ಬುಧವಾರ, ಡಿಸೆಂಬರ್ 8, 2021
18 °C

ಆರೋಗ್ಯ ಸಚಿವರೇ ದ್ವೇಷದ ರಾಜಕಾರಣ ಬಿಡಿ: ಹರಿಹಾಯ್ದ ಕಾಂಗ್ರೆಸ್ ಮುಖಂಡರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಸಚಿವ ಡಾ.ಕೆ. ಸುಧಾಕರ್ ಅವರೇ ದ್ವೇಷದ ರಾಜಕೀಯ ಬಿಡಿ. ಶಾಸಕರಾದ ಕೆ.ಆರ್. ರಮೇಶ್ ಕುಮಾರ್ ಮತ್ತು ಎನ್.ಎಚ್. ಶಿವಶಂಕರರೆಡ್ಡಿ ಅವರನ್ನು ಟೀಕಿಸುವ ನೈತಿಕತೆ ನಿಮಗೆ ಇಲ್ಲ ಎಂದು ಗುರುವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು ಸಚಿವರ ವಿರುದ್ಧ ಹರಿಹಾಯ್ದರು.

ಕೋಲಾರ– ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಎಂ. ಮೋಹನರೆಡ್ಡಿ ಮಾತನಾಡಿ, ಡಿಸಿಸಿ ಬ್ಯಾಂಕ್ ಮಹಿಳೆಯರು ಮತ್ತು ರೈತರ ಬದುಕನ್ನು ಉತ್ತಮಗೊಳಿಸಿದೆ. ರಮೇಶ್ ಕುಮಾರ್ ಮತ್ತು ಶಿವಶಂಕರರೆಡ್ಡಿ ಅವರನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಸಚಿವರು ಹೇಳಿದ್ದಾರೆ. ಅವರೇನು ಬ್ಯಾಂಕ್ ನಿರ್ದೇಶಕರೇ? ಈ ಹಿಂದೆ ಅಧ್ಯಕ್ಷರಾಗಿದ್ದರೆ? ಸಚಿವರ ಈ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.

ಕೆಜಿಎಫ್, ಶ್ರೀನಿವಾಸಪುರ ತಾಲ್ಲೂಕಿಗೆ ಡಿಸಿಸಿ ಬ್ಯಾಂಕ್‌ನಿಂದ ಹೆಚ್ಚು ಹಣ ನೀಡಲಾಗಿದೆ ಎನ್ನುವುದು ‌ಸುಳ್ಳು. ಜಿಲ್ಲೆಯಿಂದ ಸಾಲಕ್ಕೆ ಸಂಬಂಧಿಸಿದಂತೆ ಯಾವುದೇ ಕಡತಗಳನ್ನು ಬ್ಯಾಂಕ್‌ ತಡೆ ಹಿಡಿದಿಲ್ಲ. ಎಲ್ಲ ತಾಲ್ಲೂಕುಗಳನ್ನು ಸಮಾನವಾಗಿ ಕಾಣಲಾಗಿದೆ ಎಂದು ಹೇಳಿದರು

ಬ್ಯಾಂಕ್ ಚೆನ್ನಾಗಿ ನಡೆಯುತ್ತಿದೆ. ಡಿಸಿಸಿ ಬ್ಯಾಂಕ್‌ಗೆ ನಬಾರ್ಡ್‌ ಸೇರಿದಂತೆ 18 ಪ್ರಶಸ್ತಿಗಳು ಬಂದಿವೆ. ಬ್ಯಾಂಕ್‌ನಲ್ಲಿ ಅಕ್ರಮ ನಡೆದಿವೆ ಎಂದು 80 ಅರ್ಜಿಗಳು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಆಗಿವೆ. ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಅರ್ಜಿಗಳನ್ನು ಹಾಕಿಸಿದ್ದಾರೆ. ಈ ಎಲ್ಲವೂ ಬ್ಯಾಂಕ್ ಬೆಳವಣಿಗೆಗೆ ಅಡ್ಡಿ ಆಗುತ್ತದೆ ಎಂದು ತಡೆಯಾಜ್ಞೆ ತರಲಾಗಿದೆ ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದೆ. ಯಾವುದೇ ಅಕ್ರಮಗಳು ನಡೆದಿದ್ದರೂ ತನಿಖೆ ನಡೆಸಿ. ತಪ್ಪು ಮಾಡಿದ್ದರೆ ಕ್ರಮಕೈಗೊಳ್ಳಿ ಎಂದರು.

ಮಾಜಿ ಶಾಸಕ ಎಸ್.ಎಂ. ಮುನಿಯಪ್ಪ ಮಾತನಾಡಿ, ಯಾವ ಪಕ್ಷದ ಮುಖ್ಯಮಂತ್ರಿಗಳು ಜೈಲಿಗೆ ಹೋಗಿದ್ದಾರೆ ಎನ್ನುವುದು ಇಡೀ ರಾಜ್ಯದ ಜನರಿಗೆ ಗೊತ್ತು. ಕಾಂಗ್ರೆಸ್ ಪಕ್ಷದ ಮೋಸ ಮಾಡಿದವರು ಯಾರು ಎನ್ನುವುದು ಗೊತ್ತಿದೆ. ದೇಶ ಕಟ್ಟಿದ್ದು ಕಾಂಗ್ರೆಸ್ ಪಕ್ಷ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಚಿಹ್ನೆಯಡಿ ಸುಧಾಕರ್ ಅವರು ಗೆಲುವು ಕಂಡರು. ಅದಕ್ಕೂ ಮುನ್ನ ಅವರಿಗೆ ಯಾವುದೇ ನೆಲೆ ಇರಲಿಲ್ಲ. ಇಂತಹ ಪಕ್ಷಕ್ಕೆ ಮೋಸ ಮಾಡಿದ್ದೀರಿ. ಈಗ ಕಾಂಗ್ರೆಸ್ ವಿರುದ್ಧ ಮಾತನಾಡುತ್ತಿದ್ದೀರಿ. ಕಾಂಗ್ರೆಸ್ ದೇಶಕ್ಕೆ ಅನ್ನಕೊಟ್ಟ ಪಕ್ಷ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮುನೇಗೌಡ ಮಾತನಾಡಿ, ಸಿದ್ದರಾಮಯ್ಯ ಅವರು ಕೊಟ್ಟ ಹಣದಿಂದಲೇ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿವೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ನೀಡುತ್ತಿದ್ದ ಸಾಲಕ್ಕೂ ಸುಧಾಕರ್ ತಮ್ಮ ಟ್ರಸ್ಟ್ ಹೆಸರು ಹಾಕಿಕೊಳ್ಳುತ್ತಿದ್ದರು. ಇವರಿಗೆ ನಾಚಿಕೆ ಆಗಬೇಕು. ಸುಧಾಕರ್ ಅವರ ಆರ್ಥಿಕ ಪರಿಸ್ಥಿತಿ ಏನು? ಅವರ ರಾಜಕೀಯ ಹಿನ್ನೆಲೆ ಏನು? ಅವರೇ ಹೇಳುವಂತೆ ಅವರೊಬ್ಬ ಸಾಮಾನ್ಯ ಶಿಕ್ಷಕರ ಮಗ. ಕೋವಿಡ್ ಸಂದರ್ಭದಲ್ಲಿ ಹಾಸಿಗೆ ಬ್ಲಾಕಿಂಗ್ ದಂಧೆ, ಕಾಳಸಂತೆಯಲ್ಲಿ ಔಷಧಿಗಳ ಮಾರಾಟ, ಆಮ್ಲಜನಕ ಸಿಲಿಂಡರ್‌ಗಳಲ್ಲಿ ಅವ್ಯವಹಾರ ಹೀಗೆ ಸಾಲು ಸಾಲು ಅಕ್ರಮಗಳ ಮೂಲಕ ಕಮಿಷನ್ ಪಡೆದಿದ್ದಾರೆ ಎಂದು ದೂರಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ‌ಜಯರಾಮ್ ಮಾತನಾಡಿ, ಚಿಕ್ಕಬಳ್ಳಾಪುರ ಕಾಂಗ್ರೆಸ್‌ನ ನೆಲೆಯುಳ್ಳ ಕ್ಷೇತ್ರ. ಸುಧಾಕರ್ ಮತ್ತು ಅವರ ತಂದೆ ಕೇಶವರೆಡ್ಡಿ ನಮ್ಮ ಪಕ್ಷದ ಋಣದಲ್ಲಿ ಇದ್ದಾರೆ. ಈಗ ನಮ್ಮ ಪಕ್ಷವನ್ನೇ ಟೀಕಿಸುತ್ತಿದ್ದಾರೆ ಎಂದರು.

ಮುಖಂಡರಾದ ಸುಮಿತ್ರಮ್ಮ, ಮಂಗಳಾಮೂರ್ತಿ, ಕುಂದಲಗುರ್ಕಿ ಮುನೀಂದ್ರ, ಕೋನಪ್ಪಲ್ಲಿ ಕೋದಂಡ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು