ಚಿಕ್ಕಬಳ್ಳಾಪುರ: ನಗರದ ಕೆ.ವಿ.ಕ್ಯಾಂಪಸ್ ಬಳಿ ತಾತ್ಕಾಲಿಕವಾಗಿ ನಡೆಯುತ್ತಿರುವ ಹೂವಿನ ಮಾರುಕಟ್ಟೆಯು ಚಿಕ್ಕಬಳ್ಳಾಪುರದ ಎಪಿಎಂಸಿ ಆವರಣಕ್ಕೆ ಸ್ಥಳಾಂತರವಾಗುವ ಸಾಧ್ಯತೆ ಇದೆ. ಈ ಸಂಬಂಧ ಎಪಿಎಂಸಿ ಕಾರ್ಯದರ್ಶಿ ಅವರು ತಾತ್ಕಾಲಿಕ ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿರುವ ಹೂವಿನ ವ್ಯಾಪಾರಿಗಳ ಸಂಘಕ್ಕೆ ಮತ್ತು ವ್ಯಾಪಾರಿಗಳಿಗೆ ನೋಟಿಸ್ ನೀಡಿದ್ದಾರೆ. ಎಪಿಎಂಸಿ ಆವರಣದಲ್ಲಿ ವಹಿವಾಟು ನಡೆಸುವಂತೆ ತಿಳಿಸಿದ್ದಾರೆ.
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನಿಯಮದ ಪ್ರಕಾರ ಸಮಿತಿಯಿಂದ ವಿತರಿಸಿರುವ ದಲ್ಲಾಳರ ಪರವಾನಗಿಯು ಮಾರುಕಟ್ಟೆ ಪ್ರಾಂಗಣದಲ್ಲಿ ಮಾತ್ರ ವ್ಯವಹರಿಸಲು ಸೀಮಿತವಾಗಿದೆ. ಮಾರುಕಟ್ಟೆ ಪ್ರಾಂಗಣದಲ್ಲಿ ವಹಿವಾಟು ನಡೆಸದಿದ್ದಲ್ಲಿ ಸದರಿ ಪರವಾನಗಿಯನ್ನು ರದ್ದುಪಡಿಸುವ ಅಧಿಕಾರವನ್ನು ಸಮಿತಿ ಹೊಂದಿದೆ. ಒಮ್ಮೆ ಪರವಾನಗಿ ರದ್ದಾದ ನಂತರ ಎಪಿಎಂಸಿಯಲ್ಲಿ ಹಂಚಿಕೆ ಮಾಡಿರುವ ನಿವೇಶನಗಳನ್ನು ಯಾವುದೇ ಪರಿಹಾರ ನೀಡದೆ ಹಿಂದಕ್ಕೆ ಪಡೆಯುವ ಅಧಿಕಾರವನ್ನೂ ಸಮಿತಿಯು ಹೊಂದಿದೆ.
ತಮ್ಮ ಸಂಘದಲ್ಲಿ ನೋಂದಾಯಿಸಿ ಎಪಿಎಂಸಿಯಲ್ಲಿ ನಿವೇಶನ ಹೊಂದಿ ಅಂಗಡಿ ನಿರ್ಮಿಸಿರುವ ದಲ್ಲಾಳರಿಗೆ ಪ್ರಾಂಗಣದಲ್ಲಿ ವಹಿವಾಟ ನಡೆಸಲು ತಿಳಿಸಿ ಎಂದು ಚಿಕ್ಕಬಳ್ಳಾಪುರ ಹೂವಿನ ವರ್ತಕರ ಸಂಘಕ್ಕೆ ಎಪಿಎಂಸಿ ಕಾರ್ಯದರ್ಶಿ ಲಿಖಿತವಾಗಿ ಸೂಚಿಸಿದ್ದಾರೆ.
ಎಪಿಎಂಸಿಯಲ್ಲಿ ವಹಿವಾಟು ನಡೆಸುವಂತೆ ಕಾರ್ಯದರ್ಶಿ ನೋಟಿಸ್ ನೀಡಿದ ನಂತರ ವರ್ತಕರ ಸಂಘದಿಂದ ಕಾರ್ಯದರ್ಶಿ ಅವರಿಗೆ ಮನವಿ ಸಹ ಸಲ್ಲಿಸಲಾಗಿದೆ. ಎಪಿಎಂಸಿಯಲ್ಲಿ ವಾಹನಗಳ ದಟ್ಟಣೆ ಹೆಚ್ಚುತ್ತದೆ. ವಹಿವಾಟಿಗೆ ತೊಂದರೆ ಆಗುತ್ತದೆ. ಆದ್ದರಿಂದ ಆದಷ್ಟು ಬೇಗ ಅಗಲಗುರ್ಕಿ ಬಳಿ ನೂತನ ಮಾರುಕಟ್ಟೆ ನಿರ್ಮಿಸುವಂತೆ ಸಂಘವು ಮನವಿ ಮಾಡಿದೆ.
ಕೆ.ವಿ.ಕ್ಯಾಂಪಸ್ ಬಳಿಯ ಮಾರುಕಟ್ಟೆಯನ್ನು ಉಪ ಮಾರುಕಟ್ಟೆಯನ್ನಾಗಿ ಘೋಷಿಸಿ ಅಲ್ಲಿ ವಹಿವಾಟು ನಡೆಸುತ್ತಿರುವ ಸುಮಾರು 100 ವರ್ತಕರಿಗೆ ಮಾರುಕಟ್ಟೆ ಶುಲ್ಕ, ಬಳಕೆದಾರರ ಶುಲ್ಕ ಪಾವತಿಸಲು ಅವಕಾಶ ಮಾಡಿಕೊಡಬೇಕು ಎಂದು ಲಿಖಿತವಾಗಿ ಸಂಘವು ಕೋರಿದೆ.
ಈ ಮನವಿಗೆ ಸಮಿತಿ ಕಾರ್ಯದರ್ಶಿ ಹಿಂಬರಹ ಸಹ ನೀಡಿದ್ದಾರೆ. ಮಾರುಕಟ್ಟೆ ಪ್ರಾಂಗಣದಲ್ಲಿ ವ್ಯವಹಾರ ನಡೆಸದಿದ್ದರೆ ಪರವಾನಗಿ ರದ್ದುಗೊಳಿಸುವ ಅಧಿಕಾರವನ್ನು ಸಮಿತಿ ಹೊಂದಿದೆ. ಪರವಾನಗಿ ರದ್ದಾದರೆ ಹಂಚಿಕೆ ಮಾಡಿರುವ ನಿವೇಶನವನ್ನು ವಾಪಸ್ ಪಡೆಯುವ ಅಧಿಕಾರ ಸಹ ಇದೆ.
ವರ್ತಕರ ಸಂಘದಲ್ಲಿರುವ ಶೇ 60ರಷ್ಟು ಪರವಾನಗಿದಾರರು ಸಮಿತಿಯಿಂದ ದಲ್ಲಾಳರ ಪರವಾನಗಿ ಪಡೆದಿದ್ದಾರೆ. ತಾವು ಪಡೆದಿರುವ ದಲ್ಲಾಳರ ಪರವಾನಗಿ ಮತ್ತು ಹಂಚಿಕೆಯಾಗಿರುವ ನಿವೇಶನ, ಗೋದಾಮುಗಳನ್ನು ಸಮಿತಿಗೆ ಹಿಂದಿರುಗಿರಿಸಿ, ನಂತರ ಕೇಂದ್ರ ಕಚೇರಿಯ ಅನುಮೋದನೆ ಪಡೆದು ಖಾಸಗಿ ಮಾರುಕಟ್ಟೆ ಸ್ಥಾಪಿಸಬಹುದು ಎಂದು ಹಿಂಬರಹದಲ್ಲಿ ಕಾರ್ಯದರ್ಶಿ ತಿಳಿಸಿದ್ದಾರೆ.
1995ರಲ್ಲಿ ಚಿಕ್ಕಬಳ್ಳಾಪುರ ಎಪಿಎಂಸಿ ಸ್ಥಾಪನೆಯಾಯಿತು. ಪ್ರಾಂಗಣದಲ್ಲಿಯೇ ಹೂವಿನ ವಹಿವಾಟು ನಡೆಯುತ್ತಿತ್ತು. ಆದರೆ ಕೋವಿಡ್ ಸಮಯದಲ್ಲಿ ಅಂತರ ಕಾಪಾಡುವ ಮತ್ತು ಜನದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಕೆ.ವಿ.ಕ್ಯಾಂಪಸ್ ಬಳಿಯ ಖಾಸಗಿ ಜಾಗದಲ್ಲಿ ತಾತ್ಕಾಲಿಕ ಮಾರುಕಟ್ಟೆಗೆ ಅವಕಾಶ ಕಲ್ಪಿಸಲಾಯಿತು. ಅಲ್ಲಿಂದ ಇಂದಿಗೂ ತಾತ್ಕಾಲಿಕ ಮಾರುಕಟ್ಟೆಯಲ್ಲಿಯೇ ವ್ಯಾಪಾರಿಗಳು ಮತ್ತು ಬೆಳೆಗಾರರು ವಹಿವಾಟು ನಡೆಸುತ್ತಿದ್ದಾರೆ.
ಕೋವಿಡ್ ಹಂತ ಹಂತವಾಗಿ ತೆರವಾಯಿತು. ಆಗ ಕೆಲವು ವ್ಯಾಪಾರಿಗಳು ಎಪಿಎಂಸಿಯಲ್ಲಿ ಮತ್ತೆ ವಹಿವಾಟು ನಡೆಸಬೇಕು ಎಂದು ಪ್ರತಿಭಟಿಸಿದರು. ನಂತರ ಎಪಿಎಂಸಿ ವರ್ತಕರು ಮತ್ತು ರೈತರ ನಡುವೆ ರಾಜಕಾರಣ ಸಹ ಪ್ರವಹಿಸಿತು. ಬಣಗಳಾದವು. ಕೆಲವು ವರ್ತಕರು, ವ್ಯಾಪಾರಿಗಳು ತಾತ್ಕಾಲಿಕ ಮಾರುಕಟ್ಟೆಯಲ್ಲಿಯೇ ವ್ಯಾಪಾರ ಮುಂದುವರಿಸಬೇಕು. ಎಪಿಎಂಸಿಯಲ್ಲಿ ಜಾಗದ ಸಮಸ್ಯೆ ಇದೆ. ಹೊಸ ಮಾರುಕಟ್ಟೆ ನಿರ್ಮಿಸಬೇಕು. ನಾವು ಎಪಿಎಂಸಿಯಲ್ಲಿ ವಹಿವಾಟು ನಡೆಸುವುದಿಲ್ಲ ಎಂದು ಪಟ್ಟುಹಿಡಿದರು. ವಿವಾದವು ಹೈಕೋರ್ಟ್ ಮೆಟ್ಟಿಲೇರಿತು.
ಚಿಕ್ಕಬಳ್ಳಾಪುರ ಎಪಿಎಂಸಿಯು ಒಟ್ಟು 29.31 ಎಕರೆ ಇದೆ. ಎಪಿಎಂಸಿಯಲ್ಲಿ ದನದ ವಹಿವಾಟು ನಡೆಸುವ ಜಾಗ ಸಹ ಖಾಲಿ ಇದೆ. ಇಲ್ಲಿಯೂ ಹೂ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕು ಎನ್ನುವುದು ಕೆಲವು ವರ್ತಕರು ಮತ್ತು ಹೂ ಬೆಳೆಗಾರರ ಆಗ್ರಹವಾಗಿದೆ.
ಹೂವು ಮಾರುಕಟ್ಟೆ ನಿರ್ಮಾಣಕ್ಕೆ ಅಗಲಗುರ್ಕಿ ಗ್ರಾಮದ ಸರ್ವೆ ನಂ 122ರಲ್ಲಿ 9.05 ಎಕರೆ ಜಮೀನನ್ನು ಜಿಲ್ಲಾಡಳಿತ ಮಂಜೂರು ಸಹ ಮಾಡಿದೆ. ಆದರೆ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ದೊರೆತಿಲ್ಲ. ಬಹುತೇಕ ವರ್ತಕರು ತಾತ್ಕಾಲಿಕ ಹೂವಿನ ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿದ್ದರೆ ಕೆಲವರು ಎಪಿಎಂಸಿಯಲ್ಲಿ ವಹಿವಾಟು ನಡೆಸುತ್ತಿದ್ದಾರೆ.
ಎಪಿಎಂಸಿ ಕಾರ್ಯದರ್ಶಿ ನೋಡಿರುವ ನೋಟಿಸ್‌ಗೆ ಒಪ್ಪಿ ವರ್ತಕರು ಎಪಿಎಂಸಿಯಲ್ಲಿ ವಹಿವಾಟು ನಡೆಸುವರು ಅಥವಾ ವಿವಾದ ಯಾವ ರೂಪದಲ್ಲಿ ಮುಂದುವರಿಯುತ್ತದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಈಗ ನಡೆಯುತ್ತಿರುವ ತಾತ್ಕಾಲಿಕ ಹೂವು ಮಾರುಕಟ್ಟೆ ಮತ್ತು ಎಪಿಎಂಸಿಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳ ಬಗ್ಗೆ ಪರಿಶೀಲಿಸುವೆ. ನಂತರ ಈ ಬಗ್ಗೆ ಮಾತನಾಡುವೆ.ಡಾ.ಎಂ.ಸಿ.ಸುಧಾಕರ್ ಜಿಲ್ಲಾ ಉಸ್ತುವಾರಿ ಸಚಿವ
ಹೊಸ ಮಾರುಕಟ್ಟೆ; ಸಮಯ ಅಗತ್ಯ ಅಗಲಗುರ್ಕಿ ಬಳಿ ಎಪಿಎಂಸಿಗೆ 9.5 ಎಕರೆ ಜಮೀನು ಮಂಜೂರಾಗಿದೆ. ಇದಕ್ಕಾಗಿ ಸಮಿತಿ ₹ 76 ಲಕ್ಷ ಸಹ ಪಾವತಿಸಿದೆ. ಇಲ್ಲಿ ಹೂ ಮಾರುಕಟ್ಟೆ ಅಭಿವೃದ್ಧಿಗೆ ಸಮಯಾವಕಾಶ ಅಗತ್ಯವಿದೆ. ಹೊಸ ಮಾರುಕಟ್ಟೆ ನಿರ್ಮಾಣವಾದರೆ ಹೂ ವಹಿವಾಟು ನಡೆಸುವ ಎಲ್ಲ ವ್ಯಾಪಾರಿಗಳು ಅಲ್ಲಿಗೆ ಸ್ಥಳಾಂತರಗೊಳ್ಳಬೇಕಾಗುತ್ತದೆ ಎಂದು ಎಪಿಎಂಸಿ ಕಾರ್ಯದರ್ಶಿ ಉಮಾ ತಿಳಿಸಿದರು.
ಎಪಿಎಂಸಿಯಲ್ಲಿ ಜಾಗದ ಸಮಸ್ಯೆ ‘ಎಪಿಎಂಸಿಯಲ್ಲಿ ಜಾಗದ ಸಮಸ್ಯೆ ಇದೆ. ನಿತ್ಯ ಸಾವಿರಾರು ರೈತರು ವಹಿವಾಟಿಗೆ ಬರುವ ಕಾರಣ ಎಂ.ಜಿ ರಸ್ತೆಯಲ್ಲಿ ವಾಹನ ದಟ್ಟಣೆ ಎದುರಾಗಬಹುದು. ಕಾರ್ಯದರ್ಶಿ ಅವರು ನೋಟಿಸ್ ನೀಡಿದ್ದಾರೆ. ನಾವು ಕಾನೂನು ಗೌರವಿಸಿ ನಡೆಯುತ್ತೇವೆ’ ಎಂದು ಚಿಕ್ಕಬಳ್ಳಾಪುರ ಹೂವು ವರ್ತಕರ ಸಂಘದ ಅಧ್ಯಕ್ಷ ರವೀಂದ್ರ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.