ಚಿಂತಾಮಣಿ: ರೈತರಿಗೆ ನೆರವಾಗದ ಕೃಷಿ ಯಂತ್ರಧಾರೆ ಕೇಂದ್ರ

ಚಿಂತಾಮಣಿ: ಕೃಷಿ ಯಂತ್ರೋಪಕರಣ ಖರೀದಿಸಲು ಸಾಧ್ಯವಾಗದ ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಕೃಷಿ ಕಾಯಕಕ್ಕೆ ಆಧುನಿಕ ಯಂತ್ರಗಳು ದೊರೆಯುವಂತಾಗಲಿ ಎಂಬ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ‘ಕೃಷಿ ಯಂತ್ರಧಾರೆ’ ಯೋಜನೆಯು ರೈತರಿಗೆ ಯಾವುದೋ ಪ್ರಯೋಜನವಾಗದೇ ಹಳ್ಳ ಹಿಡಿದಿದೆ.
ತಾಲ್ಲೂಕಿನ ಕೋಟಗಲ್ ಗ್ರಾಮದಲ್ಲಿ ತಾಲ್ಲೂಕಿನ ರೈತರಿಗೆ ಅನುಕೂಲವಾಗುವಂತೆ ತೆರೆದಿರುವ ಕೃಷಿ ಯಂತ್ರ ಧಾರೆ ಕೇಂದ್ರದ ಲಾಭ ಆ ಭಾಗದ ರೈತರಿಗೆ ದೊರೆಯುತ್ತಿಲ್ಲ. ಕೇಂದ್ರಕ್ಕೆ ನೀಡಿರುವ ಬಹುತೇಕ ಯಂತ್ರಗಳು ತುಕ್ಕು ಹಿಡಿಯುತ್ತಿವೆ. ಬಹುತೇಕ ಬಾಗಿಲು ಮುಚ್ಚಿರುತ್ತದೆ. ರೈತರಿಗೆ ಸಮಯಕ್ಕೆ ಸರಿಯಾಗಿ ಯಂತ್ರಗಳನ್ನು ನೀಡುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕೃಷಿಯಲ್ಲಿ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿ ಕೃಷಿಯನ್ನು ಲಾಭದಾಯಕವಾಗಿ ರೂಪಿಸಬೇಕು ಹಾಗೂ ಗ್ರಾಮಗಳಲ್ಲಿ ಕೃಷಿಗೆ ಕೂಲಿಯಾಳುಗಳ ಕೊರತೆ ನೀಗಿಸಿಕೊಂಡು ಸಮಯಕ್ಕೆ ಸರಿಯಾಗಿ ಬೇಸಾಯ ಮಾಡಲು ಅನುಕೂಲವಾಗುವಂತೆ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದಲ್ಲಿ ರೈತರಿಗೆ ಪೂರೈಸಲು ಈ ಯೋಜನೆ ರೂಪಿಸಲಾಗಿದೆ. ಆದರೆ, ಈ ಯೋಜನೆ ಕೋಟಗಲ್ ಸೇರಿದಂತೆ ಹಲವೆಡೆ ಇದ್ದೂ ಇಲ್ಲದಂತಾಗಿದೆ.
ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಹೆಚ್ಚು ಬಂಡವಾಳ ಹೂಡಿ ಯಂತ್ರಗಳನ್ನು ಕೊಳ್ಳಲು ಸಾಧ್ಯವಾಗುವುದಿಲ್ಲ. ಜತೆಗೆ ಕೆಲವು ಯಂತ್ರಗಳನ್ನು ವರ್ಷಕ್ಕೆ ಒಂದೆರಡು ಬಾರಿ ಮಾತ್ರ ಉಪಯೋಗಿಸಲಾಗುತ್ತದೆ. ಯಂತ್ರಗಳನ್ನು ಕೃಷಿ ಯಂತ್ರ ಧಾರೆ ಕೇಂದ್ರಗಳಿಂದ ರೈತರಿಗೆ ಒದಗಿಸಿದರೆ ಉತ್ಸಾಹದಿಂದ ಕೃಷಿಯಲ್ಲಿ ತೊಡಗುತ್ತಾರೆ. ಹೆಚ್ಚಿನ ಬಂಡವಾಳ ತೊಡಗಿಸುವ ಸಮಸ್ಯೆ ನಿವಾರಣೆಯಾ ಗುತ್ತದೆ. ಕೂಲಿಯಾಳುಗಳ ಕೊರತೆಗೆ ಪರಿಹಾರ ದೊರೆಯಬೇಕು ಎಂಬುದು ಕೇಂದ್ರಗಳ ಉದ್ದೇಶವಾಗಿದೆ. ಆದರೆ, ಈ ಉದ್ದೇಶ ಈಡೇರುತ್ತಿಲ್ಲ ಎಂದು ರೈತ ಮಂಜುನಾಥ ಬೇಸರ ವ್ಯಕ್ತಪಡಿಸಿದರು.
ಕೃಷಿ ಯಂತ್ರ ಧಾರೆ ಕೇಂದ್ರಗಳನ್ನು ಕೃಷಿ ಇಲಾಖೆಯು ಸ್ವಯಂಸೇವಾ ಸಂಸ್ಥೆಗಳ ಮೂಲಕ ನಡೆಸುತ್ತಿದೆ. ಕೃಷಿ ಇಲಾಖೆಯಿಂದ ಒಪ್ಪಂದ ಮಾಡಿಕೊಂಡಿರುವ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ತಾಲ್ಲೂಕಿನ ಕೋಟಗಲ್, ಬಟ್ಲಹಳ್ಳಿಯಲ್ಲಿ ಆರಂಭಿಸಿರುವ ಕೃಷಿ ಯಂತ್ರ ಧಾರೆ ಕೇಂದ್ರಗಳು ಈ ಭಾಗದ ರೈತರಿಗೆ ಸಮರ್ಪಕವಾಗಿ ಸೇವೆಗಳನ್ನು ನೀಡುತ್ತಿಲ್ಲ ಎಂಬುದು ರೈತರ ಆರೋಪವಾಗಿದೆ.
ಕೋಟಗಲ್ ಕೇಂದ್ರದಲ್ಲಿರುವ ರಾಗಿ ಕಟಾವು, ಭತ್ತದ ಕಟಾವು, ತೆನೆಯನ್ನು ರಾಗಿ ಮಾಡುವ ಯಂತ್ರಗಳ ಉಪಯೋಗವನ್ನೇ ಮಾಡದೆ ತುಕ್ಕು ಹಿಡಿದಿವೆ. ಇತರೆ ಹಲವಾರು ಯಂತ್ರಗಳು ಶಿಥಿಲಗೊಂಡು ಕೆಲಸಕ್ಕೆ ಬರುತ್ತಿಲ್ಲ. ಕೇಂದ್ರದಲ್ಲಿ ಸಾಕಷ್ಟು ದುರುಪಯೋಗ, ಅವ್ಯವಹಾರಗಳು ನಡೆಯುತ್ತಿದೆ ಎಂದು ರೈತರು ಆರೋಪಿಸುತ್ತಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.