ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಲ್ಲದೆ ಕಂಗಾಲಾದ ದ್ರಾಕ್ಷಿ ಬೆಳೆಗಾರರು

ಹಣ ಕೊಟ್ಟು ಟ್ಯಾಂಕರ್‌ ನೀರು ಖರೀದಿಸಿ ತೋಟ ಉಳಿಸಿಕೊಳ್ಳಲು ರೈತರ ಹರಸಾಹಸ
Last Updated 16 ಮಾರ್ಚ್ 2020, 11:25 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಒಂದೆಡೆ ದಿನೇ ದಿನೆಉಗ್ರ ಸ್ವರೂಪ ತಾಳುತ್ತಿರುವ ಬಿಸಿಲು, ಇನ್ನೊಂದೆಡೆ ಬತ್ತಿ ಒಣಗುತ್ತಿರುವ ಕೊಳವೆಬಾವಿಗಳಿಂದಾಗಿ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ. ದ್ರಾಕ್ಷಿ ಬೆಳೆ ರಕ್ಷಣೆಗಾಗಿ ರೈತರು ಟ್ಯಾಂಕರ್‌ ನೀರು ಮೊರೆ ಹೋಗುತ್ತಿದ್ದಾರೆ.

ತಾಲ್ಲೂಕಿನ ಅನೇಕ ರೈತರು ತಮ್ಮ ದ್ರಾಕ್ಷಿ ತೋಟ ಉಳಿಸಿಕೊಳ್ಳಲು ಹಣ ತೆತ್ತು ಟ್ಯಾಂಕರ್ ನೀರು ಖರೀದಿಸಿ ಗಿಡಗಳಿಗೆ ಹರಿಸಿ, ದ್ರಾಕ್ಷಿ ಇಳುವರಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ದ್ರಾಕ್ಷಿ ಬೆಳೆಗೆ ಹೆಸರುವಾಸಿಯಾದ ಜಿಲ್ಲೆಯಲ್ಲಿ ರೈತರು ಕೃಷ್ಣಾ, ಶರತ್, ಸೊನೆಕಾ, ರೆಡ್‌ಗ್ಲೋಬ್‌, ಸೂಪರ್ ಸೊನೆಕಾ, ದಿಲ್‌ಖುಷ್, ಅನಾಭಿಶ್, ಕಾಬೂಲ್, ಕಪ್ಪು ದ್ರಾಕ್ಷಿ ಸೇರಿದಂತೆ ವಿವಿಧ ತಳಿಯ ದ್ರಾಕ್ಷಿ ಬೆಳೆಯುತ್ತಾರೆ. ಪ್ರಸ್ತುತ ತೋಟದಲ್ಲಿ ದ್ರಾಕ್ಷಿ ಕಾಯಿಗಳು ಶೇ 60ರಷ್ಟು ಬೆಳವಣಿಗೆ ಹೊಂದಿವೆ. ‘ಕೈಗೆ ಬಂದ ತುತ್ತು ಬಾಯಿ ಬರಲಿಲ್ಲ’ ಎಂಬಂತಹ ಸ್ಥಿತಿ ತಲೆದೋರದಂತೆ ನೋಡಿಕೊಳ್ಳಲು ರೈತರು ಹೆಣಗಾಡುತ್ತಿದ್ದಾರೆ.

ತಾಲ್ಲೂಕಿನಲ್ಲಿ 1,500 ಅಡಿಯಿಂದ 1,900 ಅಡಿವರೆಗೆ ಅಂತರ್ಜಲ ಕುಸಿತ ಕಂಡಿದೆ. ತೆರೆದ ಬಾವಿ, ಕೊಳವೆ ಬಾವಿಗಳು ನೀರಿಲ್ಲದೆ ಒಣಗಿವೆ. ತೋಟಗಾರಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ದ್ರಾಕ್ಷಿಗಾಗಿ ಹೊಸ ಕೊಳವೆಬಾವಿ ಕೊರೆಯಿಸುವ ಧೈರ್ಯ ಸಹ ರೈತರಲ್ಲಿ ಉಳಿದಿಲ್ಲ.ಹೊಸ ಕೊಳವೆಬಾವಿಯಲ್ಲಿ ನೀರು ಸಿಗಲಿದೆ ಎಂಬ ನಂಬಿಕೆ ಬೆಳೆಗಾರರಲ್ಲಿ ಇಲ್ಲ. ಹೀಗಾಗಿ ಟ್ಯಾಂಕರ್‌ ನೀರೇ ಗತಿ ಎನ್ನುವಂತಾಗಿದೆ.

ಬಹುತೇಕ ದ್ರಾಕ್ಷಿ ಬೆಳೆಗಾರರು ನೀರಿನ ಅಭಾವದಿಂದಾಗಿ ದ್ರಾಕ್ಷಿಗೆ ಔಷಧೋಪಚಾರ ಮಾಡುವುದನ್ನು ನಿಲ್ಲಿಸಿದ್ದಾರೆ. ತಾಲ್ಲೂಕಿನ ಯಲುವಹಳ್ಳಿ ರೈತ ಚೇತನ್‌ ಗೌಡ ಅವರು 5 ಎಕರೆಯಲ್ಲಿ ದಿಲ್‌ಖುಷ್‌ ತಳಿ ದ್ರಾಕ್ಷಿ ಬೆಳೆದಿದ್ದು, ತೋಟದಲ್ಲಿದ್ದ ಎಂಟು ಕೊಳವೆಬಾವಿಗಳು ಕೈಕೊಟ್ಟ ಕಾರಣಕ್ಕೆ ಕಳೆದ 15 ದಿನಗಳಿಂದ ಎರಡು ದಿನಕ್ಕೊಮ್ಮೆ ಐದು ಟ್ಯಾಂಕರ್‌ ನೀರು ಖರೀದಿಸಿ ದ್ರಾಕ್ಷಿ ಬೆಳೆಗೆ ಹಾಯಿಸುತ್ತಿದ್ದಾರೆ.

‘ತೋಟದಲ್ಲಿ ಎಂಟು ಕೊಳವೆ ಬಾವಿಗಳಿವೆ. ಆ ಪೈಕಿ ಬಹುತೇಕ ಬತ್ತಿ, ಕೆಲ ಬಾವಿಗಳಲ್ಲಿ ಸಿಗುತ್ತಿರುವ ಅಲ್ಪ ಪ್ರಮಾಣದ ನೀರು ತೋಟಕ್ಕೆ ಸಾಲುತ್ತಿಲ್ಲ. ಹೀಗಾಗಿ, ಎರಡು ದಿನಕ್ಕೊಮ್ಮೆ ₹2,500 ಖರ್ಚು ಮಾಡಿ ಟ್ಯಾಂಕರ್‌ ನೀರು ಹಾಯಿಸುತ್ತಿದ್ದೇವೆ. ತಿಂಗಳಿಗೆ ನೀರಿಗೆ ₹40 ಸಾವಿರ ಖರ್ಚು ಮಾಡಬೇಕಾಗಿ ಬರುತ್ತಿದೆ. ಏನು ಮಾಡಬೇಕೋ ದಿಕ್ಕೆ ತೋಚುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಚಳಿಗಾಲದಲ್ಲಿ ದ್ರಾಕ್ಷಿ ಬೆಳೆದರೆ ರೋಗ ಹರಡುವ ಸಾಧ್ಯತೆ ಹೆಚ್ಚು. ಮಳೆಗಾಲ ದ್ರಾಕ್ಷಿ ಬೆಳೆಯಲು ಯೋಗ್ಯವಿಲ್ಲ. ಇನ್ನೂ ಬೇಸಿಗೆ ಕಾಲದಲ್ಲಿ ಉತ್ತಮ ಇಳುವರಿ ಬರುತ್ತದೆ ಎಂದು ಬೆಳೆದರೆ ಇದೀಗ ನೀರಿನ ಸಮಸ್ಯೆ. ಹೀಗಾದರೆ ರೈತರ ಸ್ಥಿತಿ ಏನಾಗಬೇಡ’ ಎಂದು ಪ್ರಶ್ನಿಸಿದರು.

‘ಎರಡು ಎಕರೆಯಲ್ಲಿ ದಿಲ್‌ಖುಷ್ ದ್ರಾಕ್ಷಿ ಬೆಳೆದಿದ್ದೇವೆ. ತೋಟದಲ್ಲಿರುವ ಎರಡು ಕೊಳವೆ ಬಾವಿಗಳಲ್ಲಿ ಒಂದು ಬತ್ತಿದೆ. ಮತ್ತೊಂದರಲ್ಲಿ 500 ಗ್ಯಾಲನ್‌ ನೀರು ಮಾತ್ರ ಸಿಗುತ್ತಿದೆ. ಹೀಗಾಗಿ, ಕಳೆದ ಒಂದು ತಿಂಗಳಿಂದ ತೋಟಕ್ಕಾಗಿ ನಿತ್ಯ ಐದು ಟ್ಯಾಂಕರ್‌ ನೀರು ಖರೀದಿಸುತ್ತಿರುವೆ. ಒಂದು ಟ್ಯಾಂಕರ್ ನೀರಿಗೆ ನಮ್ಮ ಕಡೆ ₹600 ಕೇಳುತ್ತಾರೆ. ನನ್ನದೇ ಸ್ವಂತ ಟ್ರ್ಯಾಕ್ಟರ್‌, ಟ್ಯಾಂಕರ್ ಇದೆ. ಆದರೂ ನಿತ್ಯ ತೋಟಕ್ಕೆ ನೀರಿಗಾಗಿ ₹1,000, ಡಿಸೇಲ್‌ಗೆ ₹1,000 ಖರ್ಚಾಗುತ್ತಿದೆ’ ಎಂದು ಡಿ ಹೊಸೂರು ಗ್ರಾಮದ ಶ್ರೀನಿವಾಸ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT