ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಆರೋಗ್ಯಕ್ಕಾಗಿ ಸಿರಿಧಾನ್ಯ ಸೇವಿಸಿ: ಬಿ.ಫೌಜಿಯಾ

ಕೃಷಿ ಮೇಳ ಅಂಗವಾಗಿ ನಗರದಲ್ಲಿ ‘ಸಿರಿಧಾನ್ಯಗಳೆಡೆಗೆ ನಮ್ಮ ನಡಿಗೆ’ ಜಾಥಾ
Last Updated 12 ಫೆಬ್ರುವರಿ 2020, 14:08 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರಿಡಾಂಗಣದಲ್ಲಿ ಫೆಬ್ರುವರಿ15 ಮತ್ತು 16 ರಂದು ನಡೆಯುವ ಸಿರಿಧಾನ್ಯಗಳ ಹಬ್ಬ, ಕೃಷಿ ಮೇಳದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಸಿರಿಧಾನ್ಯಗಳೆಡೆಗೆ ನಮ್ಮ ನಡಿಗೆ’ ಎಂಬ ಜಾಥಾದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಹೆಜ್ಜೆ ಹಾಕಿದ ನೂರಾರು ಜನರು ಸಿರಿಧಾನ್ಯಗಳ ಬಗ್ಗೆ ಅರಿವಿನ ಸಂದೇಶ ಸಾರಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕಾಲ್ನಡಿಗೆ ಜಾಥಾಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ ಚಿಕ್ಕನರಸಿಂಹಯ್ಯ ಅವರು ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ‘ಸಿರಿಧಾನ್ಯಗಳ ಬೆಳೆಯುವ ಮತ್ತು ಪೋಷಕಾಂಶಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ರಾಜ್ಯ ಸರ್ಕಾರ ಸಾವಯವ ಕೃಷಿ ಮತ್ತು ಸಿರಿಧಾನ್ಯ ಉತ್ಪನ್ನಗಳಿಗೆ ಅತಿ ಹೆಚ್ಚು ನೀಡಿ ಈ ಮೇಳವನ್ನು ಆಯೋಜಿಸಲಾಗಿದೆ. ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಹೇಳಿದರು.

‘ಈ ಮೊದಲು ಕೃಷಿ ಮೇಳ ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗುತ್ತಿತ್ತು. ಕೃಷಿ ಮೇಳವನ್ನು ನೋಡಲು ಈ ಭಾಗದ ರೈತರೆಲ್ಲಾ ಬೆಂಗಳೂರಿಗೆ ಹೋಗುತ್ತಿದ್ದರು. ಜಿಲ್ಲೆಯ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲೇ ಕೃಷಿ ಮೇಳ ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲಾದ್ಯಂತ ಎಲ್ಲಾ ರೈತರು ಮತ್ತು ಮಹಿಳೆಯರು ಕೃಷಿ ಮೇಳದಲ್ಲಿ ಭಾಗವಹಿಸಿ ಕೃಷಿ ಕ್ಷೇತ್ರದಲ್ಲಿ ಆಗಿರುವ ಬದಲಾವಣೆ, ವಿವಿಧ ಯೋಜನೆಗಳು, ಹೊಸ ತಳಿಗಳ ಬಗ್ಗೆ ಮಾಹಿತಿ ಪಡೆಯಬಹುದು’ ಎಂದರು.

ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿ, ‘ನಮ್ಮ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆ ಇರುವುದರಿಂದ ರೈತರು ಕಡಿಮೆ ನೀರಿನಲ್ಲಿ ಬೆಳೆಯುವ ಸಿರಿಧಾನ್ಯಗಳನ್ನು ಬೆಳೆಯಲು ಆದ್ಯತೆ ನೀಡಬೇಕು. ಕೃಷಿಮೇಳದಲ್ಲಿ ಸಾವಯವ ಪದ್ಧತಿಯಲ್ಲಿ ನಿಖರ ಬೇಸಾಯ ಪದ್ಧತಿಗಳು, ಬರಗಾಲಕ್ಕೆ ಸೂಕ್ತವಾದ ಬೆಳೆಗಳು, ಉತ್ಪನ್ನಗಳ ಮೌಲ್ಯವರ್ಧನೆ, ಉತ್ತಮ ಮಾರುಕಟ್ಟೆ ಬಗ್ಗೆ ಗ್ರಾಹಕರು ಮತ್ತು ರೈತರಿಗೆ ಮೇಳದ ಮೂಲಕ ಹೆಚ್ಚಿನ ಅರಿವು ಮೂಡಿಸಲಾಗುವುದು’ ಎಂದರು.

‘ದೇಶದಲ್ಲಿ ಸಾವಯುವ ಕೃಷಿ ಮತ್ತು ಸಿರಿಧಾನ್ಯಗಳ ಬಳಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಸಿರಿಧಾನ್ಯಗಳನ್ನು ಬೆಳೆಯುವ ರೈತರಿಗೆ ವಿಶೇಷ ಉತ್ತೇಜನ ನೀಡುವ ಯೋಜನೆ ರೂಪಿಸುತ್ತಿದೆ. ಇದರಿಂದ ಸಿರಿಧಾನ್ಯಗಳಿಗೆ ವರ್ಷಪೂರ್ತಿ ಮಾರುಕಟ್ಟೆ ಸಿಗಲಿದೆ. ವಿದೇಶಗಳಲ್ಲಿ ಕೂಡ ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಅದಕ್ಕೆ ಮಾರುಕಟ್ಟೆ ಕಲ್ಪಿಸುವ ಕೆಲಸ ಆಗುತ್ತಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ‘ಸಿರಿಧಾನ್ಯಗಳನ್ನು ಆಹಾರದಲ್ಲಿ ಬಳಸಿದರೆ ಆರೋಗ್ಯವಂತರಾಗಬಹುದು. ಪ್ರತಿಯೊಬ್ಬ ರೈತರು ಮತ್ತು ಜನಸಾಮಾನ್ಯರು ಸಿರಿಧಾನ್ಯ ಬಳಕೆಗೆ ಮುಂದಾಗಬೇಕು. ಈ ಮೇಳದಲ್ಲಿ 100 ಕ್ಕೂ ಹೆಚ್ಚು ಮಳಿಗೆಗಳು ಭಾಗವಹಿಸುವ ನಿರೀಕ್ಷೆ ಇದೆ. ಹಾಗಾಗಿ ಇದರ ಪ್ರಯೋಜನವನ್ನು ಜಿಲ್ಲೆಯ ರೈತರು, ಸಾಮಾನ್ಯರು ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಆವರಣದಿಂದ ಆರಂಭಗೊಂಡ ಜಾಥಾ ಬಿ.ಬಿ.ರಸ್ತೆ, ಬಜಾರ್ ರಸ್ತೆ, ನಗರಸಭೆ ಕಾರ್ಯಾಲಯ ವೃತ್ತ, ಯೋಗಿನಾರಾಯಣ ಯತೀಂದ್ರರ ರಸ್ತೆ, ಸಾಧುಮಠ, ಬುದ್ಧ ಸರ್ಕಲ್, ಗಂಗನಮಿದ್ದೆ ರಸ್ತೆ, ಇಂದಿರಾ ಕ್ಯಾಂಟಿನ್ ಎಪಿಎಂಸಿ, ಪೊಲೀಸ್ ವರಿಷ್ಠಾಧಿಕಾರಿ ಹಳೆ ಕಚೇರಿ ವೃತ್ತ, ಅಂಬೇಡ್ಕರ್ ಭವನ, ಶಿಡ್ಲಘಟ್ಟ ವೃತ್ತ ಮೂಲಕ ಸಾಗಿ ಆರಂಭದ ಸ್ಥಳದ ತಲುಪಿ ಕೊನೆಗೊಂಡಿತು. ಜಾಥಾದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.

ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್, ಕೃಷಿ ಇಲಾಖೆಯ ಜಂಟಿ ನಿದೇರ್ಶಕಿ ರೂಪಾ, ಕೃಷಿ ಇಲಾಖೆಯ ಉಪನಿರ್ದೇಶಕಿ ಅನುರೂಪಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಮಧುರನಾಥರೆಡ್ಡಿ ಜಾಥಾದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT