ಭಾನುವಾರ, ಮಾರ್ಚ್ 26, 2023
31 °C
ಪರಿಶಿಷ್ಟ ಜಾತಿಗೆ 440, ಪಂಗಡಕ್ಕೆ 113, ಒಬಿಸಿಗೆ 842 ನಿವೇಶನ

ಚಿಕ್ಕಬಳ್ಳಾಪುರ| ನಗರದ ಬಡವರಿಗೆ ಉಚಿತ ನಿವೇಶನ: ಡಾ.ಕೆ. ಸುಧಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ನಗರ ವ್ಯಾಪ್ತಿಯ ಐದು ಸಾವಿರ ನಿವೇಶನ ರಹಿತರಿಗೆ ಉಚಿತ ನಿವೇಶನ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು. 

ನಗರ ವ್ಯಾಪ್ತಿಯ ಬಡವರಿಗೆ ಉಚಿತ ನಿವೇಶನ ಹಂಚಿಕೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ವಾರ್ಡ್‌ ಸಭೆಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿಯ 440, ಪರಿಶಿಷ್ಟ ವರ್ಗದ 113, ಹಿಂದುಳಿದ ವರ್ಗದ 842 ಮತ್ತು ಅಲ್ಪಸಂಖ್ಯಾತ 870 ಕುಟುಂಬಗಳು ಸೇರಿದಂತೆ ಒಟ್ಟಾರೆ 2,270 ಮಂದಿಗೆ ನಿವೇಶನ ಕಲ್ಪಿಸಲಾಗುತ್ತದೆ. ಈ ಮೂಲಕ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗಿದೆ ಎಂದರು. 

ಪ್ರಸ್ತುತ ಸಾಲಿನಲ್ಲಿ ನಿವೇಶನ ಪಡೆಯುತ್ತಿರುವ ಎಲ್ಲರಿಗೂ ಮುಂದಿನ ವರ್ಷ ಮನೆ ನಿರ್ಮಿಸಿಕೊಡುವ ಪ್ರಯತ್ನ ಮಾಡಲಾಗುವುದು. ಈ ಹಿಂದೆ ಇದ್ದ ಯಾವುದೇ ಶಾಸಕರು ಈ ಪ್ರಮಾಣದಲ್ಲಿ ನಿವೇಶನ ನೀಡಿದ ಉದಾಹರಣೆ ಇಲ್ಲ. ಅಧಿಕಾರಿಗಳ ನಿರಂತರ ಶ್ರಮದಿಂದ ಇಂತಹ ಸಾಧನೆ ಸಾಧ್ಯವಾಗಿದೆ ಎಂದರು.

ನಗರ ವ್ಯಾಪ್ತಿಯ ನಿವಾಸಿಗಳಿಗೆ ಉಚಿತ ನಿವೇಶನ ನೀಡಲು 190 ಎಕರೆ ಭೂಮಿ ಗುರುತಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದರಲ್ಲಿ ಒಟ್ಟು 179 ಎಕರೆ ಭೂಮಿಯನ್ನು ಸರ್ಕಾರ ಮಂಜೂರು ಮಾಡಿದೆ ಎಂದರು.

ಕೊಳಚೆ ಪ್ರದೇಶಗಳಲ್ಲಿ ವಾಸಿಸುವವರಿಗೆ ಈಗಾಗಲೇ 870 ಮನೆ ನಿರ್ಮಾಣ ಮಾಡಲಾಗುತ್ತಿದೆ. ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ದೇಶದಾದ್ಯಂತ 11 ಕೋಟಿ ಮನೆಗಳನ್ನು ನೀಡಿದ್ದು, ಇದರಲ್ಲಿ 4 ಕೋಟಿ ಮನೆ ಸಂಪೂರ್ಣ ನಿರ್ಮಾಣವಾಗಿವೆ. ಉಳಿದ ಮನೆಗಳು ವಿವಿಧ ಹಂತಗಳಲ್ಲಿ ನಿರ್ಮಾಣವಾಗುತ್ತಿವೆ ಎಂದು ಹೇಳಿದರು.

ನಗರಸಭಾ ಅಧ್ಯಕ್ಷ ಆನಂದರೆಡ್ಡಿ, ಲೀಲಾವತಿ ಶ್ರೀನಿವಾಸ್, ಅರುಣ್ ಕುಮಾರ್, ಶ್ರೀನಾಥ್, ಕೃಷ್ಣಮೂರ್ತಿ, ಬಾಬು, ನರಸಿಂಹಮೂರ್ತಿ, ಮೊಬೈಲ್ ಬಾಬು, ಶೋಭಾ ರವಿಕುಮಾರ್, ಮುಜಾಮಿಲ್ ಪಾಷಾ ಹಾಜರಿದ್ದರು.

‘ ಅಮಿತ್ ಶಾ ಭೇಟಿಯಿಂದ ಅನುಕೂಲ’

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜ್ಯ ಭೇಟಿಯಿಂದ ಬಿಜೆಪಿಗೆ ಅನುಕೂಲವಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದೆಲ್ಲೆಡೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಆರಂಭವಾಗಲಿದ್ದು, ಇದರ ಭಾಗವಾಗಿ ದೇವನಹಳ್ಳಿ ತಾಲ್ಲೂಕಿನ ಆವತಿ ಗ್ರಾಮದಿಂದ ವಿಜಯ ಸಂಕಲ್ಪ ಯಾತ್ರೆ ಮಾರ್ಚ್ 3ರಂದು ಆರಂಭವಾಗಲಿದೆ. ಆವತಿ ಗ್ರಾಮ ಕೆಂಪೇಗೌಡರ ಜನ್ಮಸ್ಥಳವಾಗಿದ್ದು, ಇಲ್ಲಿಂದ ಆರಂಭವಾಗಲಿರುವ ಯಾತ್ರೆ ದೇವನಹಳ್ಳಿಯಲ್ಲಿ ಬೃಹತ್ ಸಾರ್ವಜನಿಕ ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಮಾರ್ಚ್ 11ರ ಶನಿವಾರ ನಗರದಲ್ಲಿ ಆಯೋಜಿಸಲಾದ ಶ್ರೀನಿವಾಸ ಕಲ್ಯಾಣ ಉತ್ಸವದಲ್ಲಿ ಕ್ಷೇತ್ರದ ಜನ ಭಾಗವಹಿಸಬೇಕು. ತಿರುಪತಿ ಮಾದರಿಯಲ್ಲೇ ಇಲ್ಲಿ ಕಲ್ಯಾಣೋತ್ಸವ ಮಾಡಲಾಗುತ್ತಿದೆ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು