ಭಾನುವಾರ, ಜನವರಿ 24, 2021
27 °C
ಪ್ರೌಢಶಾಲಾ ಮುಖ್ಯಶಿಕ್ಷಕರ ಸಮಾಲೋಚನಾ ಶೈಕ್ಷಣಿಕ ಸಭೆ

‘ಮಕ್ಕಳ ಸುರಕ್ಷತೆಗೆ ಒತ್ತು ನೀಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ‘ಕೋವಿಡ್ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗಿದೆ. ಶಾಲೆಗಳು ಆರಂಭಗೊಂಡು ವಿದ್ಯಾರ್ಥಿಗಳು ಶಾಲೆಗೆ ಬರುತ್ತಿರುವುದರಿಂದ ಮಕ್ಕಳ ಸುರಕ್ಷತೆಯ ಕ್ರಮಗಳನ್ನು ತಪ್ಪದೇ ಪಾಲಿಸಬೇಕು. ಕಲಿಕೆ, ಶೈಕ್ಷಣಿಕ ಸಾಧನೆಗೆ ಪೂರಕವಾದ ಯೋಜನೆಗಳನ್ನು ಕ್ರಮಬದ್ಧವಾಗಿ ಯೋಜಿಸಿ ಅನುಷ್ಠಾನಗೊಳಿಸಲು ಮುಂದಾಗಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಶ್ರೀನಿವಾಸ್ ತಿಳಿಸಿದರು.

ತಾಲ್ಲೂಕಿನ ಕುಂದಲಗುರ್ಕಿ ಸರ್ಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ಕರೆಯಲಾಗಿದ್ದ ತಾಲ್ಲೂಕಿನ ಪ್ರೌಢಶಾಲಾ ಮುಖ್ಯಶಿಕ್ಷಕರ ಸಮಾಲೋಚನಾ ಶೈಕ್ಷಣಿಕ ಸಭೆ, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ದಿನದರ್ಶಿಕೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಳೆದ ಸಾಲಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನದ ಫಲಿತಾಂಶ ಪಡೆದು ಮೈಲಿಗಲ್ಲು ಸ್ಥಾಪಿಸಿದೆ. ಶಿಡ್ಲಘಟ್ಟ ತಾಲ್ಲೂಕು ಮೂರನೇ ಸ್ಥಾನದಲ್ಲಿದೆ. ಪ್ರಥಮ ಸ್ಥಾನಕ್ಕೆ ಬರಲು ಶಿಕ್ಷಕರ ಸಂಘಟಿತ ಪ್ರಯತ್ನ ಅಗತ್ಯವಿದೆ. ಹಿಂದಿನ ಸಾಲಿನ ಫಲಿತಾಂಶ ಸಾಧನೆಯನ್ನು ಈ ವರ್ಷವೂ ಉಳಿಸಿಕೊಳ್ಳಬೇಕಿದೆ ಎಂದರು.

ಈಗಾಗಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುವ ತಿಂಗಳು ಅಧಿಕೃತವಾಗಿ ಘೋಷಿಸಿದ್ದು ಪಠ್ಯ ಕಡಿತದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತಿದೆ. ಜಿಲ್ಲಾಡಳಿತವೂ ಮಕ್ಕಳಿಗೆ ಅನುಕೂಲವಾಗುವಂತೆ ಪ್ರತಿ ವಿಷಯದಲ್ಲಿ ಪಾಸಿಂಗ್ ಪ್ಯಾಕೇಜ್ ತಯಾರಿ, ಶಿಕ್ಷಕರಿಗೆ ಸಮಾಲೋಚನಾ ಸಭೆಗಳಂತಹ ಕಾರ್ಯಕ್ರಮಗಳನ್ನು ರೂಪಿಸಿದೆ. ಶಿಕ್ಷಕರು ಮಕ್ಕಳ ಕಲಿಕೆಗೆ ಪೂರಕವಾದ ಡಿಜಿಟಲ್ ಟೀಚಿಂಗ್, ಆನ್‌ಲೈನ್ ತರಬೇತಿ, ಕೊರೊನಾ ನಿಯಮಗಳನ್ನು ಪಾಲಿಸಿ ಪಠ್ಯ ಬೋಧನೆಯಂತಹ ರೀತಿಗಳನ್ನು ಅನುಸರಿಸಬೇಕು ಎಂದರು.

ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಉತ್ತಮಪಡಿಸಲು ತಾಲ್ಲೂಕಿನಲ್ಲಿ ವಿಷಯ ಬೋಧಕರ ಸಭೆ ನಡೆಸಲಾಗುವುದು. ಎನ್‌ಎಂಎಂಎಸ್ ಮತ್ತು ಎನ್‌ಟಿಎಸ್‌ಇ ಪರೀಕ್ಷೆಯಲ್ಲಿ ಕಳೆದ ಶೈಕ್ಷಣಿಕ ಸಾಲಿನಲ್ಲಿ ನಮ್ಮ ತಾಲ್ಲೂಕಿನ ಅಧಿಕ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಈ ಬಾರಿಯೂ ಈಗಾಗಲೇ ಉಚಿತ ತರಬೇತಿಯನ್ನು ಆನ್‌ಲೈನ್ ಮೂಲಕ ನೀಡಲಾಗುತ್ತಿದೆ ಎಂದರು.

ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ಶಾಲೆಗಳಿಗೆ ಪ್ರಶಸ್ತಿ ಫಲಕ, ಅಭಿನಂದನಾ ಪತ್ರಗಳನ್ನು ವಿತರಿಸಲಾಯಿತು. ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದಿಂದ ನೂತನ ವರ್ಷದ ದಿನದರ್ಶಿಕೆಯನ್ನು ಬಿಡುಗಡೆ ಮಾಡಲಾಯಿತು.

ಸಂಘದ ಕಾರ್ಯದರ್ಶಿ ಎಲ್. ವೆಂಕಟರೆಡ್ಡಿ, ಅಕ್ಷರದಾಸೋಹ ತಾಲ್ಲೂಕು ಸಹಾಯಕ ನಿರ್ದೇಶಕ ಆಂಜನೇಯ, ಕರ್ನಾಟಕ ರಾಜ್ಯ ಅನುದಾನರಹಿತ ಶಾಲೆಗಳ ನೌಕರರ ಸಂಘದ ಅಧ್ಯಕ್ಷ ಡಿ.ಸಿ. ಗೋಪಿನಾಥ್, ತಾಲ್ಲೂಕು ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಗೋಪಿನಾಥ್, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ರಂಗನಾಥ್, ತಾಲ್ಲೂಕು ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಸಂಘದ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ಮಂಜುನಾಥ್, ಜಿಲ್ಲಾ ಉಪ ನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕಿ ಕೃಷ್ಣಕುಮಾರಿ, ಶಿಕ್ಷಣ ಸಂಯೋಜಕ ಭಾಸ್ಕರಗೌಡ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಮಹದೇವ್‌ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.