ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲದ ಸಿದ್ಧತೆ ಮರೆತ ನಗರಸಭೆ

ನಗರದಲ್ಲಿ ದಿನೇ ದಿನೇ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಚರಂಡಿ –ರಾಜಕಾಲುವೆಗಳು, ತಗ್ಗು ಪ್ರದೇಶದ ಜನರಿಗೆ ತಪ್ಪುತ್ತಿಲ್ಲ ಮನೆಗೆ ನೀರು ನುಗ್ಗುವ ಗೋಳು
Last Updated 22 ಜೂನ್ 2018, 15:14 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮಳೆಗಾಲಕ್ಕೂ ಮುನ್ನ ನಗರದ ಚರಂಡಿ, ರಾಜ ಕಾಲುವೆಗಳನ್ನು ಸ್ವಚ್ಛಗೊಳಿಸಿ, ಸುಸಜ್ಜಿತವಾಗಿಡುವ ಕೆಲಸವನ್ನು ನಗರಸಭೆ ಮರೆತೇ ಬಿಟ್ಟಿದೆ ಎನ್ನುವ ಅಸಮಾಧಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಇದರ ಪರಿಣಾಮ ಎನ್ನುವಂತೆ, ವರ್ಷದಿಂದ ವರ್ಷಕ್ಕೆ ನಗರದಲ್ಲಿ ಕಾಲುವೆಗಳು ಚರಂಡಿ ಗಾತ್ರಕ್ಕೆ ಕುಗ್ಗಿ, ಚರಂಡಿಗಳು ಹೂಳಿನಿಂದ ಮುಚ್ಚಿವೆ. ಜೋರಾಗಿ ಮಳೆ ಸುರಿದಾಗ ಅನೇಕ ಕಡೆಗಳಲ್ಲಿ ಪ್ರವಾಹ ಸ್ಥಿತಿ ತಲೆದೋರಿ, ತಗ್ಗು ಪ್ರದೇಶಗಳಲ್ಲಿ ನೀರು ಮನೆಗಳಿಗೆ ನುಗುತ್ತಿದೆ. ನಾಗರಿಕರನ್ನು ಹೈರಾಣು ಮಾಡುತ್ತಿದೆ.

ನಗರಸಭೆಯ ವ್ಯಾಪ್ತಿಯ 31 ವಾರ್ಡ್‌ಗಳ ಪೈಕಿ ಯಾವುದೇ ವಾರ್ಡ್‌ಗೆ ಹೋದರೂ ಸ್ವಚ್ಛ ಚರಂಡಿ ಕಾಣುವುದು ಅಪರೂಪ. ಅಚ್ಚರಿ ಅಂದರೆ ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 10 ವರ್ಷ ಕಳೆದರೂ ಇನ್ನು ಕೆಲವೆಡೆ ಚರಂಡಿಗಳೇ ನಿರ್ಮಾಣವಾಗಿಲ್ಲ. ಚರಂಡಿ ಇರುವೆಡೆ ಸ್ವಚ್ಛತೆ ಮರೀಚಿಕೆಯಾಗಿದೆ.

ನಗರದ ಬಹುಪಾಲು ಚರಂಡಿಗಳು ಕೊಳಚೆ ನೀರಿನಿಂದ ಮಡುಗಟ್ಟಿತಿವೆ. ಸಂಜೆ ಸೊಳ್ಳೆಗಳ ಕಾಟಕ್ಕೆ ನಾಗರಿಕರು ಸಂಜೆಯಾದರೆ ಮನೆಯ ಬಾಗಿಲು, ಕಿಟಕಿಗಳನ್ನು ತೆರೆಯಲು ಹಿಂದೇಟು ಹಾಕುವ ಸ್ಥಿತಿ ಇದೆ.

ಒಂದೆಡೆ ಭೂಗಳ್ಳರ ಕಾಕದೃಷ್ಟಿ, ಇನ್ನೊಂದೆಡೆ ನಗರಸಭೆಯ ನಿರ್ಲಕ್ಷ್ಯದಿಂದ ಚರಂಡಿಗಳು ಬಾಯಿ ಹೊಲಿದುಕೊಂಡು, ಸತ್ತು ಮಲಗಿದಂತಿವೆ. ಒತ್ತುವರಿ ಮೇಲೆ ಕಣ್ಣಿಡಬೇಕಾದ ಕಂದಾಯ ಇಲಾಖೆ, ಕಾಲ ಕಾಲಕ್ಕೆ ಹೂಳೆತ್ತಿ ಮಳೆ ನೀರಿಗೆ ಸರಾಗ ಹರಿವು ಕಲ್ಪಿಸಿಕೊಡಬೇಕಾದ ನಗರಸಭೆ ಕರ್ತವ್ಯ ಮರೆತಿವೆ ಎನ್ನುವುದು ಸಾರ್ವಜನಿಕರ ಆಕ್ರೋಶ ಭರಿತ ಆರೋಪ.

ನಗರಸಭೆಯ ವ್ಯಾಪ್ತಿಯಲ್ಲಿರುವ 2ನೇ ವಾರ್ಡ್‌ (ವಾಪಸಂದ್ರ), 3ನೇ ವಾರ್ಡ್‌ (ದರ್ಗಾ ಮೊಹಲ್ಲಾ), 4ನೇ ವಾರ್ಡ್ (ಪ್ರಶಾಂತ್‌ ನಗರ, ಭಗತ್‌ ಸಿಂಗ್ ನಗರ), 5ನೇ ವಾರ್ಡ್‌ (ದಿನ್ನೆ ಹೊಸಹಳ್ಳಿ ರಸ್ತೆ), 8ನೇ ವಾರ್ಡ್‌ (ಜೈಭೀಮ್ ನಗರ, ಜಿಲ್ಲಾ ಆಸ್ಪತ್ರೆ ಮುಂಭಾಗದ ಪ್ರದೇಶ), 21ನೇ ವಾರ್ಡ್‌ (ನಕ್ಕಲಕುಂಟೆ)... ಹೀಗೆ ಅನೇಕ ವಾರ್ಡ್‌ಗಳಲ್ಲಿ ಜೋರು ಮಳೆ ಸುರಿದ ಸಂದರ್ಭದಲ್ಲಿ ಒಂದು ಸುತ್ತು ಹಾಕಿದರೆ ಜನ ನಲಗುವ ಸಮಸ್ಯೆಗಳು ದಂಡಿಯಾಗಿ ಗೋಚರಿಸುತ್ತವೆ.

ಇದೀಗ ಮುಂಗಾರು ಆರಂಭಗೊಂಡಿದೆ. ಹೀಗಾಗಿ ಈ ಎಲ್ಲ ವಾರ್ಡ್‌ಗಳ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ. ಅಧಿಕಾರಿಗಳು ಮಾತ್ರ ನಿರಾಂತಕವಾಗಿದ್ದಾರೆ. ಸದ್ಯ ನಗರದಲ್ಲಿ ಆರು ವಾರ್ಡ್‌ಗಳ ಪೈಕಿ ಸುಮಾರು 240 ಮನೆಗಳಿಗೆ ನೀರು ನುಗ್ಗುತ್ತದೆ.

ಕೆಲ ಪ್ರದೇಶಗಳಲ್ಲಿ ಜನರು ಜೋರಾಗಿ ಮಳೆ ಸುರಿದರೆ ಮನೆ ತಲುಪಲು ಬಗೆ ಬಗೆಯಲ್ಲಿ ಸರ್ಕಸ್‌ ಮಾಡಬೇಕು. ಹಲವೆಡೆ ಮನೆಗೆ ನುಗ್ಗಿದ ನೀರು ಹೊರ ಹಾಕಿ, ಹಾಕಿ ಸುಸ್ತಾದವರ ಮುಖದಲ್ಲಿ ಅಳುವುದೇ ಬಾಕಿ. ನಗರದ ರೇಷ್ಮೆಗೂಡು ಮಾರುಕಟ್ಟೆ ಬಳಿಯ ಕೊಳೆಗೇರಿಯಲ್ಲಿ ಕಳೆದ ಮಳೆಗಾಲದಲ್ಲಿ ಉಕ್ಕಿ ಬರುವ ಮಳೆ ನೀರು ಮನೆಯಲ್ಲಿದ್ದ ವಸ್ತುಗಳೆಲ್ಲ ಕೊಚ್ಚಿ, ಕೆಲ ಹೊತ್ತಿನಲ್ಲೇ ಜನರನ್ನು ಅಕ್ಷರಶಃ ನಿರಾಶ್ರಿತರನ್ನಾಗಿ ಮಾಡಿತ್ತು. ಆಸರೆಗಾಗಿ ಕತ್ತಲಲ್ಲಿ ಮೊರೆ ಇಡುತ್ತಿದ್ದವರಿಗೆ ನಗರಸಭೆ ಅಧಿಕಾರಿಗಳು ಮಾರುಕಟ್ಟೆಯ ಕಟ್ಟಡದಲ್ಲಿ ಆಶ್ರಯ ಒದಗಿಸಿ, ಆಹಾರ, ಹೊದಿಕೆ ಏರ್ಪಾಟು ಮಾಡಿದ್ದರು.

ಗಮನಿಸಬೇಕಾದ ಅಂಶಗಳೆಂದರೆ ಮಳೆಯಿಂದ ತತ್ತರಿಸುವ ಪ್ರದೇಶಗಳಲ್ಲಿ ಕೆಳ ವರ್ಗದವರು, ದಲಿತರು, ಅಲ್ಪಸಂಖ್ಯಾತರು, ಬಡವರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ತಲೆ ಮೇಲಿನ ಸೂರಿಗೆ ಪರದಾಡುವ ಜನರು ಜೋರು ಮಳೆಯಿಂದ ಒತ್ತರಿಸಿ ಬರುವ ನೀರಿನಿಂದಾಗಿ ಮತ್ತಷ್ಟು ಕಂಗಾಲಾಗಿ ಹೋಗಿದ್ದಾರೆ. ಕಾಳಜಿ ತೋರಬೇಕಾದವರು ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿರುವುದು ಜನಸಾಮಾನ್ಯರಲ್ಲಿ ಬೇಸರ ಮೂಡಿಸಿದೆ.

ಬೆಂಕಿ ಹತ್ತಿದಾಗ ಬಾವಿ ತೋಡುತ್ತಾರೆ

‘ನಗರ ಯೋಜನಾ ತಜ್ಞರ ಪ್ರಕಾರ ಮಳೆಗಾಲದಲ್ಲಿ ಹೂಳು ಎತ್ತಿಟ್ಟರೆ ಮಳೆ ನೀರಿನಲ್ಲಿ ಅದು ಮತ್ತೆ ಚರಂಡಿ ಸೇರುತ್ತದೆ. ಹೀಗಾಗಿ ಮಳೆಗಾಲಕ್ಕೂ ಪೂರ್ವದಲ್ಲಿಯೇ ನಗರ ಸ್ಥಳೀಯ ಸಂಸ್ಥೆಗಳು ಚರಂಡಿಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಬೇಕು. ಆದರೆ ನಗರದಲ್ಲಿ ನಗರಸಭೆಯವರು ಮಳೆಗಾಲಕ್ಕೂ ಪೂರ್ವದಲ್ಲಿ ಚರಂಡಿ ಹೂಳನ್ನು ಎತ್ತಿದ್ದಂತೂ ನಾನು ಕಂಡಿಲ್ಲ. ಬದಲು ‘ಬೆಂಕಿ ಹತ್ತಿದಾಗ ಬಾವಿ ತೋಡಿದರು’ ಎನ್ನುವ ಗಾದೆಯಂತೆ ನೀರು ನಿಂತಲ್ಲಿ ಹೋಗಿ ಅದನ್ನು ಸಾಗ ಹಾಕುವ ಕೆಲಸ ಮಾಡುತ್ತಾರೆ’
–ಪಿ.ಮಂಜುನಾಥ್‌, 8ನೇ ವಾರ್ಡ್‌ ನಿವಾಸಿ

ಇಚ್ಛಾಶಕ್ತಿ ಕೊರತೆ

ನಗರ ಜಿಲ್ಲಾ ಕೇಂದ್ರವಾಗಿ 10 ವರ್ಷಗಳು ಕಳೆದರೂ ಇಂದಿಗೂ ಸುಸಜ್ಜಿತವಾಗಿ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಕೆಲಸ ನಡೆದಿಲ್ಲ. ಚರಂಡಿಗಳು ಒತ್ತುವರಿಯಾಗಿದ್ದರೆ ತೆರವುಗೊಳಿಸಲು ಅಧಿಕಾರಿಗಳಿಗೆ ಏನು ಕಷ್ಟವಿದೆ ಕೇಳಿ ನೋಡಿ? ಇಚ್ಛಾಶಕ್ತಿ ಕೊರತೆಯ ಜನಪ್ರತಿನಿಧಿಗಳು, ಜಾಣ ಕುರುಡು ಪ್ರದರ್ಶಿಸುವ ಅಧಿಕಾರಿಗಳು ಸೇರಿ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಚರಂಡಿಗಳು ಕಟ್ಟಿಕೊಂಡು ವಿಪರೀತ ಸೊಳ್ಳೆ ಕಾಟ ಮನೆ ಕಿಟಕಿ, ಬಾಗಿಲು ತೆರೆಯುವಂತಿಲ್ಲ.
- ಗೋವಿಂದರಾಜು, ಕೆಳಗಿನ ತೋಟದ ನಿವಾಸಿ.

ಆರಂಭವಾಗಲೇ ಇಲ್ಲ ಅಭಿವೃದ್ಧಿ ಕಾರ್ಯ

‘ನಗರದಲ್ಲಿ ರಾಜಕಾಲುವೆ ಒತ್ತುವರಿ ಪತ್ತೆ ಮಾಡಲು ಸರ್ವೆ ಕಾರ್ಯ ನಡೆಸುವಂತೆ ಜಿಲ್ಲಾಧಿಕಾರಿ ಅವರು ಇತ್ತೀಚೆಗೆ ಕಂದಾಯ ಇಲಾಖೆಯವರಿಗೆ ಆದೇಶಿಸಿದ್ದಾರೆ. ಸರ್ವೆ ಬಳಿಕ ಒತ್ತುವರಿ ತೆರವುಗೊಳಿಸಲಾಗುತ್ತದೆ. ಈಗಾಗಲೇ ಮುಖ್ಯಮಂತ್ರಿ ಅವರ ವಿಶೇಷ ಅನುದಾನದ ₹ 50 ಕೋಟಿ ಪೈಕಿ ಮಳೆ ನೀರು ಕಾಲುವೆ ಮತ್ತು ಮುಖ್ಯ ಕಾಲುವೆಗಳು ಅಭಿವೃದ್ಧಿಗಾಗಿಯೇ ₹ 5 ಕೋಟಿ ನೀಡಲಾಗಿದೆ. ಆ ಕಾಮಗಾರಿಯ ಕ್ರೀಯಾಯೋಜನೆಗೆ ಇತ್ತೀಚೆಗಷ್ಟೇ ಸರ್ಕಾರದಿಂದ ಅನುಮೋದನೆ ಕೂಡ ದೊರೆತಿದೆ. ಆದ್ದರಿಂದ ಆದಷ್ಟು ಬೇಗ ಚರಂಡಿ, ಕಾಲುವೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ’ ಎಂದು ನಗರಸಭೆ ಆಯುಕ್ತ ಉಮಾಕಾಂತ್ ಅವರು ಕಳೆದ ವರ್ಷದ ಮಳೆಗಾಲದ ಸಂದರ್ಭದಲ್ಲಿ ಹೇಳಿದ್ದರು. ಆದರೆ ಈವರೆಗೆ ಕಾಲುವೆ ಒತ್ತುವರಿ ಪತ್ತೆ ಮಾಡಲು ಸರ್ವೆ ಕಾರ್ಯವಾಗಲಿ, ಒತ್ತುವರಿ ತೆರವು ನಡೆಸಿದ ಸಣ್ಣ ಕುರುಹು ಸಹ ಸಾರ್ವಜನಿಕರಿಗೆ ಕಂಡಿಲ್ಲ.

ಮಾತಿನಲ್ಲೇ ಮನೆ ಕಟ್ಟುವವರಿಗೆ ಕೊಳಚೆ ನೀರು ಹೊಕ್ಕ ಮನೆಯವರ ಪಾಡು ಅರಿವಿಗೆ ಬಂದಿಲ್ಲ. ಭಾಷಣ ಬಿಗಿಯುವವರು ಯಾವತ್ತೂ ಸೊಳ್ಳೆ ಕಡಿಸಿಕೊಂಡಿಲ್ಲ.
- ಅವಿನಾಶ್, 2ನೇ ವಾರ್ಡ್ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT