ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನಶ್ಚೇತನಕ್ಕೆ ಕಾಯುತ್ತಿವೆ ಅರವಟ್ಟಿಗೆಗಳು

ಬೇಸಿಗೆ ಸನಿಹ; ದಾಹ ತೀರಿಸುವ ತಾಣಗಳ ಅಭಿವೃದ್ಧಿಗೆ ನಾಗರಿಕರ ಆಗ್ರಹ
Last Updated 15 ಫೆಬ್ರುವರಿ 2021, 7:21 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಸಮಾಜ ಯಾವಾಗಲೂ ತನಗಾಗಿ ಚಿಂತಿಸುವವರನ್ನು ಮತ್ತು ಶ್ರಮಿಸುವವರನ್ನು ಸ್ವಾಗತಿಸುತ್ತಲೇ ಇರುತ್ತದೆ. ಅವರ ಕಾರ್ಯಗಳನ್ನು ಸಾಂದರ್ಭಿಕವಾಗಿ ನೆನೆಸಿಕೊಳ್ಳುತ್ತಲೇ ಇರುತ್ತದೆ. ಹಾಗಾಗಿಯೇ ಇವತ್ತು ದಾರಿಯುದ್ದಕ್ಕೂ ಮರಗಳನ್ನು ನೆಟ್ಟ, ಹಾದಿಬದಿಯಲ್ಲಿ ನೀರಿನ ಆಸರೆ ಒದಗಿಸಿದ, ದೇವನಾಂಪ್ರಿಯ ಎಂದೆನಿಸಿಕೊಂಡ ಅಶೋಕನ ಬಗ್ಗೆ ನೆನಪಿಸಿಕೊಳ್ಳಲಾಗುತ್ತದೆ.

ಈ ಸಮಾಜ ಉಪಯೋಗಿ ಕಾರ್ಯಗಳಲ್ಲಿ ನೀಡುವಂತಹ ದಾನಗಳಲ್ಲಿ, ಮಾಡಿಕೊಡುವ ಅನುಕೂಲಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೂ ಒಂದು. ಅದರಲ್ಲೂ ಬೇಸಿಗೆ ಬಂತೆಂದರೆ ಈ ಕುಡಿಯುವ ನೀರಿನ ಅಗತ್ಯ, ಅದಲ್ಲೂ ಇತ್ತೀಚಿನ ದಿನಗಳಲ್ಲಿ ಶುದ್ಧ ಕುಡಿಯುವ ನೀರಿನ ಅಗತ್ಯ ಬಹಳವಿದೆ.

ಬಹಳ ಹಿಂದೆ ಪಾದಚಾರಿಗಳಿಗೆ ಅಥವಾ ಭೂ ಸಾರಿಗೆಯನ್ನು ಬಳಸಿಕೊಂಡು ಸಂಚರಿಸುವವರಿಗೆ ಹೆಚ್ಚು ಉಪಯೋಗಕ್ಕೆ ಬಂದು ದಾಹ ತೀರಿಸುತ್ತಿದ್ದುದು ಅರವಟ್ಟಿಗೆಗಳು. ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಇದನ್ನು ಸಲೀಂದ್ರಮು ಅಂತ ಕರೆಯುತ್ತಾರೆ. ಇವು ಕುಡಿಯುವ ನೀರನ್ನು ಒದಗಿಸಿ, ದಾಹವನ್ನು ತೀರಿಸುತ್ತಿದ್ದವು. ಅಬಾಲವೃದ್ಧರಾದಿಯಾಗಿ ಇದನ್ನು ಬಳಸುತ್ತಿದ್ದರು. ಕೆಲವು ಸ್ವಯಂಸೇವಕರು ತೊಟ್ಟಿ ಆಕಾರದ ಅರವಟ್ಟಿಗೆಯನ್ನು ಪಾಚಿ ಕಟ್ಟದಂತೆ, ನೀರು ಕೊಳೆಯದಂತೆ ತೊಳೆದು ಹೊಸ ನೀರನ್ನು ತುಂಬುತ್ತಿದ್ದರು.

ಜಿಲ್ಲೆಯಲ್ಲಿ ಹಿಂದೆ ಕಟ್ಟಿದ್ದ ಅರವಟ್ಟಿಗೆಗಳ ಪಳೆಯುಳಿಕೆಗಳನ್ನು ಈಗಲೂ ಹಲವೆಡೆ ನಾವು ಕಾಣಬಹುದಾಗಿದೆ. ಚಿಕ್ಕಬಳ್ಳಾಪುರ ಶಿಡ್ಲಘಟ್ಟ ರಸ್ತೆಯಲ್ಲಿ ಅಭಯ ಆಂಜನೇಯಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಒಂದು ಹಳೆಯದಾದ ಅರವಟ್ಟಿಗೆ ಇವತ್ತಿಗೂ ‘ನನ್ನನ್ನು ಬಳಸಿಕೊಳ್ಳಿ’ ಎಂದು ಮೌನವಾಗಿ ಕರೆಯನ್ನು ಕೊಡುತ್ತಾ ನಿಂತಿದೆ. ತುಂಬ ಸುಭದ್ರವಾಗಿ ಇದು ಕಟ್ಟಲ್ಪಟ್ಟಿದೆ. ಸೈಜು ಕಲ್ಲುಗಳಿಂದ ದಿಂಡನ್ನು ಕಟ್ಟಿ, ಅದರ ಮೇಲೆ ಅರವಟ್ಟಿಗೆಯನ್ನ ನಿಲ್ಲಿಸಿದ್ದಾರೆ. ಆದರೆ ಇದು ಉಪಯುಕ್ತ ರಹಿತವಾಗಿದೆ. ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ಹಾಗೂ ಇತರೆಡೆ ನೀರಿನ ಬರದಿಂದಾಗಿ ಅರವಟ್ಟಿಗೆಗಳು ತಮ್ಮ ಉಪಯೋಗವನ್ನು ಹಾಗೂ ಅಸ್ತಿತ್ವವನ್ನು ಕಳೆದುಕೊಂಡಿವೆ.

ಹಿಂದೆ ಅರವಟ್ಟಿಗೆಗಳಿಂದ ಹೊರ ಚೆಲ್ಲುವ ನೀರನ್ನು ಸಣ್ಣ ಕಾಲುವೆ ಮಾಡಿ ಚಿಕ್ಕದಾಗಿ ಹಳ್ಳದಲ್ಲಿ ನಿಲ್ಲುವಂತೆ ಮಾಡಿರುತ್ತಿದ್ದರು. ಸಂಜೆ ಅಥವಾ ರಾತ್ರಿಯ ವೇಳೆ ಆಸುಪಾಸಿನಲ್ಲಿ ವಾಸಿಸುವ ಪ್ರಾಣಿ ಪಕ್ಷಿಗಳು ನಿರಾತಂಕವಾಗಿ ನೀರನ್ನು ಕುಡಿಯಲು ಅನುಕೂಲವಾಗುತ್ತಿತ್ತು.

ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಗ್ರಾಮ ಪಂಚಾಯಿತಿಗಳು ಅರವಟ್ಟಿಗೆಯ ಸಂಸ್ಕೃತಿಯನ್ನು ಮತ್ತೆ ತರುವುದು, ಅದಕ್ಕೆ ಗ್ರಾಮಗಳಲ್ಲಿ ನೀರು ಪೂರೈಕೆಯಾಗುವ ಪದ್ಧತಿಯನ್ನೇ ಅನುಸರಿಸಿದರೆ ಉತ್ತಮ. ಮನಸ್ಸಿದ್ದರೆ ಮಾರ್ಗವಿದೆ. ಇದು ಅರವಟ್ಟಿಗೆ ಮಾತ್ರವಲ್ಲ, ನಾವು ಕಳೆದುಕೊಂಡಿರುವ ಇಂತಹ ಸಮಾಜಮುಖಿಯಾದ ಕಾರ್ಯಗಳು ಪುನರುಜ್ಜೀವನಗೊಳ್ಳಲಿ ಎಂಬ ಮಾತು ಎಲ್ಲೆಡೆಯೂ ಕೇಳಿ ಬರುತ್ತಿದೆ.

‘ಈ ಅರವಟ್ಟಿಗೆಗಳನ್ನು ಇವತ್ತು ಉಳಿಸಿಕೊಳ್ಳಬೇಕಿದೆ. ಹೆದ್ದಾರಿಗಳು ನಿರ್ಮಾಣವಾಗುತ್ತಿದ್ದಂತೆ ಸಾಲು ಮರಗಳು ಕೂಡ ತಮ್ಮ ಪ್ರಾಣವನ್ನು ಕಳೆದುಕೊಂಡು ರಸ್ತೆಯ ಎರಡೂ ಬದಿ ಬಯಲಾಗಿದೆ. ಹಾಗಾಗಿ ಬಿಸಿಲು ನೇರವಾಗಿ ಪ್ರಯಾಣಿಕರ ಮೇಲೆ ಬೀಳುತ್ತಿದೆ. ಬೇಸಿಗೆಯ ಕಾಲದಲ್ಲಿ ದಾಹವೂ ಇರುವುದರಿಂದ ಇಲ್ಲಿ ಅರವಟ್ಟಿಗೆಗಳನ್ನು ನಿರ್ಮಿಸಿ ನಿರ್ವಹಿಸುವುದರಿಂದ ಅಳಿದು ಹೋಗುತ್ತಿರುವ ಸಂಸ್ಕೃತಿಯೊಂದರ ಪುನರ್ ಸ್ಥಾಪಿಸಿದಂತಾಗುತ್ತದೆ’ ಎಂದು ಗ್ರಾಮಾಂತರ ಪ್ರದೇಶದ ಹಿರಿಯರು ಅಭಿಪ್ರಾಯಪಡುತ್ತಾರೆ.

ಸ್ಥಳೀಯರಿಂದ ಹೊಸ ರೂಪ

ಚಿಕ್ಕಬಳ್ಳಾಪುರ ನಗರದಲ್ಲಿ ಕೆಲವರು ಅರವಟ್ಟಿಗೆಯೊಂದನ್ನು ಪುನರುಜ್ಜೀವಗೊಳಿಸಿದ್ದಾರೆ. ನಗರದ ಗಂಗಮ್ಮನ ಗುಡಿ ದೇವಾಲಯ ರಸ್ತೆಯಲ್ಲಿ ಕನ್ನಡ ರಕ್ಷಣಾ ವೇದಿಕೆ ಮತ್ತು ಸ್ಥಳೀಯರು ಕೂಡಿಕೊಂಡು ಅರವಟ್ಟಿಗೆಗೆ ಹೊಸ ರೂಪ ಕೊಟ್ಟಿದ್ದಾರೆ. ಈ ಬೀದಿಯ ಅಂಗಡಿಗಳವರು ಹಾಗೂ ವಿವಿಧ ದೇವಸ್ಥಾನಗಳಿಗೆ ಹೋಗಿ ಬರುವವರಿಗೆ ಶುಚಿತ್ವಕ್ಕೆ ಹಾಗೂ ಕುಡಿಯಲು ಇದರ ನೀರು ತುಂಬ ಬಳಕೆಯಾಗುತ್ತಿದೆ.

ನಗರಸಭೆಯವರು ನೀರು ಬಿಡದಿದ್ದ ದಿನಗಳಲ್ಲಿ ಕೆಲವು ಮನೆಗಳವರು ಸಹ ಇಲ್ಲಿಂದ ನೀರು ತೆಗೆದುಕೊಂಡು ಹೋಗುತ್ತಾರೆ. ಈ ಅರವಟ್ಟಿಗೆ ಬಹುಪಯೋಗಿಯಾಗಿದ್ದು, ತಾಲ್ಲೂಕಿನಲ್ಲಿರುವ ಎಲ್ಲ ಅರವಟ್ಟಿಗೆಗಳನ್ನು ಇದೇ ರೀತಿ ಪುನರುಜ್ಜೀವನಗೊಳಿಸಬೇಕು ಎಂಬುದು ಸ್ಥಳೀಯರಾದ ರಾಜೇಶ್‌, ರಮೇಶ್‌, ಕೃಷ್ಣ ಅವರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT