ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ವಿ.ಕ್ಯಾಂಪಸ್‌ ಬಳಿ ವ್ಯಾಪಾರ ಸಲ್ಲ: ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ಚಿಕ್ಕಬಳ್ಳಾಪುರ ಹೂವು ಬೆಳೆಗಾರರ ಅರ್ಜಿ: ಎಪಿಎಂಸಿಯೇ ಸೂಕ್ತ
Last Updated 25 ಜೂನ್ 2022, 5:04 IST
ಅಕ್ಷರ ಗಾತ್ರ

ಬೆಂಗಳೂರು: ‘ಚಿಕ್ಕಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಪ್ರಾಂಗಣದಲ್ಲಿ ನಮ್ಮ ವ್ಯಾಪಾರ–ವಹಿವಾಟು ನಡೆಸುವುದಿಲ್ಲ. ಬದಲಿಗೆ ಕೆ.ವಿ. ಕ್ಯಾಂಪಸ್‌ ಬಳಿಯೇ ನಡೆಸುತ್ತೇವೆ, ಅದಕ್ಕೆ ಅನುಮತಿ ನೀಡಬೇಕು‘ ಎಂದು ಕೋರಿದ್ದ ಅರ್ಜಿದಾರರ ಮನವಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಈ ಕುರಿತಂತೆ ಎಪಿಎಂಸಿ ‘ರವಿ ಫ್ಲವರ್‌ ಸ್ಟಾಲ್‌’ನ ಕೆ.ರವೀಂದ್ರ ಸೇರಿದಂತೆ ಒಟ್ಟು ಐವರು ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ ಚಂದನಗೌಡರ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಅರ್ಜಿದಾರರ ಮನವಿ ವಿಚಾರಣೆಗೆ ಯೋಗ್ಯವಾಗಿಲ್ಲ’ ಎಂದು ಅಭಿಪ್ರಾಯಪಟ್ಟಿದೆ.

ಇದೇ ಪ್ರಕರಣದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದ ಜಿ.ಎಂ.ಶ್ರೀಧರ, ಕ್ಯಾತಪ್ಪ, ನವೀನ್‌ ಕುಮಾರ್ ಮತ್ತು ರಮೇಶ್‌ ರೆಡ್ಡಿ ಮನವಿಯನ್ನು ಮಾನ್ಯ ಮಾಡಿರುವ ನ್ಯಾಯಪೀಠವು, ‘ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಸಲುಪರವಾನಗಿ ಪಡೆದು ಬೇರೊಂದು ಜಾಗದಲ್ಲಿ ನಿಮ್ಮ ವ್ಯಾಪಾರ ನಡೆಸುತ್ತೀರಿ ಎಂದಾದರೆ ನಿಮ್ಮ ಪರವಾನಗಿಯನ್ನು ಯಾಕೆ ರದ್ದುಗೊಳಿಸಬಾರದು’ ಎಂದು ಕೆ.ರವೀಂದ್ರ ಸೇರಿದಂತೆ ಐವರು ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತು.

ವಿಚಾರಣೆ ವೇಳೆ ಜಿ.ಎಂ.ಶ್ರೀಧರ ಮತ್ತಿತರರ ಪರ ವಾದ ಮಂಡಿಸಿದ ವಕೀಲ ಎಂ.ಶಿವಪ್ರಕಾಶ್‌, ‘ಅರ್ಜಿದಾರ ಕೆ.ರವೀಂದ್ರ ಮತ್ತಿತರರು, ಕೆ.ವಿ.ಕ್ಯಾಂಪಸ್‌ ಬಳಿ ವ್ಯಾಪಾರ ನಡೆಸುತ್ತೇವೆ ಎಂಬ ತೀರ್ಮಾನವು ರಾಜಕೀಯ ಪ್ರೇರಿತವಾಗಿದೆ. ಅದಕ್ಕೆ ಅವಕಾಶ ನೀಡಬಾರದು. ಈ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ ಎಂಬ ಅಂಶವನ್ನು ನ್ಯಾಯಪೀಠ ಗಂಭೀರವಾಗಿ ಪರಿಗಣಿಸಬೇಕು’ ಎಂದು ಮನವಿ ಮಾಡಿದರು.

‘ಒಂದು ವೇಳೆ ಅರ್ಜಿದಾರರು ಎಪಿಎಂಸಿಯಿಂದ ಹೊರಗೆ ವಹಿವಾಟು ನಡೆಸಿದರೆ ಸರ್ಕಾರದ ಬೊಕ್ಕಸಕ್ಕೆ ಬರುವ ಆದಾಯಕ್ಕೆ ಹೊಡೆತ ಬೀಳುತ್ತದೆ. ಅಷ್ಟೇ ಅಲ್ಲ, ಎಪಿಎಂಸಿಯಲ್ಲಿ 17 ಎಕರೆ ಪ್ರದೇಶದಷ್ಟು ವಿಶಾಲ ಜಾಗದಲ್ಲಿ ಹೂವು ಮಾರಾಟ ರೈತರಿಗೆ ಎಲ್ಲ ಸೌಲಭ್ಯಗಳು ಇದ್ದಾಗ್ಯು ಹೊರಗೆ ವಹಿವಾಟು ನಡೆಸಲು ಅಡ್ಡಿಪಡಿಸಬಾರದು ಎಂಬ ಮನವಿ ಯುಕ್ತವಲ್ಲ’ ಎಂದು ಪ್ರತಿಪಾದಿಸಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಪರವಾನಗಿ ಹೊಂದಿದ ರೈತರು ಎಪಿಎಂಸಿಯಲ್ಲೇ ವ್ಯಾಪಾರ ವಹಿವಾಟು ನಡೆಸುವಂತೆ ನಿರ್ದೇಶಿಸಿ ಅರ್ಜಿ ವಿಲೇವಾರಿ ಮಾಡಿತು.

ಸುತ್ತೋಲೆ ಪ್ರಶ್ನೆ: ಇತ್ತೀಚೆಗಷ್ಟೇ ಚಿಕ್ಕಬಳ್ಳಾಪುರ ಎಪಿಎಂಸಿ ಕಾರ್ಯದರ್ಶಿ, ’ಪರವಾನಗಿ ಪಡೆದಿರುವ ವರ್ತಕರು ಮಾರುಕಟ್ಟೆ ಪ್ರಾಂಗಣದಲ್ಲಿ ಪರವಾನಗಿ ಮತ್ತು ನಿಯಮಗಳಿಗೆ ಅನ್ವಯವಾಗಿ ವ್ಯಾಪಾರ, ವಹಿವಾಟು ನಡೆಸಲು ಆದೇಶಿಸಲಾಗಿರುತ್ತದೆ’ ಎಂದುಸುತ್ತೋಲೆ ಹೊರಡಿಸಿದ್ದರು.

‘ಕೆ.ವಿ.ಕ್ಯಾಂಪಸ್‌ ಬಳಿಯಿರುವ ತಾತ್ಕಾಲಿಕ ಹೂವಿನ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಎಲ್ಲ ಹೂವಿನ ವರ್ತಕರು, ದಲ್ಲಾಲರು, ಎಪಿಎಂಸಿ ಕಾಯ್ದೆ–1966ರ ಕಲಂ 72ರ ಅಡಿಯಲ್ಲಿ ಸಮಿತಿಯಿಂದ ಪಡೆದಿರುವ ಪರವಾನಗಿ ಮತ್ತು ಷರತ್ತುಗಳಿಗೆ ಒಳಪಟ್ಟು ಎಪಿಎಂಸಿ ಪ್ರಾಂಗಣದಲ್ಲೇ ವ್ಯಾಪಾರ ವಹಿವಾಟು ನಡೆಸಲು ತಿಳಿಯಪಡಿಸಿದೆ’ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿತ್ತು.

ಈ ಸುತ್ತೋಲೆಯನ್ನು ಪ್ರಶ್ನಿಸಿ ಕೆ.ರವೀಂದ್ರ ಮತ್ತಿತರರು ರಿಟ್‌ ಅರ್ಜಿ ಸಲ್ಲಿಸಿ, ‘ಕೆ.ವಿ.ಕ್ಯಾಂಪಸ್‌ ಬಳಿ ನಡೆಸುತ್ತಿರುವ ವ್ಯಾಪಾರ ವಹಿವಾಟಿಗೆ ಅಡ್ಡಿಪಡಿಸಬಾರದು’ ಎಂದು ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT