ಸೋಮವಾರ, ಸೆಪ್ಟೆಂಬರ್ 20, 2021
28 °C

ವಿದ್ಯುತ್ ಖಾಸಗೀಕರಣಕ್ಕೆ ರೈತರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ರೈತರಿಗೆ ಹಾಗೂ ನೌಕರರಿಗೆ ಮಾರಕವಾಗುವ ವಿದ್ಯುತ್ ಖಾಸಗೀಕರಣ ಮತ್ತು ರೈತರ ಪಂಪ್‌ಸೆಟ್‌ಗಳಿಗೆ ಪ್ರೀಪೇಯ್ಡ್‌ ಮೀಟರ್ ಅಳವಡಿಸುವ ಮಸೂದೆಯನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡನೆ ಮಾಡಬಾರದೆಂದು ಪ್ರಧಾನ ಮಂತ್ರಿಗೆ ಶಿರಸ್ತೇದಾರ್ ಮಂಜುನಾಥ್ ಮೂಲಕ ರೈತ ಸಂಘದ ಸದಸ್ಯರು ಬುಧವಾರ ಮನವಿ ಸಲ್ಲಿಸಿದರು.

ದೇಶದಲ್ಲಿ ಶೇ 60ರಷ್ಟು ಕೃಷಿ ಕ್ಷೇತ್ರ ಅವಲಂಬಿಸಿರುವ ಕೋಟ್ಯಂತರ ರೈತರಿಗೆ ವಿದ್ಯುತ್ ಖಾಸಗೀಕರಣ ಮಸೂದೆ ಕಂಟಕವಾಗಲಿದೆ. ಈಗಾಗಲೇ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೃಷಿ ವಿರೋಧಿ ನೀತಿಗಳಿಂದ ರೈತರು ದಿನೇ ದಿನೇ ಕೃಷಿಯಿಂದ ವಿಮುಕ್ತರಾಗುತ್ತಿದ್ದಾರೆ ಎಂದು ದೂರಿದರು.

ಲಕ್ಷಾಂತರ ರೂಪಾಯಿ ಬಂಡ ವಾಳ ಹಾಕಿ ಬೆಳೆದಂತಹ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೇ ರಸ್ತೆಗೆ ಸುರಿಯುವ ಪರಿಸ್ಥಿತಿಯಿದೆ. ಅತಿವೃಷ್ಟಿ, ಅನಾವೃಷ್ಟಿ ಹಾಗೂ ರೋಗ ಗಳಿಗೆ ರೈತರ ಬೆಳೆಗಳು ನಾಶವಾಗುತ್ತಿವೆ. ನಷ್ಟದ ನಡುವೆಯೇ ಕೃಷಿಯನ್ನೇ ಅವಲಂಬಿ ರೈತರಿಗೆ ಇದೀಗ ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಮಸೂದೆಯು ಕೃಷಿ ಕ್ಷೇತ್ರಕ್ಕೆ ಮರಣಶಾಸನವಾಗಲಿದೆ ಎಂದರು.

ವಿದ್ಯುತ್ ಖಾಸಗೀಕರಣವಾದರೆ ಬಡ ರೈತರು, ಕೂಲಿ ಕಾರ್ಮಿಕರಿಗೆ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ಕೃಷಿ ಪಂಪ್‌ಸೆಟ್, ಬೀದಿದೀಪ, ನೀರು ಸರಬರಾಜಿಗೆ ನೀಡುತ್ತಿರುವ ಉಚಿತ ವಿದ್ಯುತ್ ನಿಲ್ಲಲಿದೆ. ಇದ ರಿಂದ ಖಾಸಗಿಯವರ ಕೈಗೆ ರೈತರ ಜುಟ್ಟು ಕೊಟ್ಟಂತಾಗುತ್ತದೆ. ರೈತರ ಮೇಲೆ ಸರ್ಕಾರ ಗದಾಪ್ರಹಾರಕ್ಕೆ ಮುಂದಾಗಿರುವುದು ಸರಿಯಲ್ಲ. ಕೃಷಿ ಕ್ಷೇತ್ರವನ್ನು ನಾಶ ಮಾಡಿ ಬಂಡವಾಳಶಾಹಿ ಕೈಗೆ ಸಂಪೂರ್ಣವಾಗಿ ನೀಡಿ ಆಹಾರ ಕೊರತೆಯನ್ನು ಸೃಷ್ಟಿಸಲಿದೆ ಎಂದು ಆರೋಪಿಸಿದರು.

ರೈತ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಕೆ. ಮುನಿಕೆಂಪಣ್ಣ, ಜಿಲ್ಲಾ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ನಾಗೇಶ, ಮಂಜುನಾಥ್, ನಾರಾಯಣಸ್ವಾಮಿ, ಗೋಪಾಲಕೃಷ್ಣ, ನವೀನ್, ಬೈರೇಗೌಡ, ಮುನಿರಾಜು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.