ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿ, ಅತ್ತೆ ಕಿರುಕುಳ ನೀಡಿದ ಆರೋಪ: ವಿಡಿಯೊ ಮಾಡಿಟ್ಟು ವ್ಯಕ್ತಿ ಆತ್ಮಹತ್ಯೆ

Published 21 ಅಕ್ಟೋಬರ್ 2023, 13:22 IST
Last Updated 21 ಅಕ್ಟೋಬರ್ 2023, 13:22 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಅತ್ತೆ, ಪತ್ನಿ ಹಾಗೂ ಪತ್ನಿಯ ಅಣ್ಣ ತುಂಬಾ ತೊಂದರೆ ಕೊಟ್ಟಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ವ್ಯಕ್ತಿಯೊಬ್ಬ ವಿಡಿಯೊ ಮಾಡಿ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ನಗರದಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಕೆ.ವೆಂಕಟೇಶ್ ಅವರ ತಾಯಿ ಮಂಜುಳಾ ಈ ಬಗ್ಗೆ ಚಿಕ್ಕಬಳ್ಳಾಪುರ ನಗರ ಠಾಣೆಗೆ ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ: ನನ್ನ ಮಗ ವೆಂಕಟೇಶ್ ಹಾಗೂ ಗೌರಿಬಿದನೂರಿನ ಶಿಲ್ಪಾ ವಿವಾಹ 10 ವರ್ಷಗಳ ಹಿಂದೆ ನಡೆದಿತ್ತು. ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ನನ್ನ ಮಗ ಕೂಲಿ ಮತ್ತು ಚಾಲಕನ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಮಗ ಮತ್ತು ಸೊಸೆ ಇಬ್ಬರು ವಿವಿಧ ಬ್ಯಾಂಕ್‌ಗಳು ಮತ್ತು ಸಂಘಗಳಲ್ಲಿ ಸಾಲ ಮಾಡಿದ್ದರು. ಸಾಲ ತೀರಿಸಲಾಗದೆ ಇಬ್ಬರೂ ಗಲಾಟೆ ಮಾಡಿಕೊಳ್ಳುತ್ತಿದ್ದರು.

ಸೊಸೆ 1ನೇ ಮಗನನ್ನು ಹಾಸ್ಟೆಲ್‌ಗೆ ಸೇರಿಸಿದ್ದರು. 2ನೇ ಮಗನನ್ನು ಕರೆದುಕೊಂಡು ಮನೆ ಬಿಟ್ಟು ತವರು ಸೇರಿದ್ದರು. ವೆಂಕಟೇಶ ಮಾನಸಿಕವಾಗಿ ನೊಂದಿದ್ದ. ಅವರ ಮನೆಗೆ ಹೋಗಿ ಹೆಂಡತಿಯನ್ನು ಕಳುಹಿಸಿಕೊಡುವಂತೆ ಕೇಳಿಕೊಂಡರೂ ಸಹ ಶಿಲ್ಪ, ಅವರ ತಾಯಿ ಅಶ್ವತ್ಥಮ್ಮ, ಆಕೆ ಅಣ್ಣ ವೆಂಕಟೇಶ್ ತನ್ನ ಮಗನಿಗೆ ಮಾನಸಿಕವಾಗಿ ಕಿರುಕುಳ ನೀಡಿದರು.

‘ನೀನು ಸತ್ತು ಹೋಗು. ಅಲ್ಲಿಯವರೆಗೂ, ನಮಗೆ ನೆಮ್ಮದಿ ಇಲ್ಲ’ ಎಂದು ಕಿರುಕುಳ ನೀಡುತ್ತಿದ್ದ ವಿಚಾರವನ್ನು ನನ್ನ ಮಗ ನನ್ನ ಬಳಿ ಹೇಳಿಕೊಂಡಿದ್ದ.

ಶುಕ್ರವಾರ ಬೆಳಗಿನ ಜಾವ ನನ್ನ ಮೊಮ್ಮಗ ಹಿಮದರ್ಶನ್ ಕರೆ ಮಾಡಿ ವೆಂಕಟೇಶ್ ನೇಣು ಹಾಕಿಕೊಂಡ ಬಗ್ಗೆ ತಿಳಿಸಿದ. ನನ್ನ ಮಗನ ಮೊಬೈಲ್ ನೋಡಿದಾಗ ಕಿರುಕುಳದ ಬಗ್ಗೆ ವಿಡಿಯೊ ರೆಕಾರ್ಡ್ ಮಾಡಿದ್ದ. ವೆಂಕಟೇಶ್‌ನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆತನ ಪತ್ನಿ, ಅತ್ತೆ ಮತ್ತು ಬಾವಮೈದನ ವಿರುದ್ಧ ಕಾನೂನು ಕ್ರಮಜರುಗಿಸಬೇಕು ಎಂದು ದೂರಿನಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT