ಭಾನುವಾರ, ಜನವರಿ 17, 2021
22 °C
ಅಂತರ್ಜಲ ವೃದ್ಧಿಗೆ ಸಹಕಾರಿ l ಜನ, ಜಾನುವಾರುಗಳಿಗೆ ಅನುಕೂಲ

ಕೃಷಿ ಹೊಂಡ ಭರ್ತಿ: ರೈತರ ಹರ್ಷ

ಜೆ.ವೆಂಕಟರಾಯಪ್ಪ Updated:

ಅಕ್ಷರ ಗಾತ್ರ : | |

Prajavani

ಗುಡಿಬಂಡೆ: ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಕೊರತೆಯಿಂದ ಜನರು ತತ್ತರಿಸಿದ್ದಾರೆ. ಮುಂಗಾರು ಮಳೆ ಹಾಗೂ ಇತ್ತೀಚೆಗೆ ಚಂಡಮಾರುತದ ಪರಿಣಾಮ ಸುರಿದ ಮಳೆಯಿಂದ ಕೆರೆ ಕುಂಟೆ, ಚೆಕ್ ಡ್ಯಾಂ, ಕೃಷಿ ಹೊಂಡ, ಕಲ್ಯಾಣಿಗಳಲ್ಲಿ ನೀರು ಸಂಗ್ರಹಗೊಂಡಿದೆ. ಬರಗಾಲದಿಂದ  ನರಳುತ್ತಿದ್ದ ಜನ– ಜಾನುವಾರುಗಳಿಗೆ ಇದರಿಂದ ಅನುಕೂಲವಾಗಿದೆ. 

ಸತತ ಬರಗಾಲದಿಂದ ತಾಲ್ಲೂಕಿನಲ್ಲಿ ಅಂತರ್ಜಲ ಕುಸಿತದಿಂದ ಸಾವಿರಾರು ಅಡಿವರೆಗೆ ಕೊರೆದರೂ ಕೊಳವೆಬಾವಿಗಳಲ್ಲಿ ನೀರು ಸಿಗುವುದು ಕಷ್ಟಕರವಾಗಿದೆ. ಹತ್ತಾರು ವರ್ಷಗಳ ಹಿಂದೆ ಕೊರೆದ ಕೊಳವೆಬಾವಿಗಳು ಬತ್ತು ಹೋಗಿದ್ದವು. ಈ ವರ್ಷದ ಮಳೆಯಿಂದ ಬೆಳೆಗಳು ನಷ್ಟವಾಗಿದ್ದರೂ ಅಂತರ್ಜಲಮಟ್ಟ ವೃದ್ಧಿಯಾಗಿದ್ದು, ಹಳೇ ಹಾಗೂ ಹೊಸ ಕೊಳವೆಬಾವಿಗಳಲ್ಲಿ ನೀರಿನ ಸಂಗ್ರಹ ಹೆಚ್ಚಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

‘2018-19ನೇ ಸಾಲಿನಡಿ ಕೃಷಿ ಇಲಾಖೆಯಿಂದ ಸುಮಾರು ₹ 35 ಲಕ್ಷ ವೆಚ್ಚದಲ್ಲಿ 72 ಕೃಷಿ ಹೊಂಡಗಳು ರೈತರ ಜಮೀನಿನಲ್ಲಿ ನಿರ್ಮಾಣಗೊಂಡಿದ್ದವು. ಹಳೆಯ ಕೃಷಿ ಹೊಂಡ ಹಾಗೂ ಹೊಸದಾಗಿ ನಿರ್ಮಾಣವಾದ ಕೃಷಿ ಹೊಂಡಗಳಲ್ಲಿ ನೀರು ಸಂಗ್ರಹಗೊಂಡಿದೆ. ಇದು ಕೃಷಿ ಬಳಕೆ ಹಾಗೂ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಿದೆ’ ಎಂದು ಕೃಷಿ ಇಲಾಖೆಯ ಪ್ರಭಾರ ಎಡಿಎ ಎನ್. ಶಂಕರಯ್ಯ ತಿಳಿಸಿದ್ದಾರೆ.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೋಟ್ಯಂತರ ಅನುದಾನದಲ್ಲಿ ತಾಲ್ಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಚೆಕ್ ಡ್ಯಾಂ, ಕುಂಟೆ, ಸಣ್ಣ ಕೆರೆಗಳು ನಿರ್ಮಾಣವಾಗಿವೆ. ಅವುಗಳು ತುಂಬಿ ತುಳುಕುತ್ತಿವೆ. 

ತಾಲ್ಲೂಕಿನ ವಾಡಿಕೆ ಮಳೆ ಪ್ರಮಾಣ 715 ಮಿ.ಮೀ. ಈ ಬಾರಿ 733 ಮಿ.ಮೀ. ಮಳೆ ಬಿದ್ದಿದೆ. ಕೃಷಿಗೆ ಬಳಕೆಯಾಗುವ ಪಟ್ಟಣದ ಅಮಾನಿಬೈರಸಾಗರ ಕೆರೆ, ಹಂಪಸಂದ್ರ ಕುಡಮಕುಂಟೆ ಕೆರೆಯನ್ನು ₹ 2 ಕೋಟಿ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿತ್ತು.

ಈ ಕೆರೆಗಳಲ್ಲೂ ನೀರು ಸಂಗ್ರಹವಾಗಿದೆ. ಬೆಟ್ಟಗುಡ್ಡಗಳ ತಪ್ಪಲಿನ ಸೋಮಲಾಪುರ ಸುಬ್ಬಾರಾಯನ ಕುಂಟೆ, ಗೋ ಕುಂಟೆಗಳು ಭರ್ತಿಯಾಗಿವೆ. 

ಉಲ್ಲೋಡು ಗ್ರಾಮ ಪಂಚಾಯಿತಿಯ ನಿಚ್ಚನಬಂಡಹಳ್ಳಿಯ ಕದಿರರೆಡ್ಡಿ ಅವರ ಜಮೀನಿನಲ್ಲಿ 21 ಮೀಟರ್ ಉದ್ದ, 21 ಮೀಟರ್‌ ಅಗಲ, 3 ಮೀಟರ್ ಆಳದ ಕೃಷಿ ಹೊಂಡ ನಿರ್ಮಾಣವಾಗಿದೆ. ಇದರಲ್ಲಿ ನೀರು ಸಂಗ್ರಹವಾಗಿದ್ದು, ಸಣ್ಣ ಕೆರೆಯಂತೆ ಕಾಣುತ್ತಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.