ಮಂಗಳವಾರ, ಮೇ 17, 2022
29 °C
ಗಡಿ ಶಾಲೆಗಳಿಗೆ ಶಿಕ್ಷಣ ಸಚಿವರ ಭೇಟಿ, ವಿದ್ಯಾರ್ಥಿಗಳೊಂದಿಗೆ ಸಂವಾದ

ಮಕ್ಕಳ ಭವಿಷ್ಯಕ್ಕೆ ಸರ್ಕಾರಿ ಶಾಲೆ ಆಸರೆ: ಸಚಿವ ಎಸ್.ಸುರೇಶ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಎಸ್.ಸುರೇಶ್ ಕುಮಾರ್ ಶುಕ್ರವಾರ ತಾಲ್ಲೂಕಿನ ವಿವಿಧ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿ ಶಾಲೆಯಲ್ಲಿನ ಸಮಸ್ಯೆಗಳು ಹಾಗೂ ಇಲಾಖೆ ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಸುರಕ್ಷತಾ ಕ್ರಮಗಳು ಮತ್ತು ಸೌಲಭ್ಯಗಳ ಬಗ್ಗೆ ಚರ್ಚಿಸಿದರು.

ಕಲ್ಲಿನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿ ಶಿಕ್ಷಕರು ತಯಾರಿಸಿ ಶಾಲಾ ಕೊಠಡಿಯಲ್ಲಿ ಅಳವಡಿಸಿರುವ ಕಲಿಕಾ ಉಪಕರಣಗಳ ಬಗ್ಗೆ ಪರಿಶೀಲಿಸಿ ಅವುಗಳ ಬಳಕೆಯ ಬಗ್ಗೆ ಮಾಹಿತಿ ಪಡೆದರು. ಬಳಿಕ ತರಗತಿಯಲ್ಲಿದ್ದ 10 ನೇ ತರಗತಿ ಮಕ್ಕಳೊಂದಿಗೆ ಪಠ್ಯ ವಿಷಯಗಳ ಬಗ್ಗೆ ಚರ್ಚಿಸಿ, ಈ ಬಾರಿಯ ವಾರ್ಷಿಕ ಪರೀಕ್ಷೆಗಳನ್ನು ಯಾವ ತಿಂಗಳಿನಲ್ಲಿ ಮಾಡಬಹುದು, ಪಠ್ಯಕ್ರಮದಲ್ಲಿ ಮತ್ತಷ್ಟು ಕಡಿತ ಮಾಡಬೇಕೆ, ಮಧ್ಯಾಹ್ನದ ಬಿಸಿಯೂಟವನ್ನು ಸದ್ಯದಲ್ಲಿ ಆರಂಭಿಸಬಹುದೇ ಎಂಬಿತ್ಯಾದಿ ಪ್ರಶ್ನೆಗಳನ್ನು ವಿದ್ಯಾರ್ಥಿಗಳ ಮುಂದಿಟ್ಟು ಉತ್ತರ ಪಡೆಯಲು ಪ್ರಯತ್ನಿಸಿದರು.

ನಗರದ ಪ್ರವಾಸಿ ಮಂದಿರಕ್ಕೆ ತೆರಳಿ ಅಲ್ಲಿ ಬಿಜೆಪಿ ಕಾರ್ಯಕರ್ತರನ್ನು ಭೇಟಿ ಮಾಡಿ ನಗರದಲ್ಲಿನ ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿದರು.

ಓದುಗರಿಗೆ ಬೇಕಾದ ವ್ಯವಸ್ಥಿತ ಮತ್ತು ಆಸಕ್ತಿದಾಯಕವಾದ ವಾತಾವರಣ ಹಾಗೂ ಮೂಲಸೌಕರ್ಯಗಳು ಈ‌ ಸ್ಥಳದಲ್ಲಿ ಲಭ್ಯವಿಲ್ಲದ ಕಾರಣ ನಗರಸಭೆಯ ಅಧಿಕಾರಿಗಳು ಸೂಕ್ತ ಸ್ಥಳಾವಕಾಶವನ್ನು ‌ಮಾಡಿ ಗ್ರಂಥಾಲಯವನ್ನು ಶೀಘ್ರದಲ್ಲೇ ಬೇರೆಡೆಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಹುದುಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲಾ ವಾತಾವರಣವನ್ನು ಅವಲೋಕಿಸಿ ಕಳೆದ ಶೈಕ್ಷಣಿಕ ವರ್ಷದ 10ನೇ ತರಗತಿಯ ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿನಿ ಸುಚಿತ್ರ ಹಾಗೂ ಇನ್‌ಸ್ಫೈರ್‌ ಸ್ಪರ್ಧೆಯಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ 9ನೇ ತರಗತಿಯ ವಿದ್ಯಾರ್ಥಿನಿ ಮುತ್ತಕ್ಕ ಅವರಿಗೆ ಬಹುಮಾನ ನೀಡಿ ಅಭಿನಂದಿಸಿದರು. ಗಡಿ ಭಾಗದಲ್ಲಿನ ನಂಜಯ್ಯಗಾರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿನ ಶಿಕ್ಷಕರ ಕಾರ್ಯದಕ್ಷತೆ ಹಾಗೂ ಮಕ್ಕಳ ಕ್ರಿಯಾಶೀಲ ಕಲಿಕೆಯನ್ನು ಪರಿಶೀಲಿಸಿದರು.

‘ರಾಜ್ಯದ ಗಡಿ‌ಭಾಗದಲ್ಲಿನ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕರು ಕಾರ್ಯನಿರ್ವಹಿಸುವುದೇ ವಿರಳ. ಅಂತಹ ಪರಿಸ್ಥಿತಿಯಲ್ಲಿ ದಶಕಗಳಿಂದ ಇದೇ ಶಾಲೆಯಲ್ಲಿ ಕಾರ್ಯನಿರ್ವಹಿಸಿ‌ ಮಕ್ಕಳ ಕಲಿಕೆಗೆ ಅವಶ್ಯಕವಿರುವ ಮೂಲ ಸೌಕರ್ಯಗಳನ್ನು ದಾನಿಗಳ ಮೂಲಕ‌ ಪಡೆದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಹೆಚ್ಚಿಸುವ ಜತೆಗೆ ಸರ್ಕಾರಿ ಶಾಲೆಗಳ ಗುಣಮಟ್ಟ ಮತ್ತು ಮೌಲ್ಯ ಕಾಪಾಡುವಲ್ಲಿ ಶ್ರಮಿಸುತ್ತಿರುವ ಶಿಕ್ಷಕರ ಬದ್ಧತೆ ನಿಜಕ್ಕೂ ಶ್ಲಾಘನೀಯವಾಗಿದೆ’ ಎಂದು ಎಸ್.ಸುರೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

‘ಪ್ರತಿ ಮಗುವಿನಲ್ಲಿ ಕಲಿಕೆಯ ತುಡಿತ ಹಾಗೂ ಪೋಷಕರನ್ನು ಆಕರ್ಷಿಸುವಂತಹ ಶಾಲೆಯನ್ನು ನಿರ್ಮಾಣ ಮಾಡಲು ಶ್ರಮಿಸಿದ ಎಲ್ಲ ಶಿಕ್ಷಕರ ಶ್ರಮ ಉತ್ತಮವಾಗಿದೆ. ಇದರೊಂದಿಗೆ ಅನೇಕ ಸಂಘಸಂಸ್ಥೆಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕೆಗೆ ಬೆನ್ನೆಲುಬಾಗಿ ನಿಂತಿರುವುದು ಸಂತೋಷದ ವಿಚಾರವಾಗಿದೆ’ ಎಂದರು.

ಧಾರ್ಮಿಕ ಕ್ಷೇತ್ರ ಮುದುಗಾನಕುಂಟೆಯಲ್ಲಿ ಸೇವಾ ಪ್ರತಿಷ್ಠಾನದ ವತಿಯಿಂದ ಮಾಡಲಾಗಿದ್ದ ಸ್ವಚ್ಛತಾ ಕಾರ್ಯ ಹಾಗೂ ಜಲ ಸಂರಕ್ಷಣಾ ಕಾರ್ಯಗಳನ್ನು ವೀಕ್ಷಿಸಿ ಸ್ವಯಂ ಸೇವಕರನ್ನು ಅಭಿನಂದಿಸಿದರು.

ಜಿ.ಪಂ ಉಪಾಧ್ಯಕ್ಷೆ ಸರಸ್ವತಮ್ಮ ಅಶ್ವತ್ಥನಾರಾಯಣಗೌಡ, ಡಿಡಿಪಿಐ ಎಸ್.ಜಿ.ನಾಗೇಶ್, ಡಯಟ್ ಡಿಡಿಪಿಐ ರಘುನಾಥರೆಡ್ಡಿ, ತಹಸೀಲ್ದಾರ್ ಎಚ್.ಶ್ರೀನಿವಾಸ್, ತಾ.ಪಂ ಇಒ ಎನ್.ಮುನಿರಾಜು, ಸಕಾಲ ಜಂಟಿ‌ ನಿರ್ದೇಶಕರಾದ ಬಿ.ಎನ್.ವರಪ್ರಸಾದರೆಡ್ಡಿ, ಬಿಇಒ ಕೆ.ವಿ‌.ಶ್ರೀನಿವಾಸಮೂರ್ತಿ, ಬಿಆರ್‌ಪಿ ಎಚ್.ಜಗದೀಶ್, ನಗರಸಭೆ ಅಧ್ಯಕ್ಷೆ ಕೆ.ಎಂ.ಗಾಯತ್ರಿ ಬಸವರಾಜ್, ಆಯುಕ್ತರಾದ ಜಿ.ಎನ್.ಚಲಪತಿ, ಟಿಎಚ್ ಒ ಓ.ರತ್ನಮ್ಮ, ಲಯನ್ಸ್ ಸಂಸ್ಥೆಯ ಅಧ್ಯಕ್ಷ ಆರ್.ಜೆ.ಶ್ರೇಣಿಕ್, ಮುಖಂಡರಾದ ರಮೇಶ್ ರಾವ್ ಶೆಲ್ಕೆ, ಮೋಹನ್, ಎನ್.ಎಂ.ರವಿನಾರಾಯಣರೆಡ್ಡಿ, ಎನ್.ಜ್ಯೋತಿರೆಡ್ಡಿ ಇತರರು ಇದ್ದರು.

‘ಪ್ರಜಾವಾಣಿ’ ವರದಿಗೆ ಶ್ಲಾಘನೆ

‘ಪ್ರಜಾವಾಣಿ’ಯಲ್ಲಿ ‘ಮುಚ್ಚಿದ ಸರ್ಕಾರಿ ಶಾಲೆ ಪುನರಾರಂಭ’ ಶೀರ್ಷಿಕೆಯಡಿ ಶುಕ್ರವಾರ ಪ್ರಕಟವಾಗಿದ್ದ ವಿಶೇಷ ವರದಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಂಜೀವಿನಿಯಂತಿತ್ತು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಾಗುತ್ತಿದ್ದು, ಹೆಚ್ಚಿನ ಪೋಷಕರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದು ಸಂತಸದ ವಿಚಾರವಾಗಿದೆ. ಈ ನಿಟ್ಟಿನಲ್ಲಿ ಪತ್ರಿಕೆಯ ವರದಿಯು ನಿಜಕ್ಕೂ ಇತರರಿಗೆ ಪ್ರೇರಣಾದಾಯಕವಾಗಿದೆ ಎಂದು ಸಚಿವ ಎಸ್.ಸುರೇಶ್ ಕುಮಾರ್ ಶ್ಲಾಘಿಸಿದರು.

ಉತ್ತಮ ಫಲಿತಾಂಶಕ್ಕೆ ಆದ್ಯತೆ

‘ಜಿಲ್ಲೆಯ ಬಹುತೇಕ ಸರ್ಕಾರಿ ಶಾಲೆಯಲ್ಲಿ ಈ ಬಾರಿಯೂ ಉತ್ತಮ ಫಲಿತಾಂಶ ಪಡೆಯುವ ನಿರೀಕ್ಷೆಯಲ್ಲಿದ್ದೇವೆ. ಇದಕ್ಕಾಗಿ ಎಲ್ಲ ಶಿಕ್ಷಕರು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದು ಪೋಷಕರು ಮತ್ತು ಮಕ್ಕಳು ಹೆಚ್ಚಿನ ಶ್ರಮ ವಹಿಸಬೇಕಾಗಿದೆ. ಜಿಲ್ಲೆಯ ಗಡಿ ಭಾಗದ ಶಾಲೆಗೆ ಸಚಿವರು ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿರುವುದು ಉತ್ತಮ ಬೆಳವಣಿಗೆಯಾಗಿದೆ’ ಎಂದು ಡಿಡಿಪಿಐ ಎಸ್.ಜಿ.ನಾಗೇಶ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು