ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಉತ್ತಮ ಮಳೆ, ಬಂಪರ್ ಬೆಳೆ ನಿರೀಕ್ಷೆ

ಚಿಂತಾಮಣಿ: ನೆಲಗಡಲೆ, ತೊಗರಿ, ರಾಗಿ l ಬಿತ್ತನೆ ಶೇ 83ರಷ್ಟು ಗುರಿ ಸಾಧನೆ
Last Updated 4 ಸೆಪ್ಟೆಂಬರ್ 2020, 1:42 IST
ಅಕ್ಷರ ಗಾತ್ರ

ಚಿಂತಾಮಣಿ: ಸುಮಾರು ಒಂದು ದಶಕದ ನಂತರ ತಾಲ್ಲೂಕಿನಲ್ಲಿ ಸೂಕ್ತ ಕಾಲಾವಧಿಯಲ್ಲಿ ಉತ್ತಮ ಮಳೆಯಾಗಿದ್ದು ರಾಗಿ, ತೊಗರಿ, ನೆಲಗಡಲೆ ಬಂಪರ್ ಬೆಳೆಯನ್ನು ನಿರೀಕ್ಷಿಸಲಾಗಿದೆ. ಸಕಾಲದಲ್ಲಿ ಬಿತ್ತನೆಯಾಗಿದ್ದು ಮಳೆ ಆಧಾರಿತ ಎಲ್ಲ ಬೆಳೆಗಳು ನಳನಳಿಸುತ್ತಿವೆ. ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರೈತರ ಮುಖದಲ್ಲಿ ಮಂದಹಾಸ ಮೂಡುತ್ತಿದೆ.

ಜನವರಿಯಿಂದ ಆಗಸ್ಟ್‌ವರೆಗೆ ತಾಲ್ಲೂಕಿನಲ್ಲಿ 377 ಮಿ.ಮೀ ವಾಡಿಕೆ ಮಳೆಯಾಗಬೇಕಿದ್ದು, 492 ಮಿ.ಮೀ ಮಳೆಯಾಗಿದೆ. ಜುಲೈನಲ್ಲಿ 80 ಮಿ.ಮೀ ಮಳೆಯಾಗಬೇಕಿತ್ತು. 187 ಮಿ.ಮೀ ಮಳೆಯಾಗಿದೆ. ಆಗಸ್ಟ್‌ನಲ್ಲಿ 108 ಮಿ.ಮೀ ವಾಡಿಕೆ ಮಳೆಯಾಗಿದ್ದು, 115 ಮಿ.ಮೀ ಮಳೆಯಾಗಿದೆ. ಜುಲೈ– ಆಗಸ್ಟ್‌ನಲ್ಲಿ ಹದವಾದ ಮಳೆಯಾಗಿರುವುದರಿಂದ ರೈತರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.

ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು 33,118 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿತ್ತು. 27,465 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇದುವರೆಗೆ ಶೇ 83ರಷ್ಟು ಸಾಧನೆಯಾಗಿದೆ.

ಮುಂಗಾನಹಳ್ಳಿ, ಚಿಲಕಲನೇರ್ಪು, ಮುರುಗಮಲ್ಲ ಹೋಬಳಿಗಳಲ್ಲಿ ಹೆಚ್ಚಾಗಿ ಬೆಳೆಯುವ ನೆಲಗಡಲೆ ಹೂ ಬಿಡುತ್ತಿದ್ದು, ಹೂಡು ಇಳಿಯುವ ಹಂತದಲ್ಲಿದೆ. ತೊಗರಿಯೂ 8-10 ದಿನಗಳಲ್ಲಿ ಹೂ ಬರುತ್ತದೆ. ರೈತರು ಕಳೆ ಕೀಳುವುದು, ತೊಗರಿ ಕುಡಿ ಚಿವುಟುವ ಕಾಯಕದಲ್ಲಿ ನಿರತರಾಗಿದ್ದಾರೆ.

ಕೈವಾರ, ಕಸಬಾ, ಅಂಬಾಜಿದುರ್ಗ ಹೋಬಳಿಗಳಲ್ಲಿ ಹೆಚ್ಚಾಗಿ ಬೆಳೆಯುವ ರಾಗಿ, ಅವರೆ ಬೆಳೆ ಸಮೃದ್ಧವಾಗಿದೆ. ಕಳೆ ಕೀಳುವುದು, ಖಾಲಿ ಜಾಗಗಳಲ್ಲಿ ಪೈರು ನಾಟಿ ಮಾಡುವ ಕೆಲಸಗಳಲ್ಲಿ ರೈತರು ತೊಡಗಿಸಿಕೊಂಡಿದ್ದಾರೆ. ಕಳೆದ 3- 4 ವರ್ಷಗಳಿಂದ ಮಳೆ ಕೈಕೊಟ್ಟಿದ್ದರಿಂದ ನೆಲಗಡಲೆ, ತೊಗರಿಯನ್ನು ಬೆಳೆದಿದ್ದ ರೈತರು ನಷ್ಟ ಅನುಭವಿಸಿದ್ದರು.

‘ತಾಲ್ಲೂಕಿನ ಎಲ್ಲ ಭಾಗಗಳಲ್ಲೂ ಉತ್ತಮ ಮಳೆಯಾಗಿದ್ದು, ಬೆಳೆಗಳು ಸಮೃದ್ಧವಾಗಿ ಬೆಳೆಯುತ್ತಿವೆ. ಇನ್ನು ಎರಡು-ಮೂರು ಮಳೆ ಬಂದರೆ ಹೆಚ್ಚು ಇಳುವರಿ ಬರಲಿದೆ. ಈ ವರ್ಷ ಹೆಚ್ಚಿನ ಉತ್ಪಾದನೆ ನಿರೀಕ್ಷೆ ಮಾಡಲಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ಶ್ರೀನಿವಾಸ್ ತಿಳಿಸಿದರು.

‘ತಾಲ್ಲೂಕಿನಲ್ಲಿ ರಾಗಿ, ತೊಗರಿ, ನೆಲಗಡಲೆ, ಮುಸುಕಿನ ಜೋಳ ಪ್ರಮುಖ ಬೆಳೆಗಳಾಗಿವೆ. ರಾಗಿ 16,145 ಬಿತ್ತನೆಯ ಗುರಿ ಹೊಂದಿದ್ದು, 14,530 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ತೊಗರಿ 2,658 ಹೆಕ್ಟೇರ್‌ಗೆ 2,128 ಹೆಕ್ಟೇರ್, ನೆಲಗಡಲೆ 7,813 ಹೆಕ್ಟೇರ್ ಗೆ 7,089 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಹೈಬ್ರಿಡ್ ಮುಸುಕಿನ ಜೋಳ 3,898 ಹೆಕ್ಟೇರ್ ಬಿತ್ತನೆಯ ಗುರಿಯಾಗಿದ್ದು, 2,800 ಹೆಕ್ಟೇರ್ ಬಿತ್ತನೆಯಾಗಿದೆ’ ಎಂದು ಕೃಷಿ ಅಧಿಕಾರಿ ಜಿ.ಕೆ.ದ್ಯಾವಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT