ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರಿಗೆದರಿದೆ ಸುಮಲತಾ ಸ್ಪರ್ಧೆ ವದಂತಿ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿಯಲ್ಲಿ ಕುತೂಹಲ; ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡಿ ಎಂದ ಆಕಾಂಕ್ಷಿಗಳು
ಡಿ.ಎಂ.ಕುರ್ಕೆ ಪ್ರಶಾಂತ್
Published 19 ಮಾರ್ಚ್ 2024, 3:25 IST
Last Updated 19 ಮಾರ್ಚ್ 2024, 3:25 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಮಂಡ್ಯ ಸಂಸದೆ ಸುಮಲತಾ ಸ್ಪರ್ಧಿಸುತ್ತಾರೆ ಎನ್ನುವ ವದಂತಿಗಳು ಕ್ಷೇತ್ರದಲ್ಲಿ ಜೋರಾಗಿದೆ. ನವದೆಹಲಿಯಲ್ಲಿರುವ ಸುಮಲತಾ ಅವರು ಮಂಗಳವಾರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಆಗಲಿದ್ದಾರೆ. ಆ ನಂತರ ಈ ಬಗ್ಗೆ ಸ್ಪಷ್ಟ ಚಿತ್ರಣ ಹೊರ ಬೀಳುವ ಸಾಧ್ಯತೆ ಇದೆ. 

ಪಕ್ಷೇತರವಾಗಿ ಆಯ್ಕೆಯಾಗಿರುವ ಸುಮಲತಾ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರವು ಜೆಡಿಎಸ್‌ಗೆ ದೊರೆಯುವುದು ಖಚಿತ. ಅವರು ಮೈತ್ರಿ ಅಭ್ಯರ್ಥಿಯಾಗಿ ಮಂಡ್ಯದಿಂದ ಕಣಕ್ಕೆ ಇಳಿಯುವ ಸಾಧ್ಯತೆ ಇಲ್ಲ.

ಬಿಜೆಪಿ ಕೇಂದ್ರ ನಾಯಕರು ಸುಮಲತಾ ಅವರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ ಎನ್ನುತ್ತವೆ ಮೂಲಗಳು. ಆದರೆ ಸುಮಲತಾ ಸ್ಪರ್ಧೆಯ ಬಗ್ಗೆ ಇನ್ನೂ ನಿರ್ಧಾರಕೈಗೊಂಡಿಲ್ಲ. 

ಸುಮಲತಾ ಅವರು ಬಲಿಜ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಸಮುದಾಯದ ಅಂದಾಜು 1.80 ಲಕ್ಷ ಮತಗಳು ಕ್ಷೇತ್ರದಲ್ಲಿ ಇವೆ. ಅಲ್ಲದೆ ಅಂಬರೀಷ್ ಮತ್ತು ಜೆಡಿಎಸ್ ಬೆಂಬಲದ ಕಾರಣ ಒಕ್ಕಲಿಗರು ಬೆಂಬಲಿಸುವ ಸಾಧ್ಯತೆ ಇದೆ ಎನ್ನುವುದು ಬಿಜೆಪಿ ಲೆಕ್ಕಾಚಾರವಿದ್ದಂತಿದೆ. 

ಸುಮಲತಾ ಸ್ಪರ್ಧೆಯ ವದಂತಿಯನ್ನು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ನಾಯಕರು ಸ್ಪಷ್ಟವಾಗಿ ನಿರಾಕರಿಸುತ್ತಿಲ್ಲ. ಪಕ್ಷದ ವರಿಷ್ಠರತ್ತ ಕೈ ತೋರುತ್ತಿದ್ದಾರೆ. ಈ ಬೆಳವಣಿಗೆಯ ನಡುವೆಯೂ ಮಾಜಿ ಸಚಿವ ಡಾ.ಕೆ.ಸುಧಾಕರ್ ಬೆಂಬಲಿಗರು ತಮ್ಮ ನಾಯಕನಿಗೆ ಟಿಕೆಟ್ ದೊರೆಯುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ತಮ್ಮ ಪುತ್ರ ಅಲೋಕ್‌ಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸುತ್ತಿದ್ದ ಯಲಹಂಕ ಶಾಸಕ ಎಸ್‌.ಆರ್.ವಿಶ್ವನಾಥ್, ಈಗ ‘ಸ್ಥಳೀಯರಿಗೆ ಟಿಕೆಟ್ ಕೊಡಿ’ ಎನ್ನುತ್ತಿದ್ದಾರೆ. ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಕೋನಪ್ಪ ರೆಡ್ಡಿ ಸಹ ಬಿಜೆಪಿಯು ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಸುಮಲತಾ ಸ್ಪರ್ಧೆಯ ವದಂತಿಗಳು ಗರಿಗೆದರಿದಂತೆ ಹೊರಗಿನವರು ಮತ್ತು ಸ್ಥಳೀಯರು ಎನ್ನುವ ವಿಚಾರ ಬಿಜೆಪಿಯಲ್ಲಿ ಚರ್ಚೆಗೆ ಕಾರಣವಾಗಿದೆ.

ರಾಜ್ಯ ಮಟ್ಟದ ನಾಯಕರಲ್ಲಿಯೇ ಭಿನ್ನಾಭಿಪ್ರಾಯ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಇಷ್ಟೆಲ್ಲಾ ಕಗ್ಗಂಟಾಗಲು ಡಾ.ಕೆ.ಸುಧಾಕರ್ ಮತ್ತು ಎಸ್‌.ಆರ್.ವಿಶ್ವನಾಥ್ ಅವರ ನಡುವಿನ ಮುಸುಕಿನ ಗುದ್ದಾಟವೂ ಕಾರಣ ಎನ್ನಲಾಗುತ್ತಿದೆ. ಆರಂಭದಲ್ಲಿಯೇ ಟಿಕೆಟ್ ವಿಚಾರವಾಗಿ ಈ ಇಬ್ಬರು ನಾಯಕರು ಪರಸ್ಪರ ಕಾಲೆಳೆದುಕೊಂಡಿದ್ದರು. ಪ್ರತ್ಯೇಕವಾಗಿ ಸಂಘಟನೆಯಲ್ಲಿ ತೊಡಗಿದ್ದರು. 

ಬಸವರಾಜ ಬೊಮ್ಮಾಯಿ, ಆರ್.ಅಶೋಕ ಮತ್ತಿತರ ಪ್ರಮುಖರು ಡಾ.ಕೆ.ಸುಧಾಕರ್ ಪರ ನಿಲುವು ತೋರಿದರೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಮತ್ತಿತರರು ಅಲೋಕ್ ವಿಶ್ವನಾಥ್‌ ಪರ ಒಲವು ಹೊಂದಿದ್ದರು. ಹೀಗೆ ಒಮ್ಮತವಿಲ್ಲದಿರುವುದು ಸಹ ಹೊರಗಿನ ಅಭ್ಯರ್ಥಿಯತ್ತ ಹೈಕಮಾಂಡ್ ದೃಷ್ಟಿ ಹರಿಸಲು ಕಾರಣವಾಗಿದೆ ಎನ್ನಲಾಗುತ್ತಿದೆ.  

ಚಿಕ್ಕಬಳ್ಳಾಪುರದ ಸಂಪರ್ಕವಿಲ್ಲದ ಸುಮಲತಾ ಅವರು ಬಿಜೆಪಿ ಅಭ್ಯರ್ಥಿಯಾದರೆ ಯಾವ ರಾಜಕೀಯ ಆಟಗಳು ಜರುಗಲಿವೆ ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ. 

ಬದಲಾಗಲಿದೆಯೇ ಕಾಂಗ್ರೆಸ್ ಲೆಕ್ಕಾಚಾರ?

ಒಂದು ವೇಳೆ ಸುಮಲತಾ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿದರೆ ಕಾಂಗ್ರೆಸ್‌ನ ಅಭ್ಯರ್ಥಿಯ ಲೆಕ್ಕಾಚಾರಗಳು ಸಹ ಬದಲಾಗಲಿವೆಯೇ ಎನ್ನುವ ಕುತೂಹಲವಿದೆ.  ಚಿಕ್ಕಬಳ್ಳಾಪುರ 1977ರಲ್ಲಿ ಸ್ವತಂತ್ರ ಲೋಕಸಭಾ ಕ್ಷೇತ್ರವಾಗಿ ಅಸ್ತಿತ್ವ ಪಡೆಯಿತು. ಅಲ್ಲಿಂದ ಇಲ್ಲಿಯವರೆಗೆ ಎರಡು ಬಾರಿ ಒಕ್ಕಲಿಗರು ನಾಲ್ಕು ಬಾರಿ ಈಡಿಗರು ಮೂರು ಬಾರಿ ಬ್ರಾಹ್ಮಣರು ಎರಡು ಬಾರಿ ದೇವಾಡಿಗರು ಮತ್ತು ಒಮ್ಮೆ ವೈಶ್ಯ ಸಮುದಾಯದ ಅಭ್ಯರ್ಥಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಒಕ್ಕಲಿಗ ಸಮುದಾಯದ ಅಂದಾಜು 7 ಲಕ್ಷ ಮತದಾರರು ಇದ್ದರೂ ಹಿಂದುಳಿದ ವರ್ಗಗಳ ಅಭ್ಯರ್ಥಿಯೇ ಹೆಚ್ಚು ಬಾರಿ ಗೆಲುವು ಕಂಡಿದ್ದಾರೆ.  ಸದ್ಯ ಕಾಂಗ್ರೆಸ್‌ನ ಸಂಭಾವ್ಯ ಅಭ್ಯರ್ಥಿಗಳಲ್ಲಿ ರಕ್ಷಾ ರಾಮಯ್ಯ ಮುಂಚೂಣಿಯಲ್ಲಿ ಇದ್ದಾರೆ. ಇವರೂ ಬಲಿಜ ಸಮುದಾಯಕ್ಕೆ ಸೇರಿದವರು. ಒಂದು ವೇಳೆ ಬಲಿಜ ಸಮುದಾಯದ ಸುಮಲತಾ ಬಿಜೆಪಿಯಿಂದ ಸ್ಪರ್ಧಿಸಿದರೆ ಕಾಂಗ್ರೆಸ್ ಬಹುಸಂಖ್ಯೆಯಲ್ಲಿರುವ ಒಕ್ಕಲಿಗ ಅಭ್ಯರ್ಥಿಗೆ ಟಿಕೆಟ್ ನೀಡಲಿದೆಯೇ ಎನ್ನುವ ಕುತೂಹಲವಿದೆ. ಮಾಜಿ ಸಚಿವ ಎನ್‌.ಎಚ್.ಶಿವಶಂಕರ ರೆಡ್ಡಿ ‘ಒಕ್ಕಲಿಗ’ ಕೋಟಾದಲ್ಲಿ ನನಗೆ ಟಿಕೆಟ್ ನೀಡಬೇಕು ಎಂದು ಈ ಹಿಂದಿನಿಂದಲೂ ಆಗ್ರಹಿಸುತ್ತಿದ್ದಾರೆ.  2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಬಿ.ಎನ್.ಬಚ್ಚೇಗೌಡ ಗೆಲುವು ಸಾಧಿಸಲು ಒಕ್ಕಲಿಗ ಸಮುದಾಯದ ಮತಧ್ರುವೀಕರಣದ ಅಂಶವೂ ಪ್ರಮುಖವಾಗಿತ್ತು. 

‘ಚರ್ಚೆ ಆಗುತ್ತಿದೆ; ಪಕ್ಷದ ನಿರ್ಧಾರಕ್ಕೆ ಬದ್ಧ’ ‌

ಸುಮಲತಾ ಅವರನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿಸುವ  ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆದಿದೆ. ಎರಡು ಮೂರು ದಿನಗಳಲ್ಲಿ ಈ ಬಗ್ಗೆ ಸ್ಪಷ್ಟವಾದ ಚಿತ್ರಣದ ದೊರೆಯಲಿದೆ’ ಎಂದು ಬಿಜೆಪಿ ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷ ರಾಮಲಿಂಗಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.  ಪಕ್ಷವು ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧ. ಯಾರಿಗೆ ಟಿಕೆಟ್ ನೀಡಿದರೂ ಕೆಲಸ ಮಾಡುತ್ತೇವೆ. ಬಿಜೆಪಿ ಗೆಲ್ಲಿಸಬೇಕು ಎನ್ನುವುದಷ್ಟೇ ನಮ್ಮ ಗುರಿ ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT