ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಮಾರ್ಚ್ 13 ರಂದು ‘ಗ್ರಾಮ ನ್ಯಾಯಾಲಯ’ಗಳಿಗೆ ಚಾಲನೆ

ರಾಜ್ಯದಲ್ಲಿಯೇ ಮೊದಲ ಬಾರಿಗೆ ಎರಡು ಕಡೆಗಳಲ್ಲಿ ಸ್ಥಾಪನೆ
Last Updated 11 ಮಾರ್ಚ್ 2020, 19:35 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ರಾಜ್ಯದಲ್ಲೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಡಿಕಲ್ಲು ಹೋಬಳಿ ಹಾಗೂ ಗೌರಿಬಿದನೂರು ತಾಲ್ಲೂಕಿನ ಹೊಸೂರು ಹೋಬಳಿ ವ್ಯಾಪ್ತಿಯಲ್ಲಿ ಗ್ರಾಮ ನ್ಯಾಯಾಲಯಗಳನ್ನು ಪ್ರಾರಂಭಿಸಲಾಗುತ್ತಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಅಮರನಾರಾಯಣ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮನೆ ಬಾಗಿಲಲ್ಲೇ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹಾಗೂ ಜನರ ಹಂತದಲ್ಲೇ ಸಂಪೂರ್ಣ ನ್ಯಾಯದಾನ ಮಾಡುವ ಉದ್ದೇಶದಿಂದ 2008ರಲ್ಲಿ ಗ್ರಾಮ ನ್ಯಾಯಾಲಯ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಈ ಕಾಯ್ದೆಯ ಅನ್ವಯ ನಾಗರಿಕನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ತನ್ನ ಹಕ್ಕಿನಿಂದ ವಂಚಿತನಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇದರ ಗುರಿಯಾಗಿದೆ’ ಎಂದು ತಿಳಿಸಿದರು.

‘ಕಾನೂನಿನ ಮುಂದೆ ಎಲ್ಲರೂ ಸಮಾನರು. ಜನಸಾಮಾನ್ಯನು ಕಾನೂನಿನ ಸವಲತ್ತುಗಳನ್ನು ಪಡೆಯಬೇಕು. ಅಲ್ಲದೆ, ಪ್ರಕರಣಗಳ ವಿಚಾರವಾಗಿ ಕಕ್ಷಿದಾರರು ನ್ಯಾಯಾಲಯಗಳಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಗ್ರಾಮ ನ್ಯಾಯಾಲಯವನ್ನು ಪ್ರಾಥಮಿಕವಾಗಿ ಮಂಡಿಕಲ್ಲಿನಲ್ಲಿರುವ ಕರ್ನಾಟಕ ಪಬ್ಲಿಕ್ ಕಾಲೇಜು ಹಾಗೂ ಹೊಸೂರಿನಲ್ಲಿರುವ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಪ್ರಾರಂಭಿಸಲಾಗುತ್ತಿದ್ದು, ಜನರು ಈ ನ್ಯಾಯಾಲಯಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

‘ನ್ಯಾಯಾಲಯಕ್ಕೆ ನೇಮಕಗೊಳ್ಳುವ ನ್ಯಾಯಾಧೀಶರನ್ನು ನ್ಯಾಯಾಧಿಕಾರಿ ಎಂದು ಕರೆಯಲಾಗುತ್ತದೆ. ನ್ಯಾಯಾಧಿಕಾರಿಯನ್ನು ಜಿಲ್ಲಾ ಮಟ್ಟದ ನ್ಯಾಯಾಧೀಶರು ನೇಮಕ ಮಾಡುವ ಅಧಿಕಾರ ಹೊಂದಿರುತ್ತಾರೆ. ಗ್ರಾಮ ನ್ಯಾಯಾಲಯದಲ್ಲಿ ₹50 ಸಾವಿರದ ಒಳಗಿನ ದಂಡಕ್ಕೆ ಒಳಪಟ್ಟ ಸಿವಿಲ್ ಪ್ರಕರಣಗಳು, ₹20 ಸಾವಿರ ದಂಡಕ್ಕೆ ಒಳಪಟ್ಟ ಕಳ್ಳತನ ಪ್ರಕರಣಗಳು, 2 ವರ್ಷಗಳ ಕಾಲ ಜೈಲುವಾಸ ಪ್ರಕರಣಗಳು, ಕೌಟುಂಬಿಕ ಕಲಹ ಪ್ರಕರಣಗಳನ್ನು ವಿಚಾರಣೆ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT