ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸನ ಸಂರಕ್ಷಿಸಲು ಇತಿಹಾಸ ತಜ್ಞರ ಒತ್ತಾಯ

ಜಿಲ್ಲಾ ಉಸ್ತುವಾರಿ ಸಚಿವರ ಸ್ವಗ್ರಾಮದಲ್ಲಿದೆ ‘ಪೆರೇಸಂದ್ರ’ ಹೆಸರಿನ ಮೂಲದ ಕಲ್ಲು
Last Updated 2 ಮಾರ್ಚ್ 2021, 4:51 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಚಿಕ್ಕಬಳ್ಳಾಪುರದಿಂದ 18 ಕಿಮೀ ದೂರದಲ್ಲಿರುವ ಗ್ರಾಮ ಪಂಚಾಯಿತಿ ಕೇಂದ್ರ ಪೆರೇಸಂದ್ರದ ಹೆಸರಿನ ಮೂಲ ಮತ್ತು ಕೆರೆ ಕಟ್ಟಿಸಿದ ವಿಷಯ ತಿಳಿಸುವ ಅಪರೂಪದ ಶಾಸನವೊಂದು ಪೆರೇಸಂದ್ರದ ಅಮಿರ್ ಪಾಷ ಅವರ ಜಮೀನಿನಲ್ಲಿದೆ.

ಈ ರೀತಿಯಾಗಿ ಹೆಸರಿನ ಮೂಲವನ್ನು ತಿಳಿಸುವ ಶಾಸನ ಅಪರೂಪ ಹಾಗೂ ಚರಿತ್ರಾರ್ಹ. ಇದನ್ನು ಪೆರೇಸಂದ್ರದಲ್ಲಿ ಎಲ್ಲರಿಗೂ ಕಾಣುವ ಹಾಗೆ ಮತ್ತು ಇದರ ಮಹತ್ವವನ್ನು ತಿಳಿಸುವ ಹಾಗೆ ಪ್ರದರ್ಶಿಸಿ ನಿಲ್ಲಿಸಬೇಕು ಎಂದು ಇತಿಹಾಸ
ತಜ್ಞರಾದ ಧನಪಾಲ್, ಕಾವ್ಯಶ್ರೀ ಮತ್ತು ಎಸ್.ವಿಜಯಕುಮಾರ್ ಒತ್ತಾಯಿಸಿದ್ದಾರೆ.

ಪೆರೇಸಂದ್ರ ಗ್ರಾಮದ ಅಮಿರ್ ಪಾಷ ಅವರ ಜಮೀನಿನಲ್ಲಿರುವ ಶಾಸನದ ಮೇಲಿನ ಪಠ್ಯವನ್ನು ಓದಿ ವಿವರಿ
ಸಿದ ಅವರು ಇದರ ಸಂರಕ್ಷಣೆಯ ಅಗತ್ಯವನ್ನು ಗ್ರಾಮಸ್ಥರಿಗೆ ವಿವರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಸುಧಾಕರ್ ಅವರ ಸ್ವಗ್ರಾಮದ ಅದರಲ್ಲೂ ಅವರ ಮನೆಯ ಹತ್ತಿರವೇ ಇರುವ ಈ ಶಾಸನವನ್ನು ಜತನದಿಂದ ಕಾಪಾಡಬೇಕು. ಇದರ ಮೇಲಿನ ಬರಹ ಹಾಗೂ ಸಾರಾಂಶವನ್ನು ಬರೆಯಿಸಿಕೊಡುತ್ತೇನೆ, ಸ್ಥಳೀಯರು ಆಸಕ್ತಿವಹಿಸಿ ಸಂರಕ್ಷಿಸಬೇಕು. ಈ ಶಾಸನವಿರುವ ಜಮೀನಿನ ಮಾಲೀಕ ಅಮಿರ್ ಪಾಷ ಅವರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.

ಪೆರೇಸಂದ್ರ ಇತಿಹಾಸದಲ್ಲಿ ಬಹುಮುಖ್ಯವಾದ ಸ್ಥಾನವನ್ನು ಪಡೆದಿತ್ತು. ಟಿಪ್ಪುಸುಲ್ತಾನನನ್ನು ಸೋಲಿಸುವ ಮುನ್ನ ಬ್ರಿಟಿಷ್ ದಂಡನಾಯಕ ಲಾರ್ಡ್ ಕಾರ್ನ್ ವಾಲೀಸ್ ಇಲ್ಲಿನ ಶಿವ ದೇವಾಲಯಕ್ಕೆ ಭೇಟಿ ಕೊಟ್ಟಿದ್ದದ್ದು ಹಾಗೂ ಇಲ್ಲಿನ ಪ್ರಾಕೃತಿಕ ಸಂಪತ್ತಿಗೆ ಮನಸೋತ ದಾಖಲೆಗಳಿವೆ. ಈ ಗ್ರಾಮದಲ್ಲಿ ಸಿಕ್ಕಿರುವ ಸುಮಾರು ಆರು ಅಡಿ ಎತ್ತರದ ಎರಡೂ ಬದಿಯಲ್ಲಿ ಕನ್ನಡದ ಲಿಪಿಯಲ್ಲಿ ಕೆತ್ತಲಾದ ಈ ವಿಶೇಷವಾದ ಶಾಸನವನ್ನು ಇತಿಹಾಸ ತಜ್ಞರಾದ ಕೆ.ಆರ್.ನರಸಿಂಹನ್ ಮತ್ತು ಪಿ.ವಿ.ಕೃಷ್ಣಮೂರ್ತಿ ಅವರ ಮಾರ್ಗದರ್ಶನದಲ್ಲಿ ನಾವು ಅಧ್ಯಯನ ನಡೆಸಿದೆವು.

‘ವಿಜಯನಗರ ಅರಸರಿಗೆ ನೀರಾವರಿಯ ಬಗ್ಗೆ ಇದ್ದ ಕಳಕಳಿಯನ್ನು ಅವರ ಕಾಲದಲ್ಲಿ ನಿರ್ಮಿಸಲಾದ ನೂರಾರು ಕೆರೆ ಕಟ್ಟೆಗಳ ಮೂಲಕವಾಗಿ ಅರಿತುಕೊಳ್ಳಬಹುದಾಗಿದೆ. ಇಂತಹ ದೊಂದು ಸಾಮಾಜಿಕ ಕಾರ್ಯವೈಖರಿಯನ್ನು ಪೆರಿಯ ಸಮುದ್ರದಲ್ಲಿ (ಪೆರೇಸಂದ್ರ), ತಂದೆ ತಾಯಿಯರ ಮೇಲಿನ ಪ್ರೀತಿ ಗೌರವ, ಊರ ಜನರಿಗೆ ಮತ್ತು ಮುಂದಿನ ತಲೆಮಾರಿನ ಪ್ರಜೆಗಳಿಗೆ ಜೀವನಾಶ್ರಯಕ್ಕಾಗಿ, ಬ್ರಾಹ್ಮಣರಿಗೆ ಗೌರವಪೂರ್ವಕವಾಗಿ, ಒಂದು ಕೆರೆ ಮತ್ತು ಊರನ್ನು ಕಟ್ಟಿದ ಮಹಾದಾನಿಗಳಾದ ಪೋಚೆನಾಯ್ಕನ ಮಕ್ಕಳು ಹಿರಿಯ ಚೀಲೇನಾಯ್ಕ ಮತ್ತು ಚಿಕ್ಕಚೀಲೆ ನಾಯಕ ಎಂಬ ಮಹಾದಾನಿಗಳನ್ನು ಗೌರವಪೂರ್ವಕವಾಗಿ ನೆನೆಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಇದನ್ನು ಮುಂದಿನ ಪೀಳಿಗೆಯವರಿಗೆ ತಿಳಿಸಲು, ನಾವುಗಳು ಹೆಮ್ಮೆಪಡಲು ಸಂರಕ್ಷಿಸಬೇಕು’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT