ಶುಕ್ರವಾರ, ಜೂನ್ 5, 2020
27 °C
ಮಹಾರಾಷ್ಟ್ರದಿಂದ ವಲಸೆ ಬಂದ ಶ್ರಮಿಕರ ಕಷ್ಟ ಕೇಳುವವರಿಲ್ಲ

ಅನ್ನವಿಲ್ಲದೆ ಕಂಗೆಟ್ಟ ಕಾರ್ಮಿಕರು

ಎ.ಎಸ್.ಜಗನ್ನಾಥ್ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ನೀರು, ತುತ್ತು ಅನ್ನಕ್ಕಾಗಿ ಕೈ ಚಾಚುತ್ತಿರುವ ಮಕ್ಕಳು, ಹರಕಲು ಬಟ್ಟೆಯಲ್ಲಿರುವ ಗಂಡಸರು, ಬೊಗಸೆ ಅಕ್ಕಿ–ಬೇಳೆಗಾಗಿ ಕೈ ಮುಗಿದು ಬೇಡಿಕೊಳ್ಳುವ ಮಹಿಳೆಯರು, ಯಾರಾದರೂ ಸಹಾಯಕ್ಕೆ ಬರುವರೇ ಎಂದು ಹುಡುಕುತ್ತಿರುವ ಕೂಲಿ‌ ಕಾರ್ಮಿಕರು.

ತಾಲ್ಲೂಕಿನ ನಗರಗೆರೆ ಹೋಬಳಿಯ ಮಣಿವಾಲ ಗ್ರಾಮದ ಕೆರೆಯಲ್ಲಿ ವಾಸವಾಗಿರುವ ಮಹಾರಾಷ್ಟ್ರದ ಕೂಲಿ‌ ಕಾರ್ಮಿಕರ ಬದುಕಿನ ಚಿತ್ರಣವಿದು.

ಕುಡಿಯಲು ನೀರು, ತಿನ್ನಲು‌ ಅನ್ನವಿಲ್ಲದೆ ಎರಡು ದಿನಗಳಿಂದ ಕಂಗಾಲಾಗಿದ್ದಾರೆ ಈ ಅಲೆಮಾರಿ ಶ್ರಮಿಕರು.

ಯಾರಿವರು: ಗೌರಿಬಿದನೂರು ತಾಲ್ಲೂಕಿನ ವಾಟದಹೊಸಹಳ್ಳಿ ಗ್ರಾಮ ಪಂಚಾಯಿತಿ ‌ವ್ಯಾಪ್ತಿಯಲ್ಲಿನ ಮಣಿವಾಲ ಗ್ರಾಮದ ಹೊರವಲಯದಲ್ಲಿರುವ ಕೆರೆಯಂಗಳದಲ್ಲಿ 80ಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ಕೆರೆಯಂಗಳದಲ್ಲೆ ಬಿದಿರು, ಬಟ್ಟೆ, ಪ್ಲಾಸ್ಟಿಕ್‌, ಗೋಣಿಚೀಲ, ದಾರ ಮುಂತಾದವುಗಳನ್ನು ಬಳಸಿಕೊಂಡು ತಾತ್ಕಾಲಿಕ ಗುಡಿಸಲುಗಳನ್ನು ಕಟ್ಟಿಕೊಂಡಿದ್ದಾರೆ. ಇವರಲ್ಲಿ 20ಕ್ಕೂ ಹೆಚ್ಚು ಪುಟ್ಟ ಮಕ್ಕಳೂ ಇದ್ದಾರೆ. ಎಲ್ಲರೂ ಐದು ವರ್ಷದೊಳಗಿನ ಕಂದಮ್ಮಗಳು.

ಬುಡಕಟ್ಟು ಸಮುದಾಯಕ್ಕೆ ಸೇರಿದ ಈ‌ ಕಾರ್ಮಿಕರು ಮಹಾರಾಷ್ಟ್ರದವರು. ಗುತ್ತಿಗೆದಾರರೊಬ್ಬರು ಇವರನ್ನು ಕರೆದುಕೊಂಡುಬಂದು ಈ ಕೆರೆಯಲ್ಲಿನ ಜಾಲಿ ಮರಗಳ ಬುಡಗಳನ್ನು ಸುಟ್ಟು ಇದ್ದಿಲು ಮಾಡುವ ಕೆಲಸದಲ್ಲಿ ತೊಡಗಿಸಿದ್ದರು. ಇವರಿಗೆ ಬೇಕಾದ ತಾತ್ಕಾಲಿಕ ಸೌಕರ್ಯಗಳನ್ನು ಒದಗಿಸಿದ್ದರು.

ಲಾಕ್‌ಡೌನ್ ಬಳಿಕ ಗುತ್ತಿಗೆದಾರ ಇವರ ಸಂಪರ್ಕಕ್ಕೆ ಸಿಗುತ್ತಿಲ್ಲ. ಇವರಲ್ಲಿದ್ದ ಅಕ್ಕಿ, ಬೇಳೆ ಖಾಲಿಯಾಗಿವೆ. ಬಳಿಕ ಸಮೀಪದ ಹಳ್ಳಿಗಳಲ್ಲಿ‌ಯೂ ಆಹಾರ ಸಾಮಗ್ರಿ ಸಿಗದೆ ಕಂಗಾಲಾಗಿದ್ದಾರೆ. ಯಾವ ಅಧಿಕಾರಿಯೂ ಇತ್ತ ಸುಳಿಯಲಿಲ್ಲ ಎಂದು ಅವರು ತಿಳಿಸಿದರು.

ಇದರ ಬಗ್ಗೆ ಮಾಹಿತಿ ತಿಳಿದ ತಕ್ಷಣ ಕರ್ನಾಟಕ ವಿಕಲಚೇತನರ ಸಂಘದ ಕಾರ್ಯದರ್ಶಿ ಬಿ.ಕಿರಣ್ ನಾಯಕ್ ಅವರು ನೀರು ಮತ್ತು ಬಿಸ್ಕೆಟ್ ನೀಡಿದರು. ಕೂಲಿ ಕಾರ್ಮಿಕರ ಸಂಕಷ್ಟವನ್ನರಿತು ಶೀಘ್ರದಲ್ಲೇ ದಾನಿಗಳ ಸಹಕಾರದಿಂದ ತಾತ್ಕಾಲಿಕವಾಗಿ ಊಟದ ವ್ಯವಸ್ಥೆ ಕಲ್ಪಿಸಲಾಗುವುದು ಎಂಬ ಭರವಸೆ ನೀಡಿದರು.

ಈ‌‌ ವಿಚಾರವಾಗಿ ಸ್ಥಳೀಯ ಪಿಡಿಒ ಅಧಿಕಾರಿ ಬಾಲಕೃಷ್ಣ ಅವರನ್ನು ಕೇಳಿದಾಗ, ಗ್ರಾಮದ ಕೆರೆಯಲ್ಲಿ ಕೂಲಿ‌ ಕಾರ್ಮಿಕರು ವಾಸವಿರುವ ಬಗ್ಗೆ ಮಾಹಿತಿ ಇಲ್ಲ, ಕೂಡಲೇ ಸ್ಥಳಪರಿಶೀಲನೆ ಮಾಡಿ ಮಾಹಿತಿ ಪಡೆಯುತ್ತೇನೆ ಎಂದರು.

ಗುಡಿಸಲಲ್ಲಿ ಹತ್ತು ಜನ ವಾಸ

ಕೊರೊನಾ ವೈರಾಣು ಹರಡದಂತೆ‌ ಇಡೀ ಜಿಲ್ಲೆಯನ್ನು ಲಾಕ್‌ಡೌನ್‌ ಮಾಡಿ 10 ದಿನ ಕಳೆದಿದೆ. ಎಲ್ಲೆಂದರಲ್ಲಿ ಜಾಗೃತಿ, ಅರಿವು ಮೂಡಿಸುವ ಕೆಲಸ ಭರದಿಂದ ನಡೆದಿದೆ. ಆದರೆ, ಈವರೆಗೂ ಈ ಅಲೆಮಾರಿಗಳನ್ನು ಯಾರೊಬ್ಬರೂ ಕಣ್ಣೆತ್ತಿ ನೋಡಿಲ್ಲ. ಕೆರೆಯಲ್ಲಿನ ಗುಡಿಸಲ ಆಚೆಗಿನ ಪ್ರಪಂಚದಲ್ಲಿ ಏನು ನಡೆಯುತ್ತಿದೆ ಎಂಬ ಪರಿವೇ ಇಲ್ಲದೇ ಈ ಜನ ಬದುಕುತ್ತಿದ್ದಾರೆ. ಗುಂಪಾಗಿಯೇ ಕಾಲ ಕಳೆಯುತ್ತಿದ್ದಾರೆ. ಪುಟ್ಟ ಗುಡಿಸಲಲ್ಲಿ ಹತ್ತು ಜನ ಮುದುಡಿಕೊಂಡು ಮಲಗುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.