ಶನಿವಾರ, ಏಪ್ರಿಲ್ 4, 2020
19 °C
ಬಜೆಟ್‌ನಲ್ಲಿ ಬೇಡಿಕೆ ಈಡೇರಿಸದೆ ಸರ್ಕಾರ ಮೋಸ ಮಾಡಿದೆ ಎಂದು ಆರೋಪಿಸಿ ನಗರದಲ್ಲಿ ಸರ್ಕಾರದ ಪ್ರತಿಕೃತಿ ದಹಿಸಿ, ಪ್ರತಿಭಟನೆ ನಡೆಸಿದ ಅಕ್ಷರ ದಾಸೋಹ ನೌಕರರು

ಸರ್ಕಾರದ ವಿರುದ್ಧ ನೌಕರರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಬಜೆಟ್‌ನಲ್ಲಿ ಅಕ್ಷರ ದಾಸೋಹ ನೌಕರರ ವೇತನ ಹೆಚ್ಚಳ ಮಾಡದೆ ರಾಜ್ಯ ಸರ್ಕಾರ ಮೋಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಅಕ್ಷರ ದಾಸೋಹ ನೌಕರರು ಮಂಗಳವಾರ ನಗರದಲ್ಲಿ ಸರ್ಕಾರದ ಪ್ರತಿಕೃತಿ ದಹನ ಮಾಡಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ಮಾತನಾಡಿ, ‘ಅಕ್ಷರ ದಾಸೋಹ ನೌಕರರು ಕನಿಷ್ಠ ಕೂಲಿ, ನಿವೃತ್ತಿ ವೇತನಕ್ಕಾಗಿ ಆಗ್ರಹಿಸಿ ಬೆಂಗಳೂರಿನಲ್ಲಿ ಫೆ.3 ರಂದು ಅನಿರ್ಧಿಷ್ಟಾವಧಿ ಧರಣಿ ನಡೆಸಲು ಮುಂದಾದಾಗ ಸರ್ಕಾರ ಪೊಲೀಸರನ್ನು ಛೂ ಬಿಟ್ಟು ಹೋರಾಟ ಧಮನ ಮಾಡಲು ಮುಂದಾಯಿತು. ಆದರೂ ಅದಕ್ಕೆಲ್ಲ ಜಗ್ಗದೆ ನೌಕರರು ಬೆಂಗಳೂರಿನಲ್ಲಿ ಹೋರಾಟ ನಡೆಸಿದರು’ ಎಂದು ಹೇಳಿದರು.

‘ಆ ಸಂದರ್ಭದಲ್ಲಿ ಶಿಕ್ಷಣ ಸಚಿವರು ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹೋರಾಟದ ಸ್ಥಳಕ್ಕೆ ಬಂದು ಬಜೆಟ್‌ನಲ್ಲಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿ, ಹೋರಾಟ ಹಿಂಪಡೆಯುವಂತೆ ಮನವಿ ಮಾಡಿದರು. ಆದರೆ ಬಜೆಟ್‌ನಲ್ಲಿ ನೌಕರರ ವೇತನ ಹೆಚ್ಚಳವಾಗಲಿ, ಎಲ್‌ಐಸಿ ಆಧಾರಿತ ಪಿಂಚಣಿ ವ್ಯವಸ್ಥೆ ಜಾರಿಗೆ ತರುವ ವಿಚಾರವಾಗಲಿ ಪ್ರಸ್ತಾಪವೇ ಆಗಲಿಲ್ಲ. ಸರ್ಕಾರ ನೌಕರರಿಗೆ ಕೊಟ್ಟ ಮಾತಿಗೆ ತಪ್ಪಿ ನಡೆದು ಮೋಸ ಮಾಡಿದೆ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ 1.18 ಲಕ್ಷ ಮಹಿಳೆಯರು ಬಿಸಿಯೂಟ ನೌಕರರಾಗಿ ದುಡಿಯುತ್ತಿದ್ದಾರೆ. ಮಕ್ಕಳ ಅಪೌಷ್ಠಿಕತೆ ಹೋಗಲಾಡಿಸಲು ದುಡಿಯುವ ಈ ಮಹಿಳೆಯರಿಗೆ ತಿಂಗಳಿಗೆ ಸುಮಾರು ₹2,700 ವೇತನ ಬಿಟ್ಟರೆ ಯಾವುದೇ ಸೌಲಭ್ಯಗಳಿಲ್ಲ. ಸುಮಾರು 19 ವರ್ಷಗಳಿಂದ ದುಡಿಯುತ್ತಿರುವ ನೌಕರರಿಗೆ ಸೂಕ್ತ ವೇತನ, ಪಿಂಚಣಿ ಹಾಗೂ ಇತರೆ ಸೌಲಭ್ಯಗಳನ್ನು ನೀಡದೇ ವಂಚಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಬಿಸಿಯೂಟ ಕೆಲಸಗಾರರನ್ನು ಕಾರ್ಮಿಕರೆಂದು ಪರಿಗಣಿಸಲು ಸಿದ್ದವಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಸುಪ್ರೀಂ ಕೋರ್ಟಿನ ತೀರ್ಪನ್ನು ಗಾಳಿಗೆ ತೂರಿದೆ. ಇನ್ನೂ ರಾಜ್ಯ ಸರಕಾರಕ್ಕೆ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಅನೇಕ ಬಾರಿ ಪ್ರತಿಭಟನೆ ಕೈಗೊಂಡರೂ ಪ್ರಯೋಜನವಾಗಿಲ್ಲ‘ ಎಂದು ಹೇಳಿದರು.

ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಆರ್.ಮಂಜುಳಾ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮಗೆ ಯಾವುದೇ ಸೌಲಭ್ಯ, ಆರ್ಥಿಕ ಭದ್ರತೆ ನೀಡದೆ ಕಡೆಗಣಿಸಿವೆ. ಆಶಾ ಕಾರ್ಯಕರ್ತೆಯರಿಗೆ ಮತ್ತು ಗ್ರಾಮ ಪಂಚಾಯಿತಿ ನೌಕರರಿಗೆ ಸರ್ಕಾರ ಕನಿಷ್ಠ ವೇತನ ನಿಗದಿ ಮಾಡಿದೆ. ಆದರೆ ಮಕ್ಕಳಿಗೆ ರುಚಿಕಟ್ಟಾಗಿ ಅಡುಗೆ ಮಾಡಿ ಬಡಿಸುವ ಬಿಸಿಯೂಟ ನೌಕರರ ಬಗ್ಗೆ ಕಾಳಜಿ ವಹಿಸಿಲ್ಲ. ನಮಗೆ ಕನಿಷ್ಠ ತಿಂಗಳಿಗೆ ₹21 ಸಾವಿರ ವೇತನ ನಿಗದಿ ಮಾಡಬೇಕು’ ಎಂದು ಆಗ್ರಹಿಸಿದರು.

‘ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಿಸಿಯೂಟ ನೌಕರರಿಗೆ ಕಳೆದ 17 ವರ್ಷಗಳಿಂದ ಸರಿಯಾದ ವೇತನ, ಪಿಂಚಣಿ ಇತರೆ ಸೌಲಭ್ಯಗಳನ್ನು ನೀಡದೆ ಮೋಸ ಮಾಡುತ್ತಿವೆ. ಆರೋಗ್ಯ ವಿಮೆ, ಪಿಂಚಣಿ ಸೌಲಭ್ಯ ವಿಚಾರದಲ್ಲಿ ಪ್ರತಿಯೊಬ್ಬರಿಗೂ ಅವಕಾಶ ನೀಡಬೇಕು ಎಂಬ ಬೇಡಿಕೆ ಈಡೇರಿಸಿಲ್ಲ. ಎಲ್ಲ ನೌಕರರಿಗೂ ಎಲ್‌ಐಸಿ ಆಧಾರಿತ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು. ಯಾವುದೇ ಸಂಘಸಂಸ್ಥೆಗಳಿಗೆ ಈ ಯೋಜನೆ ಹಸ್ತಾಂತರಿಸಬಾರದು. ಕಾಯಂ ಸ್ವರೂಪದ ಉದ್ಯೋಗ ಸೃಷ್ಟಿಸಬೇಕು’ ಎಂದು ಒತ್ತಾಯಿಸಿದರು.

ಸಂಘದ ಪದಾಧಿಕಾರಿಗಳಾದ ಉಮಾ, ಭಾರತಿ, ಚೆನ್ನಮ್ಮ, ಬಸಮ್ಮ, ವೆಂಕಟಮ್ಮ ಅವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು