ಶಿಡ್ಲಘಟ್ಟ: ನಾಮಪತ್ರ ಸಲ್ಲಿಕೆ, ಚುನಾವಣೆ ಪ್ರಚಾರ, ಬಾಲಕ, ಬಾಲಕಿಯರಿಂದ ಮತದಾನ, ಮುಖ್ಯಮಂತ್ರಿ ಆಯ್ಕೆ, ಉಪ ಮುಖ್ಯಮಂತ್ರಿ, ಸಚಿವರ ಆಯ್ಕೆ– ಇದು ತಾಲ್ಲೂಕಿನ ಮೇಲೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಬುಧವಾರ ನಡೆದ ಶಾಲಾ ಮಕ್ಕಳ ಸಂಸತ್ ಚುನಾವಣೆಯಲ್ಲಿ ಕಂಡು ಬಂದ ದೃಶ್ಯ.
ವಿಧಾನಸಭೆ ಚುನಾವಣೆ ಪ್ರಕ್ರಿಯೆಯಂತೆಯೇ ಮೇಲೂರು ಸರ್ಕಾರಿ ಪ್ರೌಢ ಶಾಲೆಯಲ್ಲೂ ವಿದ್ಯಾರ್ಥಿಗಳು ತಮ್ಮ ಆಧಾರ್ ಕಾರ್ಡ್ ಪ್ರದರ್ಶಿಸಿ, ಮೊಬೈಲ್‌ನಲ್ಲಿರುವ ವೋಟರ್ ಹೆಲ್ಪ್‌ಲೈನ್ ಆ್ಯಪ್ ಮೂಲಕ ಸರತಿ ಸಾಲಿನಲ್ಲಿ ನಿಂತು ಗೋಪ್ಯ ಮತದಾನ ಮಾಡಿದರು. ಜತೆಗೆ ಮತದಾನ ಮಾಡಿದ ಬಳಿಕ ಎಡಗೈ ತೋರುಬೆರಳಿಗೆ ಶಾಯಿಯನ್ನು ಹಚ್ಚಿಸಿಕೊಂಡು, ನಿಜವಾದ ಪ್ರಜಾತಂತ್ರ ವ್ಯವಸ್ಥೆ ಅನುಭವ ಪಡೆದರು.
ಬಳಿಕ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡ ತಮ್ಮ ಪ್ರತಿನಿಧಿಗಳನ್ನು ಘೋಷಿಸಲಾಯಿತು.
ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯ ಶಿಕ್ಷಕ ಭಾಸ್ಕರ್, ‘ಶಾಲೆಯ ವಿವಿಧ ಸಾಂಸ್ಕೃತಿಕ, ಕ್ರೀಡಾ, ಶಾಲೆ ಸ್ವಚ್ಛತೆ, ಊಟ ಇನ್ನಿತರ ಚಟುವಟಿಕೆಗಳಲ್ಲಿನ ನ್ಯೂನತೆಗಳನ್ನು ವಿದ್ಯಾರ್ಥಿಗಳೇ ಪರಿಣಾಮಕಾರಿಯಾಗಿ ನಿರ್ವಹಿಸುವ ನಿಟ್ಟಿನಲ್ಲಿ ಈ ಚುನಾವಣೆ ನಡೆಸಲಾಗಿದೆ. ಅಲ್ಲದೆ ಪಠ್ಯದಲ್ಲಿ ಇರುವುದನ್ನು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕವಾಗಿ ಜಾಗೃತಿ ಮೂಡಿಸುವುದು ಅತಿಮುಖ್ಯ. ಈ ನಿಟ್ಟಿನಲ್ಲಿ ಚುನಾವಣೆ ಮತ್ತು ಸಂಸತ್ ರಚನೆ ಮಾಡಲಾಗಿದೆ. ಮಕ್ಕಳಿಗೆ ಜವಾಬ್ದಾರಿ, ನಾಯಕತ್ವ, ಎಲ್ಲರನ್ನು ಸಂಬಾಳಿಸುವ ಶಕ್ತಿಯ ವೃದ್ಧಿಸುವುದು ಶಾಲಾ ಸಂಸತ್ ಚುನಾವಣೆ ಗುರಿಯಾಗಿದೆ’ ಎಂದರು.
ಮಕ್ಕಳು ಎಲ್ಲ ಕಾರ್ಯಗಳಲ್ಲಿ ಭಾಗಿಯಾಗಿ ಚುನಾವಣೆ ಅನುಭವ ಪಡೆದರು. ನಿಜವಾದ ವಿಧಾನಸಭೆ, ಲೋಕಸಭೆ ಚುನಾವಣೆಗಳ ಮಾದರಿಯಲ್ಲೇ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂಪಡೆಯುವುದು, ಪ್ರಚಾರ, ಮತದಾನ ಎಲ್ಲವೂ ವ್ಯವಸ್ಥಿತವಾಗಿ ನಡೆಯಿತು. ಪ್ರಜಾಪ್ರಭುತ್ವ ಎಂದರೇನು? ಮತದಾನದ ರೀತಿ ನೀತಿಗಳೇನು?, ಮತದಾನ ಹೇಗೆ ಮಾಡಬೇಕು? ಮತ್ತು ಏಕೆ ಮಾಡಬೇಕು?, ಸಂಸತ್ತು ಹೇಗಿರುತ್ತದೆ?, ಮುಖ್ಯಮಂತ್ರಿಗಳ ಕೆಲಸ, ಮಂತ್ರಿಗಳ ಕಾರ್ಯಗಳ ಕುರಿತು ಚುನಾವಣೆ ಮತ್ತು ಸಂಸತ್ ರಚನೆ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು ಎಂದು ಶಿಕ್ಷಕರೊಬ್ಬರು ತಿಳಿಸಿದರು.
ಶಿಕ್ಷಕರಾದ ಬಿ.ಎಂ.ವೆಂಕಟಶಿವಾರೆಡ್ಡಿ, ಸಿ.ಸುಜಾತ, ಎಂ.ಎಸ್.ವಿದ್ಯಾ, ಎಂ.ಗಾಯತ್ರಿ, ಜಿ.ಸವಿತಾ, ದೇವಮ್ಮ, ತುಳಸಿಮಾಲಾ, ಪದ್ಮ, ಅರುಣಾ, ನಾಗರಾಜು ಹಾಜರಿದ್ದರು.
ಚುನಾವಣೆ ಅನುಭವ ಪಡೆದ ವಿದ್ಯಾರ್ಥಿಗಳು ನಾಮಪತ್ರ ಸಲ್ಲಿಕೆ, ಹಿಂಪಡೆ, ಪ್ರಚಾರ ಕಾರ್ಯ ಪ್ರಜಾಪ್ರಭುತ್ವ, ಮತದಾನದ ನೀತಿ ಕುರಿತು ಮಾಹಿತಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.