ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು: ಎಂ.ಜಿ ರಸ್ತೆ ವಿಸ್ತರಣೆ ಕಗ್ಗಂಟು

Published 20 ನವೆಂಬರ್ 2023, 7:16 IST
Last Updated 20 ನವೆಂಬರ್ 2023, 7:16 IST
ಅಕ್ಷರ ಗಾತ್ರ

ಗೌರಿಬಿದನೂರು: ನಗರದ ಎಂ.ಜಿ. ರಸ್ತೆ ವಿಸ್ತರಣೆ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದ್ದು ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿ ಯಾವ ಮಾರ್ಗವಾಗಿ ಸಾಗಲಿದೆ ಮತ್ತು ಎಷ್ಟು ಅಡಿಗಳ ಅಂತರ ವಿಸ್ತರಣೆ ಆಗಲಿದೆ ಎಂಬ ಗೊಂದಲ ವರ್ತಕರು, ಕಟ್ಟಡ ಮಾಲೀಕರು ‌ಮತ್ತು ನಾಗರಿಕರಲ್ಲಿ ಮನೆ ಮಾಡಿದೆ.

ನಗರದ ಬಿ.ಎಚ್. ರಸ್ತೆಯ ವಿಸ್ತರಣೆ ‌ಮತ್ತು ಅಭಿವೃದ್ಧಿ ‌ಕಾಮಗಾರಿಗಳು ನಡೆದು ದಶಕಗಳು ಸಮೀಪಿಸುತ್ತಿವೆ. ಇದರ ಬೆನ್ನಲ್ಲೇ ಸಿರಾದಿಂದ ಮುಳಬಾಗಿಲುವರೆಗೆ ಸಾಗುವ ರಾಜ್ಯ ಹೆದ್ದಾರಿ ರಸ್ತೆಯು ಗೌರಿಬಿದನೂರು ನಗರದ ಮಧ್ಯೆ ಭಾಗದಲ್ಲಿ ಸಾಗಲಿದೆ. ಗುಂಡಾಪುರ ಹೊರವಲಯದಿಂದ ಹಿರೇಬಿದನೂರಿನ ಹೊರವಲಯದಲ್ಲಿರುವ ಹೊರ ವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ವಿಸ್ತರಣೆಯ ವಿಷಯವು ನಗರದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ನಗರದ ನಕ್ಷೆ ಮತ್ತು ದಾಖಲೆಗಳ ಪ್ರಕಾರ ಸ್ವಾತಂತ್ರ್ಯ ಪೂರ್ವ ಕಳೆದ 120 ವರ್ಷಗಳಿಂದಲೂ ಆಚಾರ್ಯ ಕಾಲೇಜು ಮುಂಭಾಗದಿಂದ ಎನ್.ಸಿ ನಾಗಯ್ಯರೆಡ್ಡಿ ವೃತ್ತ, ಅಂಬೇಡ್ಕರ್ ವೃತ್ತ, ಎಂ.ಜಿ ವೃತ್ತದವರೆಗಿನ ರಸ್ತೆಯು 80 ಅಡಿಗಳ ಅಗಲವಿದೆ. ಉಳಿದಂತೆ ಎನ್.ಸಿ ನಾಗಯ್ಯ ರೆಡ್ಡಿ ವೃತ್ತದಿಂದ ಎಂ.ಜಿ. ವೃತ್ತದವರೆಗಿನ ರಸ್ತೆಯು ಕೇವಲ 21 ಅಡಿಗಳಷ್ಟು ಮಾತ್ರ ರಸ್ತೆಯಿದ್ದು ಉಳಿದಂತೆ ಖಾಸಗಿ ಕಟ್ಟಡಗಳ ಮಾಲೀಕರಿಗೆ ಸೇರಿದ ಜಾಗವಾಗಿರುತ್ತದೆ. ಮತ್ತೊಂದು ರಸ್ತೆಯಾಗಿರುವ ವಾಸವೀ ರಸ್ತೆ (ಹಳೆ ಬಜಾರ್ ರಸ್ತೆ) 26 ಅಡಿಗಳಷ್ಟು ಅಳತೆಯಿದೆ ಎಂಬುದಾಗಿ ದಾಖಲೆಗಳಲ್ಲಿ ಕಾಣಬಹುದಾಗಿದೆ.

ಇದರಿಂದಾಗಿ ನಗರದಲ್ಲಿ ಎಂ.ಜಿ. ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿಯ ಬಗ್ಗೆ ನಾಗರಿಕರಲ್ಲಿ ಸಾಕಷ್ಟು ಅನುಮಾನಗಳು‌ ಮೂಡಿವೆ. ದಶಕಗಳಿಂದಲೂ ನಗರದ ಮುಖ್ಯ ರಸ್ತೆಗಳ ಎರಡೂ ಬದಿಯಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಾಣ ಮಾಡಿಕೊಂಡಿರುವ ಸ್ಥಳಗಳನ್ನು ಅಧಿಕಾರಿಗಳು ಸಕ್ರಮಗೊಳಿಸುವರೇ ಅಥವಾ ಅವುಗಳನ್ನು ತೆರವುಗೊಳಿಸಲು ಮುಂದಾಗುವರೇ ಎಂಬ ಯಕ್ಷಪ್ರಶ್ನೆ ಸಾರ್ವಜನಿಕರದ್ದು.

ಇತ್ತೀಚಿಗೆ ತಾಲ್ಲೂಕು ಕಚೇರಿಯಲ್ಲಿ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ನಗರದ ಎಂ.ಜಿ. ರಸ್ತೆಯ ಎರಡೂ ಬದಿಯಲ್ಲಿನ ವಾಣಿಜ್ಯ ಕಟ್ಟಡ ಮಾಲೀಕರು ರಸ್ತೆ ವಿಸ್ತರಣೆಯಲ್ಲಿ ತಮಗೆ ಸೂಕ್ತ ಪರಿಹಾರ ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಮನವಿ‌ ಮಾಡಿದ್ದರು. ಆದರೆ ಶಾಸಕರು ನಗರದ ಅಭಿವೃದ್ಧಿಗೆ ರಸ್ತೆ ವಿಸ್ತರಣೆ ‌ಅನಿವಾರ್ಯ ರಾಜ್ಯ ಹೆದ್ದಾರಿ ಪ್ರಾಧಿಕಾರದದ ಪ್ರಕಾರ ದಾಖಲೆಗಳಲ್ಲಿ ಇರುವಂತೆ ರಸ್ತೆಯನ್ನು ವಿಸ್ತರಣೆ ಮಾಡುವ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗುವ ಬಗ್ಗೆ ಹಸಿರು ನಿಶಾನೆ ತೋರಿದ್ದರು.

ಒಂದು ಶತಮಾನದಿಂದಲೂ ನಗರದಲ್ಲಿನ ಸ್ವಂತ ಕಟ್ಟಡಗಳಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಹೊಂದಿದ್ದೇವೆ. ನಿಯಮಾವಳಿಗಳ ಪ್ರಕಾರ ಅಂದಿನಿಂದಲೂ ಸ್ಥಳೀಯ ಪುರಸಭೆ ಮತ್ತು ನಗರಸಭೆಗೆ ಆಸ್ತಿ ತೆರಿಗೆಯನ್ನು ಕಟ್ಟಿದ್ದೇವೆ. ಆದರೆ ಇದೀಗ ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ನಮ್ಮ ಆಸ್ತಿಗಳಿಗೆ ಸೂಕ್ತ ಪರಿಹಾರ ನೀಡದೆ ತೆರವುಗೊಳಿಸಲು ಮುಂದಾಗುವುದು ಅವೈಜ್ಞಾನಿಕ. ನಮ್ಮ ಆಸ್ತಿಗಳಿಗೆ ಸೂಕ್ತ ಪರಿಹಾರ ಕಲ್ಪಿಸುವವರೆಗೂ ನಾವು ಬಿಡಲು ಸಾಧ್ಯವಿಲ್ಲ. ನಮಗೂ ಕಾನೂನಿನ ಅರಿವಿದೆ, ಅಗತ್ಯ ದಾಖಲೆಗಳನ್ನು ಹೊಂದಿದ್ದು, ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಲು ಸಿದ್ಧವಾಗಿದ್ದೇವೆ’ ಎನ್ನುತ್ತಾರೆ ಎಂ.ಜಿ. ರಸ್ತೆಯಲ್ಲಿನ ಕಟ್ಟಡ ಮಾಲೀಕ ರಮೇಶ್.

‘ನಮ್ಮ ಪೂರ್ವಜರು 175 ವರ್ಷಗಳಿಂದಲೂ ನಗರದಲ್ಲಿ ವಾಣಿಜ್ಯ ಆಸ್ತಿ‌ ಹೊಂದಿರುವ ಬಗ್ಗೆ ನಿಖರವಾದ ದಾಖಲೆಗಳನ್ನು ಹೊಂದಿದ್ದೇವೆ. ಪ್ರತಿವರ್ಷ ಸರ್ಕಾರಕ್ಕೆ ತೆರಿಗೆ ನೀಡುತ್ತೇವೆ. ಇದಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆಗಳನ್ನು ಡೆಹರಾಡೂನ್‌ನಲ್ಲಿನ ಭೂಮಾಪನ ಕಚೇರಿಯಿಂದ ತರಿಸಿದ್ದೇವೆ. ನಗರದಲ್ಲಿ ಅಕ್ರಮವಾಗಿರುವ ಆಸ್ತಿಗಳನ್ನು ಸಕ್ರಮಗೊಳಿಸಲು ಅಧಿಕಾರಿಗಳು ಮುಂದಾಗಲಿ, ನಕ್ಷೆಯಲ್ಲಿರುವಂತೆ ರಸ್ತೆ ವಿಸ್ತರಣೆ ಪ್ರಕ್ರಿಯೆ ಮುಂದುವರೆಯಲಿ’ ಎನ್ನುತ್ತಾರೆ ಸ್ಥಳೀಯ ಅಂಗಡಿ ಮಾಲೀಕ ನವೀನ್.

ರಸ್ತೆ ವಿಸ್ತರಣೆ ವಿಷಯಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಮತ್ತು ನಗರಸಭೆ ಅಧಿಕಾರಿಗಳನ್ನು ಕೇಳಿದರೆ  ‘ಈ ಬಗ್ಗೆ ನಮಗೆ ಯಾವುದೇ ಮಾಹಿತಿಯಿಲ್ಲ’ ಎನ್ನುತ್ತಾರೆ.


ಡೆಹ್ರಾಡೂನ್‌ನಿಂದ ಬಂದ ದಾಖಲೆಗಳು

ಎಂ.ಜಿ. ರಸ್ತೆ ವಿಸ್ತರಣೆಗೆ ಸಂಬಂಧಿಸಿದ ಕಗ್ಗಂಟಿಗೆ ಸೂಕ್ತ ಪರಿಹಾರ ಕಾಣದೆ ವರ್ತಕರು ‌ಮತ್ತು ಅಂಗಡಿ ಮಾಲೀಕರು ಗೊಂದಲಕ್ಕೀಡಾಗಿದ್ದರು. ಆದರೆ ಇತ್ತೀಚೆಗೆ ಕೆಲವು ಕಟ್ಟಡ ಮಾಲೀಕರು ಡೆಹ್ರಾಡೂನ್‌ನಲ್ಲಿನ ಭೂಮಾಪನ ಕಚೇರಿಯಲ್ಲಿ ಶತಮಾನಗಳಿಂದಲೂ ಸಂಗ್ರಹಿಸಿಟ್ಟಿರುವ ಗೌರಿಬಿದನೂರು ನಗರಕ್ಕೆ ಸಂಬಂಧಿಸಿದ ನಕ್ಷೆ ಮತ್ತು ಇತರ ದಾಖಲೆಗಳಲ್ಲಿ ತರಿಸಿದ್ದಾರೆ. ರಸ್ತೆ ವಿಸ್ತರಣೆಯ ಜಪ ಮಾಡುತ್ತಾ ಬರುವ ಅಧಿಕಾರಿಗಳಿಗೆ ಕಟ್ಟಡ ಮಾಲೀಕರು ಅಗತ್ಯ ದಾಖಲೆಗಳನ್ನು ಪ್ರದರ್ಶಿಸುತ್ತಿದ್ದಾರೆ. 

ಸರ್ಕಾರಿ ಕಟ್ಟಡಗಳಿಗೂ ಎದುರಾದ ಆತಂಕ

ನಗರದಲ್ಲಿ ರಸ್ತೆ ವಿಸ್ತರಣೆ ‌ಮತ್ತು‌ ಅಭಿವೃದ್ಧಿ ‌ಕಾರ್ಯಗಳು ಆರಂಭವಾದರೆ ನಗರಸಭೆ ವ್ಯಾಪ್ತಿಯಲ್ಲಿನ ತಾ.ಪಂ. ವಾಣಿಜ್ಯ ಮಳಿಗೆಗಳು, ಟಿಎಪಿಸಿಎಂಸಿ ಕಟ್ಟಡ, ನಗರಸಭೆ ಕಚೇರಿ, ವಾಣಿಜ್ಯ ಸಂಕೀರ್ಣ, ಪೊಲೀಸ್ ಠಾಣೆ ಸೇರಿದಂತೆ ಇತರ ಕಟ್ಟಡಗಳಿಗೂ ಪೆಟ್ಟು ಬೀಳಲಿದೆ. ಆದ್ದರಿಂದ ಅಧಿಕಾರಿಗಳು ‌ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ.

ಗೌರಿಬಿದನೂರು ನಗರದಲ್ಲಿ ಹಾದು‌ಹೋಗುವ ರಾಜ್ಯ ಹೆದ್ದಾರಿಗೆ ಸಂಬಂಧಿಸಿದ 80 ಅಡಿಗಳುಳ್ಳ ರಸ್ತೆಯ ನೀಲಿನಕ್ಷೆ
ಗೌರಿಬಿದನೂರು ನಗರದಲ್ಲಿ ಹಾದು‌ಹೋಗುವ ರಾಜ್ಯ ಹೆದ್ದಾರಿಗೆ ಸಂಬಂಧಿಸಿದ 80 ಅಡಿಗಳುಳ್ಳ ರಸ್ತೆಯ ನೀಲಿನಕ್ಷೆ
ಗೌರಿಬಿದನೂರು ನಗರದಲ್ಲಿ 21 ಅಡಿಗಳ ಅಂತರವಿರುವ ಎಂ.ಜಿ ರಸ್ತೆ (ಹಳೇ ಊರಿನಲ್ಲಿ)
ಗೌರಿಬಿದನೂರು ನಗರದಲ್ಲಿ 21 ಅಡಿಗಳ ಅಂತರವಿರುವ ಎಂ.ಜಿ ರಸ್ತೆ (ಹಳೇ ಊರಿನಲ್ಲಿ)
ರಸ್ತೆಗೆ ಸಂಬಂಧಿಸಿದ ನೀಲಿನಕ್ಷೆ
ರಸ್ತೆಗೆ ಸಂಬಂಧಿಸಿದ ನೀಲಿನಕ್ಷೆ
ನಗರದ ಎಂ.ಜಿ ರಸ್ತೆ ಸಂಚಾರಕ್ಕೆ ಸಂಚಕಾರಕ್ಕೆ ಸಂಚಕಾರವಾಗಿದೆ.
ನಗರದ ಎಂ.ಜಿ ರಸ್ತೆ ಸಂಚಾರಕ್ಕೆ ಸಂಚಕಾರಕ್ಕೆ ಸಂಚಕಾರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT