹೀಗೆ ತಾಲ್ಲೂಕಿನ 33 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡಗಳು ಶಿಥಿಲಗೊಂಡು ಅಪಾಯದ ಸ್ಥಿತಿಯಲ್ಲಿವೆ. ಮಕ್ಕಳಿಗೆ ಸುರಕ್ಷತೆ ಇಲ್ಲದಂತೆ ಆಗಿದೆ.

ತಾಲ್ಲೂಕಿನಲ್ಲಿ 33 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, 21 ಪ್ರೌಢಶಾಲೆಗಳು ಇವೆ. ಬಹುತೇಕ ಸರ್ಕಾರಿ ಶಾಲೆಗಳನ್ನು ಹೈಟೆಕ್ ಮಾದರಿಯಲ್ಲಿ ನಿರ್ಮಿಸಲಾಗಿದೆ. ಆದರೆ, ನಿರ್ಮಾಣಗೊಂಡು ಕೆಲವೇ ವರ್ಷಗಳಲ್ಲಿ ಶಿಥಿಲಗೊಂಡಿವೆ. ತಾಲ್ಲೂಕಿನ 33 ಸರ್ಕಾರಿ ಶಾಲೆಗಳ ಪೈಕಿ ತರಗತಿ ಕೊಠಡಿಗಳ ಸಂಖ್ಯೆ 131. ಉತ್ತಮ ಸ್ಥಿತಿಯಲ್ಲಿ ಇರುವ ತರಗತಿ ಕೊಠಡಿಗಳು 79 ಹಾಗೂ ಶಿಥಿಲಗೊಂಡು ಅಪಾಯ ಸ್ಥಿತಿಯಲ್ಲಿ ಇರುವ 52 ಕೊಠಡಿಗಳು ಇವೆ.

ಮಕ್ಕಳ ಸಂಖ್ಯೆಗೆ ಅನುಗುಣವಾಗಿ ‌ಕೊಠಡಿಗಳ ಕೊರತೆ ಇದೆ. ಕೆಲ ಶಾಲೆಗಳಲ್ಲಿ ಶಿಥಿಲಾವಸ್ಥೆಯಲ್ಲಿ ಇರುವ ಕೊಠಡಿಗಳನ್ನು ಮುಚ್ಚಲಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ತೊಂದರೆ ಆಗದಂತೆ ಶಿಥಿಲಾವಸ್ಥೆ ಕೊಠಡಿಯಲ್ಲಿಯೇ 2 ಅಥವಾ 3 ತರಗತಿ ಮಕ್ಕಳನ್ನು ಸೇರಿಸಿಕೊಂಡು ಪಾಠ ಮಾಡಲಾಗುತ್ತಿದೆ.

ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳು ಕೂರಲು ಕುರ್ಚಿ, ಡೆಸ್ಕ್ ಇಲ್ಲ. ನೆಲದ ಮೇಲೆ ಕುಳಿತು ಪಾಠ ಕೇಳಬೇಕಾಗಿದೆ. ಮಳೆ ಬಂದರೆ ಶಾಲಾ ಚಾವಣೆಯಿಂದ ನೀರು ಸೋರಿಕೆ ಆಗಿ ಕೊಠಡಿಗಳಲ್ಲಿ ಮಳೆ ನೀರು ಸಂಗ್ರಹವಾಗುತ್ತದೆ. ಸಂಗ್ರಹ ಆಗಿರುವ ನೀರನ್ನು ವಿದ್ಯಾರ್ಥಿಗಳು ಸ್ವಚ್ಛತೆ ಮಾಡಬೇಕಾಗಿದೆ.

ಶಿಥಿಲಾವ್ಯಸ್ಥೆಯಲ್ಲಿರುವ ಶಾಲಾ ಕಟ್ಟಡ ಕೆಡವಿ ನೂತನ ಕಟ್ಟಡ ನಿರ್ಮಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಅಧಿಕಾರಿಗಳಿಗೆ ಸಂಬಂಧಪಟ್ಟ ಮುಖ್ಯ ಶಿಕ್ಷಕರು ಪತ್ರ ಬರೆದರೂ ಸರ್ಕಾರ ನೂತನ ಶಾಲಾ ಕೊಠಡಿ ನಿರ್ಮಿಸಿಲ್ಲ. ಇದರಿಂದ ಭಯದ ವಾತಾವರಣದಲ್ಲಿ ಇದ್ದೇವೆ ಎಂದು ಶಿಕ್ಷಕರು ಹೇಳುತ್ತಾರೆ.

ಅಪಾಯದ ಸ್ಥಿತಿಯಲ್ಲಿ ಸರ್ಕಾರಿ ಶಾಲಾ ಕಟ್ಟಡ: ಕೊಂಡಂವಾರಿಪಲ್ಲಿ, ಕಾರಕೂರು, ಗುಂಡ್ಲಪಲ್ಲಿ, ಹೊಸಹುಡ್ಯ, ಚೇಳೂರು, ದಾಸರಿವಾರಿಪಲ್ಲಿ, ವೆಂಕಟರೆಡ್ಡಿಪಲ್ಲಿ, ಕೊತ್ತೂರು, ಗುಮ್ಮನಾಯನಕಪಾಳ್ಯ, ಚೆನ್ನರಾಯನಪಲ್ಲಿ, ನಿಡುಮಾಮಿಡಿ ಮಠ, ಬುಟ್ಟಿವಾರಿಪಲ್ಲಿ, ವರದಯ್ಯಗಾರಿಪಲ್ಲಿ, ಜಿಲಿಬಿಗಾರಿಪಲ್ಲಿ, ಎಂ.ನಲ್ಲಗುಟ್ಲಪಲ್ಲಿ, ಬಾಗೇಪಲ್ಲಿ ಉರ್ದು ಶಾಲೆ, ರಾಶ್ವೆರುವು, ಗೊರ್ತಪಲ್ಲಿ, ಪೈಪಾಳ್ಯ, ನಾರೇಮದ್ದೇಪಲ್ಲಿ, ಆರ್.ನಲ್ಲಗುಟ್ಲಪಲ್ಲಿ, ಕೊತ್ತಪಲ್ಲಿ, ಸುಜ್ಞಾನಂಪಲ್ಲಿ, ಮಲ್ಲಿಗುರ್ಕಿ, ಸೂರಪ್ಪಲ್ಲಿ, ಗುಜ್ಜೇಪಲ್ಲಿ, ದೇವರಾಜಪಲ್ಲಿ, ಕುಂಟ್ಲಪಲ್ಲಿ, ದಿಗವನೆಟಕುಂಟಪಲ್ಲಿ, ಶ್ರೀನಿವಾಸಪುರ, ಹೊಸಕೋಟೆ, ಕೊಂಡರೆಡ್ಡಿಪಲ್ಲಿ, ಅಬಕವಾರಿಪಲ್ಲಿ ಸರ್ಕಾರಿ ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ.

ತಾಲ್ಲೂಕಿನ 41 ಸರ್ಕಾರಿ ಶಾಲೆಗಳಲ್ಲಿ ಕಾಯಂ ಶಿಕ್ಷಕರು ಇಲ್ಲ. ಮತ್ತೊಂದೆಡೆ ಶಿಥಿಲಾಯಸ್ಥೆಯಲ್ಲಿ ಇರುವ ಶಾಲಾ ಕೊಠಡಿಗಳಲ್ಲೇ ಮಕ್ಕಳು ಪಾಠ ಕೇಳಬೇಕಾಗಿದೆ. ಸರ್ಕಾರ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿಲ್ಲ ಎಂದು ಮಾರ್ಗಾನುಕುಂಟೆ ಗ್ರಾಮದ ವಕೀಲ ಜಯಪ್ಪ ಹೇಳುತ್ತಾರೆ.

ಕೃಷಿ ಕೂಲಿಕಾರ್ಮಿಕರು, ಜನಸಾಮಾನ್ಯರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುತ್ತಾರೆ. ಅತ್ತ ಶಿಕ್ಷಕರು ಇಲ್ಲ. ಇತ್ತ ಮೂಲ ಸೌಲಭ್ಯವೂ ಇಲ್ಲ. ಸರ್ಕಾರಿ ಶಾಲೆಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಮೂಲ ಸೌಲಭ್ಯ ಸಿಗದೆ ವಂಚಿತರಾಗಿದ್ದಾರೆ ಎಂದು ಪೋತೇಪಲ್ಲಿ ಗ್ರಾಮದ ಶ್ರೀರಾಮ ದೂರುತ್ತಾರೆ.

ಈ ಹಿಂದೆ ಶಿವಪುರ ಸರ್ಕಾರಿ ಶಾಲೆ ಚಾವಣಿ ಕುಸಿತದಿಂದ ಮಕ್ಕಳ ತಲೆಗೆ ಗಾಯವಾಗಿತ್ತು. ಘಟನೆ ಸಂಭವಿಸಿದ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಬರುತ್ತಾರೆ. ಕಟ್ಟಡ ನಿರ್ಮಿಸುತ್ತೇವೆ ಎಂದು ಭರವಸೆ ನೀಡುತ್ತಾರೆ. ಆದರೆ, ಕೊಠಡಿ ಮಾತ್ರ ನಿರ್ಮಾಣ ಆಗಿಲ್ಲ ಎಂದು ಮುಖಂಡ ಬಿಳ್ಳೂರುನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಕ್ಕೆ ಪತ್ರ: ಬಿಇಒ

ತಾಲ್ಲೂಕಿನಲ್ಲಿ ಶಿಥಿಲಾವಸ್ಥೆಯಲ್ಲಿನ ಸರ್ಕಾರಿ ಶಾಲೆಗಳ ಕಟ್ಟಡಗಳನ್ನು ದುರಸ್ತಿ ಹಾಗೂ ನೂತನ ಶಾಲಾ ಕೊಠಡಿಗಳನ್ನು ನಿರ್ಮಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಶಿಥಿಲಗೊಂಡಿರುವ ಶಾಲಾ ಕಟ್ಟಡಗಳ ದುರಸ್ತಿಗೆ ₹54.60 ಲಕ್ಷ ಅಂದಾಜು ಪಟ್ಟಿ ಮಾಡಲಾಗಿದೆ. ಅನುದಾನ ಬಂದ ಕೂಡಲೇ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ತನುಜಾ ತಿಳಿಸಿದ್ದಾರೆ.

ನೂತನ ಕಟ್ಟಡ ನಿರ್ಮಿಸಿ

ಶಿಥಿಲಗೊಂಡು ಬಿರುಕು ಬಿಟ್ಟ ಶಾಲಾ ಕೊಠಡಿಗಳಲ್ಲಿ ಭಯದ ವಾತಾವರಣದಲ್ಲಿ ಪಾಠ ಕೇಳುವ ಸ್ಥಿತಿ ಇದೆ. ಮಕ್ಕಳ ಪ್ರಾಣಕ್ಕೆ ತೊಂದರೆ ಆಗದಂತೆ ಸರ್ಕಾರ ಶಿಥಿಲಗೊಂಡಿರುವ ಶಾಲಾ ಕೊಠಡಿ ನೆಲಸಮ ಮಾಡಿ, ನೂತನ ಕಟ್ಟಡ ನಿರ್ಮಿಸಬೇಕು ಎಂದು ಶಾಲಾ ಮಕ್ಕಳಾದ ಶ್ರೀದೇವಿ, ಮಂಜುಳಾ, ಪೂರ್ಣಿಮಾ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT