ಶುಕ್ರವಾರ, ಫೆಬ್ರವರಿ 28, 2020
19 °C
‘ಪ್ರಜಾವಾಣಿ’ – ‘ಡೆಕ್ಕನ್ ಹೆರಾಲ್ಡ್‌’ ಆಯೋಜನೆ. ಯುನಿಕ್‌ ಶಾಲೆ, ಕೋಚಿಮುಲ್‌, ಕೆನರಾ ಬ್ಯಾಂಕ್‌, ಬಿಜಿಎಸ್‌ ಶಾಲೆ ಸಹಯೋಗದಲ್ಲಿ ‘ಚಿತ್ರಕಲಾ ಸ್ಪರ್ಧೆ’

‘ಕಲಿತಿದ್ದು ಅಂಗೈಯಷ್ಟು, ಕಲಿಯಬೇಕಾದ್ದು ಆಕಾಶದಷ್ಟು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ವಿದ್ಯಾರ್ಥಿಗಳು ಪಠ್ಯದೊಂದಿಗೆ ಕಲೆ, ಸಂಗೀತ, ನೃತ್ಯದಂತಹ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳುಬೇಕು. ಅವುಗಳು ಸದಾಕಾಲ ನಿಮ್ಮ ಜೊತೆ ಇರುತ್ತವೆ’ ಎಂದು ಬಿಜಿಎಸ್‌ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಎನ್‌. ಶಿವರಾಮರೆಡ್ಡಿ ಕಿವಿಮಾತು ಹೇಳಿದರು.

ನಗರದ ಹೊರವಲಯದ ಅಗಲಗುರ್ಕಿ ಬಿಜಿಎಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ‘ಸ್ಪರ್ಧೆಯಲ್ಲಿ ಸೋಲು–ಗೆಲುವು ಮುಖ್ಯವಲ್ಲ. ಆದರೆ, ಸ್ಪರ್ಧಿಸುವುದು ಮತ್ತು ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವುದು ಬಹಳ ಮುಖ್ಯ. ನಾವು ಗೆಲ್ಲಲೇಬೇಕು ಎಂಬ ಆಹಂ ಇರಬಾರದು. ಒಂದು ಅವಕಾಶ ಎಂದು ಭಾವಿಸಬೇಕು’ ಎಂದು ಹೇಳಿದರು.

ಶಿಕ್ಷಣದಿಂದ ಬದುಕು ಸ್ವಾವಲಂಬಿಯಾಗಬೇಕು ಹಾಗೂ ಶುದ್ದವಾದ ಚಾರಿತ್ರ್ಯ ನಿರ್ಮಾಣವಾಗಬೇಕು. ವಿದ್ಯಾರ್ಥಿ ಜೀವನ ಅಮೂಲ್ಯವಾದುದು. ಬದಲಾವಣೆಗಳನ್ನು ಮಾಡಿಕೊಂಡು ಪರಿ ಪೂರ್ಣತೆ ಸಾಧಿಸಬೇಕು. ವಿದ್ಯಾರ್ಥಿಗಳು ಕಲಿತಿರುವುದು ಅಂಗೈಯಷ್ಟು, ಕಲಿಯಬೇಕಾದ್ದು ಆಕಾಶದಷ್ಟಿದೆ. ಜಿಲ್ಲೆಯ ಎಲ್ಲಾ ಶಾಲೆಗಳ ಮಕ್ಕಳು ನಮ್ಮ ಕ್ಯಾಂಪಸ್‌ಗೆ ಬಂದಿರುವುದು ಸಂತಸ ಮೂಡಿಸಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಲಾ ಅವರು ‘ಚಿತ್ರಕಲೆ ಪ್ರಾಚೀನ ಕಾಲದಿಂದಲ್ಲೂ ತನ್ನದೇ ಆದ ಪ್ರಮುಖ್ಯತೆಯನ್ನು ಒಳಗೊಂಡಿದೆ. ಆದೇ ರೀತಿ ಕರ್ನಾಟಕದ ಮಟ್ಟಿಗೆ ಕಲಾ ಕ್ಷೇತ್ರದಲ್ಲಿ ಮೈಸೂರು ಮೂಲದ ಖ್ಯಾತ ಕಲಾವಿದರಾದ ವೆಂಕಟಪ್ಪನವರ ಕೊಡುಗೆ ಆಪಾರವಾಗಿದೆ’ ಎಂದು ಸ್ಮರಿಸಿದರು.

ಚಿತ್ರಕಲೆ ಬಿಡಿಸುವುದರಿಂದ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಕ್ರಿಯಾತ್ಮಕ ಮತ್ತು ಕುತೂಹಲ ಮನೋಭಾವ ಬೆಳೆಯುತ್ತದೆ. ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಬಹುದು ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಗಳ ವಿಶೇಷತೆಗಳ ಕುರಿತು ಮಾತನಾಡಿದ ಪತ್ರಿಕೆಯ ಉಪ ಪ್ರಧಾನ ವ್ಯವಸ್ಥಾಪಕ ಜಗನ್ನಾಥ ಜೋಯಿಸ್ ಮಾತನಾಡಿ, ‘ಇತರೆ ಪತ್ರಿಕೆಗಳಿಗಿಂತ ಪ್ರಜಾವಾಣಿ ಪತ್ರಿಕೆಯಲ್ಲಿ ಶಿಕ್ಷಣ ಹಾಗೂ ಕ್ರೀಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ’
ಎಂದರು.

ಸ್ಪರ್ಧೆಯಲ್ಲಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ‘ರಾಷ್ಟ್ರೀಯ ಹಬ್ಬ’ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ‘ಸ್ಮಾರ್ಟ್‌ಸಿಟಿ’ ವಿಷಯದ ಕುರಿತು ಚಿತ್ರ ಬಿಡಿಸುವಂತೆ ತಿಳಿಸಲಾಗಿತ್ತು. ಜಿಲ್ಲೆಯ ವಿವಿಧೆಡೆಯಿಂದ ಭಾಗವಹಿಸಿದ್ದ ಮಕ್ಕಳು ತಮಗೆ ನೀಡಿದ ವಿಷಯಗಳಿಗೆ ತಮ್ಮ ಕಲ್ಪನೆಯಂತೆ ಬಣ್ಣ
ತುಂಬಿದರು.

35 ಶಾಲೆಗಳ 450 ವಿದ್ಯಾರ್ಥಿಗಳು

ಸ್ಪರ್ಧೆಯಲ್ಲಿ ಚಿಕ್ಕಬಳ್ಳಾಪುರ – ಕೋಲಾರ ಎರಡು ಜಿಲ್ಲೆಗಳ 35 ಶಾಲೆಗಳ 450 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಿಜಿಎಸ್ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ವಿವಿಧ ಪೋಷಾಕು ತೊಟ್ಟ ಮಕ್ಕಳ ಸಮುಹವೇ ಕಂಡು ಬಂದಿತು. ಬಿಜಿಎಸ್ ಕ್ಯಾಂಪಸ್‌ ಸುತ್ತ ಸುತ್ತಾಡಿ ಸಂತಸಪಟ್ಟರು.

ಪ್ರಶಸ್ತಿ ವಿಜೇತರು ಕಿರಿಯರ ವಿಭಾಗ

l ವೈಷ್ಣವಿ (ಪ್ರಥಮ), ಯುನಿಕ್ ಇಂಟರ್‌ನ್ಯಾಷನಲ್‌ ಸ್ಕೂಲ್‌, ಮಾಲೂರು.
l ದರ್ಶನ್‌.ಕೆ.ರೆಡ್ಡಿ (ದ್ವಿತೀಯ), ಬಿಜಿಎಸ್‌ ಪಬ್ಲಿಕ್‌ ಸ್ಕೂಲ್‌, ಬಾಗೇಪಲ್ಲಿ.
l ವರ್ಷಿಣಿ (ತೃತೀಯ), ಸರ್ಕಾರಿ ಪ್ರೌಢ ಶಾಲೆ, ಅಂಗರೇಖನಹಳ್ಳಿ.

ಹಿರಿಯರ ವಿಭಾಗ
l ಕಾವ್ಯಶ್ರೀ (ಪ್ರಥಮ), ಬಿಜಿಎಸ್, ಇಂಗ್ಲೀಷ್‌ ಸ್ಕೂಲ್‌, ಅಗಲಗುರ್ಕಿ
l ಹರಿಕಾ(ದ್ವಿತೀಯ), ಯುನಿಕ್ ಇಂಟರ್‌ನ್ಯಾಷನಲ್‌ ಸ್ಕೂಲ್, ಮಾಲೂರು.
lರವಿತೇಜ(ತೃತೀಯ), ಸರ್ಕಾರಿ ಬಾಲಕರ ಪ್ರೌಢ ಶಾಲೆ, ಗುಡಿಬಂಡೆ.

ಸಮಾಧಾನಕರ ಬಹುಮಾನ

ಕಿರಿಯರ ವಿಭಾಗದಲ್ಲಿ ದೇವರಗುಡಿಪಲ್ಲಿಯ ಅದರ್ಶ ವಿದ್ಯಾಲಯದ ಕಲ್ಪನಾ ಕೆ.ಎಂ. ಹಾಗೂ ಬಿಜಿಎಸ್‌ ವರ್ಲ್ಡ್ ಸ್ಕೂಲ್‌ನ ಪ್ರಣವಿ ಹಾಗೂ ಹಿರಿಯರ ವಿಭಾಗದಲ್ಲಿ ಆಕರ್ಷಾ ವಿದ್ಯಾಲಯದ ಕೆ.ಎಂ. ವರಲಕ್ಷ್ಮೀ ಹಾಗೂ ಆರುಣ್‌. ಇ. ಸಮಾಧಾನಕರ ಬಹುಮಾನಕ್ಕೆ ಭಾಜನರಾದರು. ಅಲ್ಲದೆ, ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು.

‘ಪ್ರತಿಭೆಗಳನ್ನು ಗುರುತಿಸುವ ಕೆಲಸ’

ಸಾಮಾಜಿಕ ಜವಾಬ್ದಾರಿ ಇಟ್ಟುಕೊಂಡು ಗ್ರಾಮೀಣ ಪದೇಶದ ಪ್ರತಿಭೆಗಳನ್ನು ಗುರುತಿಸಿ ಉತ್ತೇಜನ ನೀಡುವುದರ ಜೊತೆಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ‘ಪ್ರಜಾವಾಣಿ’ ಪತ್ರಿಕೆ ಪರಿಚಯಿಸುತ್ತಿರುವುದಕ್ಕೆ ಸಂತಸ ತಂದಿದೆ ಎಂದು ಸಾರ್ವಜನಿಕ ಶಿಕ್ಷಣ ಸಂಸ್ಥೆ ಉಪ ನಿರ್ದೇಶಕ (ಡಿಡಿಪಿಐ) ಎಸ್.ಜಿ.ನಾಗೇಶ್‌ ತಿಳಿಸಿದರು.

ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ‘ಮನಸ್ಸಿನಲ್ಲಿರುವ ಭಾವನೆಗಳನ್ನು ಚಿತ್ರಗಳ ರೂಪದಲ್ಲಿ ಬಿಡಿಸಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಿರುವ ಮಕ್ಕಳ ಉತ್ಸಹವನ್ನು ನೋಡಿದರೆ ಖುಷಿಯಾಗುತ್ತದೆ’ ಎಂದು ಹೇಳಿದರು.

‘ನೆನಪಿನ ಶಕ್ತಿ ವೃದ್ಧಿಗೆ ನಂದಿನಿ ಹಾಲು ಉಪಯುಕ್ತ’

ನಂದಿನಿ ಹಾಲು ಕುಡಿದರೆ ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಮಕ್ಕಳಲ್ಲಿ ಪೌಷ್ಠಿಕಾಂಶ ಕೊರತೆ ನಿವಾರಿಸಿ ಉದ್ದೇಶದಿಂದ ಸರ್ಕಾರದ ವತಿಯಿಂದ ಮಕ್ಕಳಿಗೆ ಉಚಿತವಾಗಿ ಹಾಲನ್ನು ಕೊಡಲಾಗುತ್ತಿದೆ ಎಂದು ಕೋಲಾರ– ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್) ಉಪ ವ್ಯವಸ್ಥಾಪಕ ಪಾಪೇಗೌಡ ಹೇಳಿದರು.

ಕಾರ್ಯಕ್ರಮದಲ್ಲಿ ಯೂನಿಕ್‌ ಇಂಟರ್‌ನ್ಯಾಷನಲ್ ಸ್ಕೂಲ್‌ನ ಮಂಜುನಾಥ್, ಕೋಚಿಮುಲ್‌ನ ವೆಂಕಟೇಶ್, ಕೆನರಾ ಬ್ಯಾಂಕ್‌ ವ್ಯವಸ್ಥಾಪಕ ಬಸವರಾಜ್ ವೇದಿಕೆ ಹಂಚಿಕೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು