ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ತಡೆ: ಸಂಚಾರ ವ್ಯತ್ಯಯ

Last Updated 7 ಫೆಬ್ರುವರಿ 2021, 1:19 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಿ ಐಕ್ಯ ಹೋರಾಟ ಸಮಿತಿಯು ರಾಜ್ಯ ಹೆದ್ದಾರಿ ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲೂ ರೈತ ಮುಖಂಡರು ಹೆದ್ದಾರಿ ತಡೆ ನಡೆಸಿದರು.

ರೈತ ಸಂಘ ಮತ್ತು ಹಸಿರು ಸೇನೆ, ಪ್ರಜಾ ಸಂಘರ್ಷ ಸಮಿತಿ, ಜನವಾದಿ ಮಹಿಳಾ ಸಂಘಟನೆ ಸೇರಿದಂತೆ ಪ್ರಗತಿಪರ, ದಲಿತ, ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರು ಪಟ್ಟಣ ಹೊರವಲಯದ ರಾಷ್ಟ್ರೀಯ ಹೆದ್ದಾರಿ-7ರಲ್ಲಿ ಕೆಲಕಾಲ ಹೆದ್ದಾರಿ ತಡೆ ಮಾಡಿದರು. ಟಿ.ಬಿ. ಕ್ರಾಸ್‌ನಿಂದ ಮದರಸಾವರೆಗೂ ಪ್ರತಿಭಟನಾ ಮೆರವಣಿಗೆ ಮಾಡಿದರು. ಮದರಸಾ ಮುಂದೆ ಪೊಲೀಸರು ಬ್ಯಾರಿಕೇಡ್ ಹಾಕಿದರು. ಹೆದ್ದಾರಿಗೆ ಆಗಮಿಸಿದ ಪ್ರತಿಭಟನಾಕಾರರು ಕೆಲಕಾಲ ಪ್ರತಿಭಟನೆ ನಡೆಸಿದರು. ಇದರ ಪರಿಣಾಮ ಕನ್ಯಾಕುಮಾರಿ, ಜಮ್ಮು ಮತ್ತು ಕಾಶ್ಮೀರಕ್ಕೆ ಸಂಪರ್ಕಿಸುವ ಈ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಂಚಾರ ವ್ಯತ್ಯಯದಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು.

ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಮಾತನಾಡಿ, ದೆಹಲಿಯ ಗಡಿಯಲ್ಲಿ ರೈತರು ಪ್ರತಿಭಟನೆ ಮಾಡುತ್ತಿದ್ದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮಾತನಾಡುವ ಸೌಜನ್ಯ ಇಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಪರ ಇವೆ ಎಂದು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ರೈತರ ಪರ ಇದ್ದರೆ ಕೃಷಿ ಕೂಲಿಕಾರ್ಮಿಕರ ವಿರೋಧಿ ಕಾಯ್ದೆಗಳನ್ನು ಏಕೆ ಜಾರಿ ಮಾಡುತ್ತೀರಿ ಎಂದು ಪ್ರಶ್ನಿಸಿದರು.

ಹಸಿರು ಸೇನೆಯ ರಾಜ್ಯ ಸಂಚಾಲಕ ಲಕ್ಷ್ಮಣ ರೆಡ್ಡಿ ಮಾತನಾಡಿ, ರೈತರ ಹೋರಾಟ ಬೆಂಬಲಿಸಿ ದೇಶದಾದ್ಯಂತ ಕೃಷಿ ಕೂಲಿಕಾರ್ಮಿಕರು, ಪ್ರಗತಿಪರ, ದಲಿತ, ವಿದ್ಯಾರ್ಥಿ, ಮಹಿಳಾ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡುತ್ತಿವೆ. ಆದರೆ, ಪ್ರಧಾನಿ ಮಾತ್ರ ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಕಾಯ್ದೆಗಳನ್ನು ವಾಪಸ್ ಪಡೆಯುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದರು.

ಪ್ರಜಾ ಸಂಘರ್ಷ ಸಮಿತಿಯ ಜಿಲ್ಲಾ ಸಹ ಸಂಚಾಲಕ ಚನ್ನರಾಯಪ್ಪ, ಮುಖಂಡರಾದ ಜಿ.ಎಂ. ರಾಮಕೃಷ್ಣಪ್ಪ, ಜುಬೇರ್ ಅಹಮದ್, ಎಸ್.ಎನ್. ಚಂದ್ರಶೇಖರರೆಡ್ಡಿ, ಆರ್. ಚಂದ್ರಶೇಖರರೆಡ್ಡಿ, ಚಲಪತಿ, ಭಾಷಾ, ನಾರಾಯಣಸ್ವಾಮಿ, ಎಲ್. ವೆಂಕಟೇಶ್, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಬಿ. ಸಾವಿತ್ರಮ್ಮ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಸಂಚಾಲಕಿ ಸಿ. ಉಮಾ, ಮುಖಂಡರಾದ ಟಿ.ಆರ್. ಪ್ರಮೀಳಾ, ಅನಿತಾ, ದಲಿತ ಹಕ್ಕುಗಳ ಸಮಿತಿಯ ತಾಲ್ಲೂಕು ಅಧ್ಯಕ್ಷ ಅಶ್ವಥಪ್ಪ, ಎಸ್‌ಎಫ್‌ಐ ಜಿಲ್ಲಾ ಅಧ್ಯಕ್ಷ ಎಸ್. ಸೋಮಶೇಖರ್, ತಾಲ್ಲೂಕು ಅಧ್ಯಕ್ಷ ಸತೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT