ಭಾನುವಾರ, ಸೆಪ್ಟೆಂಬರ್ 19, 2021
29 °C
ಪ್ರಥಮ ‍ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ

ಅಭಿವೃದ್ಧಿ, ವಿಕಾಸಕ್ಕೆ ಶಿಕ್ಷಣ ಅಗತ್ಯ: ನಿರ್ಮಲಾನಂದನಾಥ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಸಮಾಜದ ಅಭಿವೃದ್ಧಿ ಮತ್ತು ವ್ಯಕ್ತಿತ್ವ ವಿಕಾಸಕ್ಕೆ ಶಿಕ್ಷಣ ಅತ್ಯಗತ್ಯ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ನಗರದ ಎಸ್‌ಜೆಸಿಐಟಿ ಸಭಾಂಗಣದಲ್ಲಿ ಮಂಗಳವಾರ ಅಗಲಗುರ್ಕಿಯ ಬಿಜಿಎಸ್ ಪದವಿ ಪೂರ್ವ ಕಾಲೇಜಿಗೆ ದಾಖಲಾದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ದೇಶವನ್ನು ಕಟ್ಟುವ ಕಾರ್ಯದಲ್ಲಿ ಶಿಕ್ಷಣ ಮಹತ್ವದ ಪಾತ್ರವಹಿಸುತ್ತದೆ. ಮಕ್ಕಳನ್ನು ಪೋಷಿಸಿ ಸಂಸ್ಥೆಗೆ ನೀಡಿದ್ದಕ್ಕೆ ಪೋಷಕರಿಗೆ ಧನ್ಯವಾದಗಳು ಎಂದರು.

ವಿದ್ಯೆ ಕಲಿತಂತೆ ವಿನಯವೂ ಮೈಗೂಡುತ್ತದೆ. ಮನುಷ್ಯ ಮನರಂಜನೆಗೆ ಹಣ ಹೂಡಿಕೆ ಮಾಡುವುದಲ್ಲ. ಶಿಕ್ಷಣಕ್ಕೆ ಹಣ ಹೂಡಿಕೆ ಮಾಡಬೇಕು. ಜ್ಞಾನಾರ್ಜನೆಯನ್ನು ಅಭಿವೃದ್ಧಿಯನ್ನಾಗಿಸಬೇಕು ಎಂದು ಹೇಳಿದರು.

ಶಿಕ್ಷಣ ಮಕ್ಕಳ ವ್ಯಕ್ತಿತ್ವವನ್ನು ವಿಕಾಸಗೊಳಿಸುತ್ತದೆ. ಅವರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತದೆ. ಮಕ್ಕಳು ಉತ್ತಮ ಶಿಕ್ಷಣ ಕಲಿತಂತೆ ಅವರ ಪೋಷಕರಲ್ಲಿಯೂ ಹೆಮ್ಮೆ ಮೂಡುತ್ತದೆ ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆನಂದ್ ಮಾತನಾಡಿ, ರಾಜ್ಯಕ್ಕೆ ಮಾದರಿ ಶಿಕ್ಷಣ ನೀಡುವಲ್ಲಿ ಬಿಜಿಎಸ್ ಸಂಸ್ಥೆ ಮುಂದಿದೆ. ಸಂಸ್ಕೃತಿ, ಸಂಸ್ಕಾರ ಜೀವನದ ಮಾರ್ಗದರ್ಶನ ಹಾಗೂ ಮೌಲ್ಯಾತ್ಮಕ ಜ್ಞಾನಾರ್ಜನೆಗೆ ಶಿಕ್ಷಣ ಸಂಸ್ಥೆ ಒತ್ತು ನೀಡುತ್ತಿದೆ. ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ಸಮಾಜ ಸೇವೆಗಳ ಕಡೆ ಮುಖ ಮಾಡಬೇಕು ಎಂದು ‌ಕಿವಿಮಾತು ಹೇಳಿದರು.

ಬಿಜಿಎಸ್ ಶಿಕ್ಷಣ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ಎನ್. ಶಿವರಾಮರೆಡ್ಡಿ, ಮಕ್ಕಳ ಬೆಳವಣಿಗೆ ಹಂತದಲ್ಲಿ ಪೋಷಕರ ಪಾತ್ರವನ್ನು ಹಾಗೂ ವಿದ್ಯಾರ್ಥಿ ಬದುಕಿನ ಪ್ರಯೋಜನವನ್ನು ವಿವರಿಸಿದರು.

ಮಂಗಳಾನಂದನಾಥ ಸ್ವಾಮೀಜಿ, ಶೈಲೇಂದ್ರನಾಥ ಸ್ವಾಮೀಜಿ, ಎಸ್‌ಜೆಸಿಐಟಿ ಪ್ರಾಂಶುಪಾಲ ಜಿ. ಟಿ.ರಾಜು ವೇದಿಕೆಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು