ಮಂಗಳವಾರ, ಏಪ್ರಿಲ್ 20, 2021
27 °C
55ನೇ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆಯಲ್ಲಿ ಘೋಷಣೆ

ಚಿಕ್ಕಬಳ್ಳಾಪುರ: ಎಲೆಕ್ಟ್ರಿಕ್‌ ವಾಹನ ಘಟಕಕ್ಕೆ ಅಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಲೆಕ್ಟ್ರಿಕ್‌ ವಾಹನ–ಸಾಂದರ್ಭಿಕ ಚಿತ್ರ

ಚಿಕ್ಕಬಳ್ಳಾಪುರ: ವಿಧಾನಸೌಧದಲ್ಲಿ ಸೋಮವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ 55ನೇ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯಲ್ಲಿ ಜಿಲ್ಲೆಯಲ್ಲಿ ಎಲೆಕ್ಟ್ರಿಕ್‌ ವಾಹನ ತಯಾರಿಕೆ, ಲಿಥಿಯಂ ಬ್ಯಾಟರಿ ಉತ್ಪಾದನಾ ಘಟಕ ಆರಂಭಿಸುವ ಪ್ರಸ್ತಾವಕ್ಕೆ ಅನುಮೋದನೆ ದೊರೆತಿದೆ.

ಸಮಿತಿಯು ಒಟ್ಟು ₹26,659 ಕೋಟಿ ಹೂಡಿಕೆಯ ಐದು ಪ್ರಸ್ತಾವನೆ ಗಳಿಗೆ ಅನುಮತಿ ನೀಡಿದ್ದು ಇದರಿಂದ ಒಟ್ಟು 13,341 ಉದ್ಯೋಗ ಸೃಷ್ಟಿ ನಿರೀಕ್ಷಿಸಲಾಗಿದೆ. ಈ ಪೈಕಿ ಚಿಕ್ಕಬಳ್ಳಾಪುರದಲ್ಲಿ ಹ್ಯುನೆಟ್‌ ಕಂಪನಿ ಎಲೆಕ್ಟ್ರಿಕ್‌ ವಾಹನ ತಯಾರಿಕೆ, ಲಿಥಿಯಂ ಬ್ಯಾಟರಿ ಉತ್ಪಾದನಾ ಘಟಕ ಆರಂಭಕ್ಕೆ ₹1,825 ಕೋಟಿ ಹೂಡಿಕೆಗೆ ಮುಂದೆ ಬಂದಿದ್ದು, ಇದರಿಂದ 2,210 ಉದ್ಯೋಗ ಸೃಷ್ಟಿ ನಿರೀಕ್ಷೆ ಹೊಂದಲಾಗಿದೆ.

ರಾಜ್ಯ ರಾಜಧಾನಿಗೆ ಸಮೀಪ ದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ದಶಕ ಪೂರೈಸಿದರೂ ಈವರೆಗೆ ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದ ಕೈಗಾರಿಕೆ ಗಳು ತಲೆ ಎತ್ತದೆ ಇರುವುದು ಜನರಲ್ಲಿ ಬೇಸರ ಮೂಡಿಸಿರುವಾಗಲೇ ಈ ಹೊಸ ಪ್ರಸ್ತಾವಕ್ಕೆ ದೊರೆತಿರುವ ಅನುಮೋದನೆ ಸಹಜವಾಗಿಯೇ ಕೈಗಾರಿಕೆ ವಲಯದಲ್ಲಿ ಸಂಚಲನ ಮೂಡಿಸಿದೆ.

ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆ ಸ್ಥಾಪನೆ ಈ ಭಾಗದ ಬಹುಸಂಖ್ಯಾತ ಜನರ ಪ್ರಮುಖ ಬೇಡಿಕೆ. ದ್ರಾಕ್ಷಿ, ಟೊಮೆಟೊ ಸೇರಿದಂತೆ ವಿವಿಧ ತರಕಾರಿಗಳು ಬೆಲೆ ಕಳೆದುಕೊಂಡಾಗ ಸ್ಥಳೀಯವಾಗಿ ಅವುಗಳನ್ನು ಸಂಸ್ಕರಿಸಿ, ಮೌಲ್ಯವರ್ಧನೆ ಮಾಡಬಹುದು. ಜತೆಗೆ ಉದ್ಯೋಗ ಸೃಷ್ಟಿಸಬಹುದು ಎನ್ನುವುದು ಹಣ್ಣು, ತರಕಾರಿ ಬೆಳೆಗಾರರ ಪ್ರತಿಪಾದನೆ. ಆದರೆ ಆ ಕನಸು ಇಂದಿಗೂ ನನಸಾಗದೆ ಬೆಳೆಗಾರರಲ್ಲಿ ಬೇಗುದಿ ಬೆಂಕಿ ಮುಚ್ಚಿದ ಕೆಂಡಂತಿದೆ.

ಜಿಲ್ಲೆಯ ಜನರ ಬೇಡಿಕೆಗೆ ಸ್ಪಂದಿಸದ ಸರ್ಕಾರಗಳು ಇನ್ನೊಂದೆಡೆ ಬೇಡದ ವಿವಿಧ ಘಟಕಗಳನ್ನು ಜಿಲ್ಲೆಗೆ ಘೋಷಿಸುವ ಮೂಲಕ ಈ ಭಾಗದ ಜನರಿಗೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತ ಬರುತ್ತಿವೆ ಎನ್ನುವುದು ಜಿಲ್ಲೆಯ ಪ್ರಜ್ಞಾವಂತರ ಬೇಸರ.

ಈ ಹಿಂದೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಜಿಲ್ಲೆಯಲ್ಲಿ ಮೊಬೈಲ್ ಫೋನ್‌ಗಳ ಬಿಡಿಭಾಗಗಳ ಘಟಕ ಸ್ಥಾಪಿಸಲಾಗುತ್ತದೆ ಎಂದು ಘೋಷಿಸಿದ್ದರು. ಅದಾಗಿ ಎರಡು ವರ್ಷಗಳೇ ಕಳೆದರೂ ಈವರೆಗೆ ಆ ಘಟಕ ಸ್ಥಾಪನೆಯ ಸಣ್ಣ ಕುರುಹು ಸಹ ಜಿಲ್ಲೆಯಲ್ಲಿ ಕಾಣಿಸಿಕೊಂಡಿಲ್ಲ. ಒಂದೇ ಒಂದು ಉದ್ಯೋಗ ಸಹ ಸೃಷ್ಟಿಯಾಗಿಲ್ಲ.

ಪರಿಸ್ಥಿತಿ ಹೀಗಿರುವಾಗಲೇ, ‘ರಾಜ್ಯ ಸರ್ಕಾರ ಇದೀಗ ಜಿಲ್ಲೆಯಲ್ಲಿ ಎಲೆಕ್ಟ್ರಿಕ್‌ ವಾಹನ ತಯಾರಿಕೆ, ಲಿಥಿಯಂ ಬ್ಯಾಟರಿ ಉತ್ಪಾದನಾ ಘಟಕ ಆರಂಭಕ್ಕೆ ಅನುಮೋದನೆ ನೀಡಿರುವುದು ಕಣ್ಣೊರೆಸುವ ತಂತ್ರವಾಗಿದೆ. ಇವು ಘೋಷಣೆಗಳಿಗಷ್ಟೇ ಸೀಮಿತ’ ಎನ್ನುವುದು ಸಾರ್ವಜನಿಕ ವಲಯದ ವಿಶ್ಲೇಷಣೆಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು