ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಂದಿ ಬೆಟ್ಟದಲ್ಲಿ ಬ್ರಿಟಿಷ್ ಅಧಿಕಾರಿಗಳ ಮೂಲಕ ಬಂದ ನೀಲಗಿರಿ ಮರಗಳು

Published : 18 ಸೆಪ್ಟೆಂಬರ್ 2024, 7:17 IST
Last Updated : 18 ಸೆಪ್ಟೆಂಬರ್ 2024, 7:17 IST
ಫಾಲೋ ಮಾಡಿ
Comments

ಶಿಡ್ಲಘಟ್ಟ: ನೀಲಗಿರಿ ಮರಗಳನ್ನು ಬೆಳೆಸುವುದರಿಂದ ಅಂತರ್ಜಲ ಬರಡಾಗುತ್ತದೆ. ಹಾಗಾಗಿ ನೀಲಗಿರಿ ಬೆಳೆ ನಿಷೇಧಿಸುವಂತೆ ಸರ್ಕಾರ ಈಗಾಗಲೇ ಆದೇಶಿಸಿದೆ.

ವಿಶೇಷವೆಂದರೆ ನಂದಿಬೆಟ್ಟದಲ್ಲಿ ಈ ನೀಲಗಿರಿ ಮರಗಳು ಇಲ್ಲಿನ ಅಲ್ಲಿನ ಸೌಂದರ್ಯವನ್ನು ಹೆಚ್ಚಿಸಿವೆ. ಮಣ್ಣಿನ ಸವಕಳಿ ತಡೆಯಲೂ ಇವು ನೆರವಾಗಿವೆ. ಮುಂಜಾನೆಯ ಬಿಳಿ ಮಂಜಿನಲಿ, ಇಬ್ಬನಿ ಬೀಳುವಾಗ, ಕಂಡೂ ಕಾಣದಂತಿರುವ ನೀಲಗಿರಿ ಮರಗಳ ನಡುವೆ ನಡೆದೋ ಅಥವಾ ವಾಹನಗಳಲ್ಲಿ ಹೋಗುವಾಗಲೋ ಸಿಗುವ ಸಂತಸ ಬಣ್ಣಿಸಲಸದಳ. ಮಂಜಿನ ಮುಸುಕನ್ನು ಹೊದ್ದ ನೀಲಗಿರಿ ಮರಗಳು ಅಲೌಕಿಕ ಸೌಂದರ್ಯವನ್ನು ನೀಡುತ್ತವೆ.

ಆಸ್ಟ್ರೇಲಿಯಾ ಮೂಲದ ಈ ನೀಲಗಿರಿ ಮರಗಳ ಇತಿಹಾಸ ಕೆದಕಿದಾಗ, ಅವು ಇಲ್ಲಿಗೆ ಬಂದುದು ಸುಮಾರು 160 ವರ್ಷಗಳ ಹಿಂದೆ ಎಂಬುದಾಗಿ ತಿಳಿದುಬರುತ್ತದೆ.

ನಂದಿದುರ್ಗದ ಯುದ್ಧದ ಸಂದರ್ಭದಲ್ಲಿ ಅಂದರೆ 1791ರಲ್ಲಿ, ವಿವಿಧ ಕಲಾವಿದರಿಂದ ಚಿತ್ರಿತವಾಗಿರುವ ನಂದಿದುರ್ಗ ಬೋಳು ಬೆಟ್ಟವಾಗಿತ್ತು. ಅದೇ ನೂರು ವರ್ಷಗಳಲ್ಲಿ ಅಂದರೆ,1890 ರ ಹೊತ್ತಿಗೆ ನಾನಾ ವಿಧದ ಸಸ್ಯಗಳನ್ನೊಳಗೊಂಡ ಹಸಿರು ಹೊದ್ದ ಸುಂದರ ಗಿರಿಯಾಗಿ ಬದಲಾಗಿತ್ತು. ಇದಕ್ಕೆ ಕಾರಣರಾದವರು ಬ್ರಿಟಿಷ್ ಅಧಿಕಾರಿಗಳು. ಅವರ ‘ಆರ್ಥಿಕ ಸಸ್ಯಶಾಸ್ತ್ರ’ ಎಂಬ ಪರಿಕಲ್ಪನೆಯಿಂದಾಗಿ ವೈವಿಧ್ಯಮಯ ಸಸ್ಯಗಳು ನಂದಿಗಿರಿಯನ್ನು ಅಲಂಕರಿಸಿದವು.

ಮಾರ್ಕ್ ಕಬ್ಬನ್ ಅವರು ಬೆಂಗಳೂರಿನ ಲಾಲ್‌ಬಾಗ್ ಅನ್ನು 1856ರಲ್ಲಿ ಮೈಸೂರು ಸಂಸ್ಥಾನದ ಸಸ್ಯಶಾಸ್ತ್ರದ ತೋಟವನ್ನಾಗಿ ಪರಿವರ್ತಿಸಲು ಕಾರ್ಯೋನ್ಮುಖರಾದರು. ಆ ಸಂದರ್ಭದಲ್ಲಿ ಜಗತ್ತಿನ ಸಸ್ಯ ವಿಜ್ಞಾನದ ಸಂಶೋಧನೆಯ ಸರ್ವೋತ್ಕೃಷ್ಟ ಕೇಂದ್ರವಾಗಿದ್ದುದು ಲಂಡನ್‌ನ ಕ್ಯೂ ನಲ್ಲಿರುವ ರಾಯಲ್ ಬೊಟಾನಿಕ್ ಗಾರ್ಡನ್ಸ್. ಅದರ ನಿರ್ದೇಶಕ ಖ್ಯಾತ ಸಸ್ಯವಿಜ್ಞಾನಿ ಸರ್ ವಿಲಿಯಂ ಹೂಕರ್ ಅವರನ್ನು (1855 ರಲ್ಲಿ) ಮದ್ರಾಸ್ ಪ್ರೆಸಿಡೆನ್ಸಿಯ ಅರಣ್ಯ ಸಂರಕ್ಷಣಾಧಿಕಾರಿ ಹ್ಯೂಗ್‌ಕ್ಲೆಗ್‌ ಹಾರ್ನ್ ಅವರು ಬೆಂಗಳೂರಿನ ಲಾಲ್ ಬಾಗ್ ತೋಟದ ಮೇಲ್ವಿಚಾರಣೆ ಮಾಡಲು ಒಬ್ಬ ಸೂಕ್ತ ವ್ಯಕ್ತಿಯನ್ನು ಹುಡುಕಲು ಸಹಾಯ ಮಾಡುವಂತೆ ಕೋರಿದ್ದರು.

ವಿಲಿಯಂ ಹೂಕರ್ ಸಲಹೆಯ ಮೇರೆಗೆ ಸಸ್ಯವಿಜ್ಞಾನಿಯಾಗಿ ತರಬೇತಿ ಪಡೆದಿದ್ದ ವಿಲಿಯಂ ನ್ಯೂ ಲಾಲ್‌ಬಾಗ್‌ನ ಮೊದಲ ಅಧೀಕ್ಷಕರಾದರು. ನ್ಯೂ ಈ ಹಿಂದೆ ಬೆಲ್‌ಫಾಸ್ಟ್ ಸಸ್ಯತೋಟದಲ್ಲಿ ಹಾಗೂ ಕ್ಯೂ ನಲ್ಲಿ ಕಾರ್ಯನಿರ್ವಹಿಸಿದ್ದರು. ವಿಲಿಯಂ ನ್ಯೂ 1858ರ ಏಪ್ರಿಲ್‌ನಲ್ಲಿ ಬೆಂಗಳೂರಿಗೆ ಬಂದರು. ಜೊತೆಯಲ್ಲಿ ಹೂಕರ್ ಅವರು ಕೊಟ್ಟ ದೊಡ್ಡ ಸಂಖ್ಯೆಯ ಗಿಡ-ಮರಗಳನ್ನು ಜೊತೆಯಲ್ಲಿ ತಂದರು. ಅದರಲ್ಲಿ ಆಸ್ಟ್ರೇಲಿಯಾ, ನಾರ್ತ್ ಆಫ್ರಿಕ, ಮದೀರಾ ಹಾಗೂ ಟೆನಿರೈಫ್‌ನ ತಳಿಗಳೂ ಸೇರಿದ್ದವು. ಲಾಲ್‌ಬಾಗ್‌ನಲ್ಲಿ ಕೆರೆಯ ಏರಿಯ ಕೆಳಗಿರುವ ಕೆಲವು ನೀಲಗಿರಿ ಮರಗಳು (ಆಸ್ಟ್ರೇಲಿಯಾದವು) ವಿಲಿಯಂ ನ್ಯೂ ನ ಅವಧಿಯದ್ದಾಗಿವೆ.

ಮಾರ್ಕ್ ಕಬ್ಬನ್ ಬೇಸಿಗೆಯ 3-4 ತಿಂಗಳು ನಂದಿ ಬೆಟ್ಟದ ‘ಕಬ್ಬನ್ ಹೌಸ್’ ನಲ್ಲಿದ್ದುಕೊಂಡೇ ಆಡಳಿತ ನಡೆಸುತ್ತಿದ್ದರಿಂದ ಹಾಗೂ ಸರ್ಕಾರಿ ಉದ್ಯಾನ ಇಲಾಖೆಯ ಅಡಿಯಲ್ಲಿಯೇ ಇದ್ದ ನಂದಿಬೆಟ್ಟದಲ್ಲಿಯೂ ಆಗ ವಿವಿಧ ರೀತಿಯ ವಿದೇಶಿ ಸಸ್ಯಗಳನ್ನು ಬೆಳೆಸಲು ಮುಂದಾದರು. ‘ವಿಲಿಯಂ ನ್ಯೂ ನ ಅವಧಿಯಲ್ಲಿಯೇ, ಆಸ್ಟ್ರೇಲಿಯಾದ ಹವಾಮಾನವನ್ನೇ ಹೊಂದಿರುವ ನಂದಿಬೆಟ್ಟದಲ್ಲಿ ಈ ನೀಲಗಿರಿ ಸಸಿಗಳು ಚೆನ್ನಾಗಿ ಬೆಳೆಯುತ್ತವೆಂದು ಅವನ್ನು ತಂದು ನೆಟ್ಟರು. ಟಿಪ್ಪು ಬೇಸಿಗೆ ಅರಮನೆ ಮುಂದೆ ನ್ಯೂ ಅವಧಿಯಲ್ಲಿ ನೆಟ್ಟ ಎರಡು ಹಳೆಯ ನೀಲಗಿರಿ ಮರಗಳಿದ್ದವು. ಅವುಗಳಲ್ಲಿ ಒಂದು ಕೆಲ ವರ್ಷಗಳ ಹಿಂದೆ ಮುರಿದು ಬಿತ್ತು. ಇನ್ನೊಂದು ನೀಲಗಿರಿ ಮರವನ್ನು ನಾವೀಗ ನೋಡಬಹುದು. ಹಾಗೆಯೇ ಹೆಚ್ಚಾದ ನೀಲಗಿರಿ ಸಸಿಗಳನ್ನು ಕಂಟೋನ್ಮೆಂಟ್ ಪ್ರದೇಶದಲ್ಲಿನ ಪ್ರಮುಖ ಮಿಲಿಟರಿ ಕ್ಯಾಂಪಸ್‌ಗಳ ಆವರಣದಲ್ಲಿ ಕೂಡ ನೆಡಲಾಯಿತು. ನಂತರ ಕಾಲದಿಂದ ಕಾಲಕ್ಕೆ ಗಿಡ ನೆಡುವ ಪ್ರಕ್ರಿಯೆ ಮುಂದುವರೆಯಿತು’ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ನಿವೃತ್ತ ಅಧಿಕಾರಿ ಸಂತೆ ನಾರಾಯಣಸ್ವಾಮಿ.

‘1890ರಲ್ಲಿ ಜಾನ್ ಕ್ಯಾಮೆರಾನ್ ಅವರು ಸರ್ಕಾರಿ ಉದ್ಯಾನ ಇಲಾಖೆ ಅಧೀಕ್ಷಕರಾಗಿದ್ದಾಗ ನಂದಿಬೆಟ್ಟದ ವಿವಿಧ ಎತ್ತರಗಳಲ್ಲಿ, ವಿವಿಧ ಹವಾಮಾನದಲ್ಲಿ ಬೆಳೆಯುವ ಗಿಡಗಳನ್ನು ನೆಟ್ಟು ಬೆಳೆಸುವ ಹಾಗೂ ಚಳಿಯಿರುವ ದೇಶಗಳಿಂದ ತಂದ ಸಸ್ಯಗಳನ್ನು ನಮ್ಮ ದೇಶದ ಹವಾಮಾನಕ್ಕೆ ಒಗ್ಗಿಸಲು ನಂದಿಬೆಟ್ಟದಲ್ಲಿ ಪ್ರಾಯೋಗಿಕ ಉದ್ಯಾನದ ಯೋಜನೆಯ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಿದ್ದರು. ನಂದಿಬೆಟ್ಟದ ಮೇಲೆ ಅವರು ವಿದೇಶಿ ಗಿಡಗಳ ಅಪರೂಪದ ನರ್ಸರಿ ರೂಪಿಸಿದ್ದರು. ಸಮಶೀತೋಷ್ಣ ಪ್ರದೇಶಗಳ ಹಣ್ಣಿನ ಬೆಳೆಗಳಾದ ಸೇಬು, ಪ್ಲಮ್, ಪೀಚ್, ಏಪ್ರಿಕಾಟ್, ಕಿತ್ತಳೆ, ಅನಾನಸ್‌ ಬೆಳೆಸಿದ್ದರು’ ಎಂದು ಅವರು ವಿವರಿಸಿದರು.

ಟಿಪ್ಪು ಬೇಸಿಗೆ ಅರಮನೆ ಮುಂದಿರುವ ವಿಲಿಯಂ ನ್ಯೂ ನೆಡಿಸಿದ ನೀಲಗಿರಿ ಮರದ ಕಾಂಡವನ್ನು ಈ ಚಿತ್ರದಲ್ಲಿ ಕಾಣಬಹುದು
ಟಿಪ್ಪು ಬೇಸಿಗೆ ಅರಮನೆ ಮುಂದಿರುವ ವಿಲಿಯಂ ನ್ಯೂ ನೆಡಿಸಿದ ನೀಲಗಿರಿ ಮರದ ಕಾಂಡವನ್ನು ಈ ಚಿತ್ರದಲ್ಲಿ ಕಾಣಬಹುದು
ನಂದಿ ಬೆಟ್ಟದ ಸೌಂದರ್ಯವನ್ನು ಇಮ್ಮಡಿಗೊಳಿಸುವ ನೀಲಗಿರಿ ಮರಗಳು
ನಂದಿ ಬೆಟ್ಟದ ಸೌಂದರ್ಯವನ್ನು ಇಮ್ಮಡಿಗೊಳಿಸುವ ನೀಲಗಿರಿ ಮರಗಳು
ನಂದಿ ಬೆಟ್ಟದ ಸೌಂದರ್ಯವನ್ನು ಇಮ್ಮಡಿಗೊಳಿಸುವ ನೀಲಗಿರಿ ಮರಗಳು
ನಂದಿ ಬೆಟ್ಟದ ಸೌಂದರ್ಯವನ್ನು ಇಮ್ಮಡಿಗೊಳಿಸುವ ನೀಲಗಿರಿ ಮರಗಳು
ನಂದಿ ಬೆಟ್ಟದ ಸೌಂದರ್ಯವನ್ನು ಇಮ್ಮಡಿಗೊಳಿಸುವ ನೀಲಗಿರಿ ಮರಗಳು
ನಂದಿ ಬೆಟ್ಟದ ಸೌಂದರ್ಯವನ್ನು ಇಮ್ಮಡಿಗೊಳಿಸುವ ನೀಲಗಿರಿ ಮರಗಳು
ನಂದಿ ಬೆಟ್ಟದ ಸೌಂದರ್ಯವನ್ನು ಇಮ್ಮಡಿಗೊಳಿಸುವ ನೀಲಗಿರಿ ಮರಗಳು
ನಂದಿ ಬೆಟ್ಟದ ಸೌಂದರ್ಯವನ್ನು ಇಮ್ಮಡಿಗೊಳಿಸುವ ನೀಲಗಿರಿ ಮರಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT