ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಬಿಸಿಲಿಗೆ ಉದುರುತ್ತಿವೆ ಮಾವಿನ ಹೀಚು

Published 11 ಏಪ್ರಿಲ್ 2024, 7:51 IST
Last Updated 11 ಏಪ್ರಿಲ್ 2024, 7:51 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬಿಸಿಲಿಗೆ ಜಿಲ್ಲೆಯ ಮಾವು ಬೆಳೆಗಾರರು ತತ್ತರಿಸಿದ್ದಾರೆ. ಮಾವಿನ ತೋಟಗಳಲ್ಲಿನ ಹೂ ಮತ್ತು ಹೀಚುಗಳು ಉದುರುತ್ತಿವೆ. ಈ ಪರಿಣಾಮ ಈ ಬಾರಿ ಮಾವಿನ ಇಳುವರಿ ಕುಂಠಿತಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಕಾಯಿ ಕಚ್ಚುವ ಹಂತದಲ್ಲಿ ಬೇಸಿಗೆಯ ತಾಪ ವಿಪರೀತವಾದ ಕಾರಣಕ್ಕೆ ಹೂವು ಮತ್ತು ಹೀಚುಗಳು ನೆಲ ಕಚ್ಚುತ್ತಿವೆ. ಕೆಲವೆಡೆ ಈಚು ಹಾಗೂ ಸಣ್ಣ ಗಾತ್ರದ ಕಾಯಿಗಳೂ ಉದುರುತ್ತಿವೆ. ಬಿಸಿಲು ಹೆಚ್ಚಿದಷ್ಟೂ ಬೆಳೆಗೆ ಹಾನಿಯಾಗುವ ಸಾಧ್ಯತೆ ಇದೆ. 

ಸದ್ಯ ಮಾವಿನ ತೋಟಗಳಿಗೆ ನೀರಿನ ಕೊರತೆ ವಿಪರೀತವಾಗಿದೆ. ನೀರಾವರಿ ಸೌಲಭ್ಯ ಹೊಂದಿರುವ ಕೆಲವು ರೈತರು ಕೃಷಿ ಪಂಪ್‌ಸೆಟ್‌ಗಳ ಮೂಲಕ ವಾರಕ್ಕೆ ಒಮ್ಮೆ ನೀರು ಹಾಯಿಸತೊಡಗಿದ್ದಾರೆ. ಕೆಲವು ಕಡೆ ಟ್ಯಾಂಕರ್‌ ಮೂಲಕವೂ ಮರಗಳಿಗೆ ನೀರುಣಿಸುವ ಪ್ರಯತ್ನಗಳೂ ನಡೆದಿವೆ. ಆದರೂ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಸಿಗುವುದು ಅನುಮಾನವಾಗಿದೆ.

ಸಾಮಾನ್ಯವಾಗಿ ಡಿಸೆಂಬರ್ ಕೊನೆಯ ವಾರದಿಂದ ಮರಗಳು ಹೂ ಬಿಡಲು ಆರಂಭಿಸು‌‌ತ್ತವೆ. ಜನವರಿಯಲ್ಲಿ ಬಂಗಾರದ ಬಣ್ಣ ಸೂಸುವ ಹೂಗಳಿಂದ ಮೈದುಂಬಿಕೊಳ್ಳುತ್ತವೆ. ಮಾರ್ಚ್, ಏಪ್ರಿಲ್‌ನಲ್ಲಿ ಕಾಯಿ ಕಟ್ಟುತ್ತವೆ.

ಚಿಕ್ಕಬಳ್ಳಾಪುರ ಜಿಲ್ಲೆಗಳ ಮಾವನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ಜಿಲ್ಲೆಯ ಚಿಂತಾಮಣಿ ಹಾಗೂ ಕೋಲಾರ ಜಿಲ್ಲೆಯಲ್ಲಿ ಶ್ರೀನಿವಾಸಪುರ ತಾಲ್ಲೂಕು ರಾಜ್ಯದಲ್ಲಿಯೇ ಹೆಚ್ಚು ಮಾವು ಬೆಳೆಯುವ ಪ್ರದೇಶಗಳು ಎನಿಸಿವೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂದಾಜು 9,881 ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗುತ್ತದೆ. ಚಿಂತಾಮಣಿ ತಾಲ್ಲೂಕಿನಲ್ಲಿ 7,222 ಹೆಕ್ಟೇರ್ ಪ್ರದೇಶದಲ್ಲಿ ಹಣ್ಣುಗಳ ರಾಜನನ್ನು ಉತ್ಪಾದಿಸಲಾಗುತ್ತದೆ. ಚಿಂತಾಮಣಿಯಿಂದ ವಿದೇಶಗಳಿಗೂ ಮಾವು ರಫ್ತು ಆಗುತ್ತದೆ.

ಈ ವರ್ಷ ಜಿಲ್ಲೆಯಲ್ಲಿ ಶೇ 70 ರಷ್ಟು ಮರಗಳಲ್ಲಿ ಮಾವು ಹೂ ಬಿಟ್ಟು ಕಾಯಿ ಕಟ್ಟಿದ್ದವು. ಹೆಚ್ಚಿನ ಫಸಲು ದೊರೆಯುತ್ತದೆ ಎನ್ನುವ ನಿರೀಕ್ಷೆ ರೈತರದ್ದಾಗಿತ್ತು. ಆದರೆ ಬಿರು ಬಿಸಿಲಿಗೆ ಮರಗಳು ತತ್ತರಿಸುತ್ತವೆ. ಹೀಚುಗಳು ಉದುರುತ್ತಿವೆ.

ರೈತರು ಗಿಡಗಳಿಗೆ ಪಾತಿ, ಗೊಬ್ಬರ, ಹೂವು ಬಿಡುವ ಸಂದರ್ಭದಲ್ಲಿ ಔಷಧಿ ಹೀಗೆ ನಾನಾ ಖರ್ಚುಗಳನ್ನು ಮಾಡಿದ್ದರು. ಆದರೆ ಸುಡು ಬಿಸಿಲು ಈ ಎಲ್ಲವನ್ನೂ ಆಪೋಷನ ತೆಗೆದುಕೊಂಡಿದೆ.

ಹಿಂದಿನ ವರ್ಷಗಳಲ್ಲಿ ಅಕಾಲಿಕ ಮಳೆ: ಈ ವರ್ಷ ಬಿಸಿಲಿನಿಂದ ಹೀಚುಗಳು ಉದುರಿ ರೈತರು ಕಷ್ಟ ಅನುಭವಿಸಿದರೆ ಕಳೆದ ಎರಡು ವರ್ಷಗಳು ಅಕಾಲಿಕ ಮಳೆಯಿಂದ ಮಾವು ಬೆಳೆಗಾರರು ತತ್ತರಿಸಿದರು. ಮಳೆಯಿಂದಾಗಿ ಭೂಮಿಯಲ್ಲಿ ಅಧಿಕ ತೇವಾಂಶವಾಗಿತ್ತು. ವಾತಾವರಣದ ಏರು-ಪೇರುನಿಂದಾಗಿ ರೋಗಗಳು ಹೆಚ್ಚಿದ್ದವು. ಹೀಗಾಗಿ ಈ ಹಿಂದಿನ ಎರಡು ವರ್ಷಗಳಿಂದ ಇಳುವರಿ ಕುಂಠಿತವಾಗಿತ್ತು. 

ಈ ಬಾರಿ ಅಕಾಲಿಕ ಮಳೆ ಇಲ್ಲದಿರುವುದರಿಂದ ಭೂಮಿಯಲ್ಲಿ ತೇವಾಂಶ ಸಮತೋಲನ ಕಾಯ್ದುಕೊಂಡು ಮಾವಿನ ತೋಟಗಳು ಹೂ ಕಂಗೊಳಿಸುತ್ತಿದ್ದವು. ಆದರೆ ಬಿಸಿಲು ಹೀಚುಗಳು ನೆಲಕಚ್ಚುವಂತೆ ಮಾಡಿದೆ.

ಶೇ 10ರಷ್ಟು ಬೆಳೆ ಬರುವುದಿಲ್ಲ
‘ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಿದೆ. ಅಲ್ಪ ಸ್ವಲ್ಪ ಕಾಯಿ ಕಚ್ಚಿದ್ದ ಮಾವು ಉದುರಲು ಆರಂಭವಾಗಿದೆ. ಹೂವು ಬಿಡುವ ಸಂದರ್ಭದಲ್ಲಿಯೇ ಬಿಸಿಲಿನ ತಾಪಕ್ಕೆ ಹೂಗಳು ಉದುರಿತ್ತು. ಈಗ ಅಲ್ಪಸ್ವಲ್ಪ ಇದ್ದ ಕಾಯಿ ಸಹ ಉದುರಿ ಬರಿ ಗಿಡಗಳನ್ನು ನೋಡುವಂತಾಗಿದೆ’ ಎನ್ನುತ್ತಾರೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಡಿಕಲ್ಲು ಗ್ರಾಮದ ಮಾವು ಬೆಳೆಗಾರ ವೆಂಕಟೇಶ್. ‘ಎರಡು ಎಕರೆ ಪ್ರದೇಶದಲ್ಲಿ ಮಾವು ಬೆಳೆಯುತ್ತಿದ್ದೇವೆ. ಈ ಮುಂಚಿನ ವರ್ಷಗಳಿಗೆ ಹೋಲಿಸಿದರೆ ಶೇ 10 ಸಹ ಬೆಳೆ ಈ ಬಾರಿ ಇಲ್ಲ. ನಾನು ಈಗಾಗಲೇ ₹ 65 ಸಾವಿರವನ್ನು ಬೆಳೆಗಾಗಿ ಖರ್ಚು ಮಾಡಿದ್ದೇವೆ. ₹ 5 ಸಾವಿರ ವಾಪಸ್ ಬರುವುದು ಸಹ ಅನುಮಾನ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT