ಗುಡಿಬಂಡೆ: ಸ್ಥಳೀಯ ಪಟ್ಟಣ ಪಂಚಾಯಿತಿಯ ಎರಡನೇ ಅವಧಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ನಡೆದಿದೆ.
ಅಧ್ಯಕ್ಷ ಸ್ಥಾನಕ್ಕೆ ವಿಕಾಸ್, ಉಪಾಧ್ಯಕ್ಷ ಸ್ಥಾನಕ್ಕೆ ಗಂಗರಾಜು ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಸಿಗ್ಬತ್ತುಲ್ಲಾ ತಿಳಿಸಿದರು.
ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಅದರಂತೆ ಸೆ. 25ರಂದು ಚುನಾವಣೆ ಘೋಷಣೆಯಾಗಿ ಅಧ್ಯಕ್ಷ ವಿಕಾಸ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗಂಗರಾಜು ಇಬ್ಬರು ಮಾತ್ರ ನಾಮಪತ್ರ ಸಲ್ಲಿಕೆ ಮಾಡಿದ್ದರು.
ಚುನಾವಣೆಗೆ ಪಕ್ಷೇತರ ಸದಸ್ಯ ರಾಜೇಶ್, ಜೆಡಿಎಸ್‌ನ ಬಷೀರ್ ಹಾಗೂ ಅನುಷಾ ಗೈರಾಗಿದ್ದರು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ‘ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಸ್ಥಾನ ಮೀಸಲಾಗಿದ್ದ ಕಾರಣ ಆಕಾಂಕ್ಷಿಗಳು ಹೆಚ್ಚಾಗಿದ್ದರು. ಎಲ್ಲರ ಮನವೊಲಿಸಿ ವಿಕಾಸ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಗಂಗರಾಜು ಅವರನ್ನು ಆಯ್ಕೆ ಮಾಡಲಾಗಿದೆ’ ಎಂದರು.
ನೂತನ ಅಧ್ಯಕ್ಷ ವಿಕಾಸ್ ಮಾತನಾಡಿ, ‘ಶಾಸಕರ ಮಾರ್ಗದರ್ಶನದಂತೆ ಪಟ್ಟಣ ಪಂಚಾಯಿತಿಯನ್ನು ಅಭಿವೃದ್ಧಿ ಮಾಡುತ್ತೇವೆ’ ಎಂದರು.
ಸದಸ್ಯ ಇಸ್ಮಾಯಿಲ್ ಆಜಾದ್, ಮಂಜುಳ, ರಾಜೇಶ್, ವೀಣಾ, ನಗೀನ್ ತಾಜ್, ಬಷೀರಾ, ಮುಖಂಡ ಆದಿರೆಡ್ಡಿ, ಎಚ್.ಪಿ.ಲಕ್ಷ್ಮಿನಾರಾಯಣ, ಮಂಜುನಾಥ್, ರಿಯಾಜ್, ತಿರುಮಣಿ ಮಂಜುನಾಥ್, ರಮೇಶ್, ಅಜಯ್, ಸಂಜಯ್ ಇದ್ದರು.