ಭಾನುವಾರ, ಏಪ್ರಿಲ್ 18, 2021
30 °C

ಧಾರ್ಮಿಕ ಕಾರ್ಯದಿಂದ ಮನಸ್ಸಿಗೆ ನೆಮ್ಮದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ‘ಸಮಾಜದಲ್ಲಿ ಧಾರ್ಮಿಕ ಹಾಗೂ ಶೈಕ್ಷಣಿಕ ಕಾರ್ಯಗಳಿಗೆ ಸಹಕಾರ ನೀಡುವ ಮೂಲಕ ಜನರಲ್ಲಿ ಸಾಮರಸ್ಯ ಬೆಸೆಯುವ ಜತೆಗೆ ಭಕ್ತಿ ಭಾವನೆ ಬೆಳೆಸಿ ಮಾನಸಿಕ ನೆಮ್ಮದಿ ಮೂಡಿಸಬೇಕಿದೆ’ ಎಂದು ಮುಖಂಡ ಜಕ್ಕೇನಹಳ್ಳಿ ಆರ್. ವೆಂಕಟಾಚಲ ಹೇಳಿದರು.

ತಾಲ್ಲೂಕಿನ ಇಡಗೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶನಿ ದೇವರ ದೇವಾಲಯದ ಅಭಿವೃದ್ಧಿ ಕಾರ್ಯಕ್ಕೆ ₹ 50 ಸಾವಿರ ದೇಣಿಗೆ ನೀಡಿ ಅವರು ಮಾತನಾಡಿದರು.

ಕೊರೊನಾದಿಂದಾಗಿ ದೇಶದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಧಾರ್ಮಿಕ ಕೇಂದ್ರಗಳು ಕೂಡ ಆದಾಯವಿಲ್ಲದೆ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿವೆ. ಗ್ರಾಮೀಣ ‌ಭಾಗದ ದೇವಾಲಯಗಳ ನಿರ್ಮಾಣದಿಂದ ಹಿಂದೂ ಸಂಪ್ರದಾಯ, ಸಾಂಸ್ಕೃತಿಕ, ಪರಂಪರೆಯನ್ನು ಉಳಿಸಿ ಬೆಳೆಸಲು ಸಾಧ್ಯ ಎಂದರು.

ಗ್ರಾಮಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಮೂಲಕ ಜನರಲ್ಲಿ ಸಾಮರಸ್ಯ ಮೂಡಿಸಬೇಕಾದರೆ ಪುರಾತನ ದೇವಾಲಯಗಳನ್ನು ಸಂರಕ್ಷಣೆ ಮಾಡುವುದು ಅಗತ್ಯವಾಗಿದೆ. ದೇವಾಲಯಗಳು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳ ತಾಣವಾಗಿದ್ದು, ಅವುಗಳನ್ನು ಉತ್ತಮ ಸ್ಥಿತಿಯಲ್ಲಿ ಇರಿಸಿಕೊಳ್ಳುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯ ಜಿ. ಸೋಮಯ್ಯ ಮಾತನಾಡಿ, ಸ್ಥಳೀಯ ದಾನಿಗಳ ನೆರವಿನಿಂದ ದೇವಾಲಯದ ಅಭಿವೃದ್ಧಿ ಕೆಲಸಗಳನ್ನು ನಡೆಸಲಾಗುವುದು. ಇದರಿಂದ ಗ್ರಾಮದ ಜನರಲ್ಲಿ ಸೋದರತ್ವ ಭಾವನೆ ಮೂಡಿಸಿ ಎಲ್ಲರಲ್ಲೂ ಒಮ್ಮತದ ವಾತಾವರಣ ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ ಎಂದರು.

ಗ್ರಾಮ ಪಂಚಾಯತಿ ಸದಸ್ಯರಾದ ನಾಗರಾಜ್ ಬಡಗಿ, ಸುಬ್ಬಣ್ಣ, ಶಂಕರ್, ಮುಖಂಡರಾದ ಈಶ್ವರಪ್ಪ, ಕೆಇಬಿ ಮಂಜು, ಬಸವರಾಜು, ಅಶ್ವತ್ಥ ರೆಡ್ಡಿ, ಶಿವಶಂಕರ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.