ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಗುರಿಮುಟ್ಟದ ಎಚ್‌.ಎನ್ ವ್ಯಾಲಿ ಕಾಮಗಾರಿ

ಇಲಾಖೆಗಳ ನಡುವೆ ಸಮನ್ವಯ ಕೊರತೆ; ಪರಿಶೀಲನೆ ಹಂತದಲ್ಲಿ ಕಾಲಾವಧಿ ವಿಸ್ತರಣೆ
Last Updated 15 ಏಪ್ರಿಲ್ 2022, 5:07 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಹೆಬ್ಬಾಳ–ನಾಗವಾರ (ಎಚ್‌.ಎನ್ ವ್ಯಾಲಿ) ನೀರಾವರಿ ಯೋಜನೆ ಕಾಮಗಾರಿ ಜಾರಿಯಾಗಿ ಐದು ವರ್ಷವಾಗಿದೆ. ಹೀಗಿದ್ದರೂ ಕಾಮಗಾರಿ ಮಾತ್ರ ನಿಗದಿತ ಅವಧಿಯಲ್ಲಿ ಗುರಿಮುಟ್ಟಲು ಸಾಧ್ಯವಾಗುತ್ತಿಲ್ಲ. ಈಗ ಮತ್ತೆ ಯೋಜನೆಯ ಕಾಲಾವಧಿವಿಸ್ತರಣೆ ಸರ್ಕಾರದ ಮಟ್ಟದಲ್ಲಿ ಪರಿಶೀಲನೆಯ ಹಂತದಲ್ಲಿದೆ!

ಕಾಮಗಾರಿ ‍ಪೂರ್ಣವಾಗಲು ಇನ್ನು ಎಷ್ಟು ಕಾಲಬೇಕೊ ಎನ್ನುವ ಪ್ರಶ್ನೆ ಜಿಲ್ಲೆಯ ರೈತ ಮುಖಂಡರು ಮತ್ತು ನೀರಾವರಿ ಹೋರಾಟಗಾರರಲ್ಲಿ ಮೂಡಿದೆ. ಕಾಮಗಾರಿಯ ವಿಳಂಬಕ್ಕೆಕಾರಣಗಳನ್ನು ಹುಡುಕುತ್ತ ಹೋದರೆ ಇಲಾಖೆಗಳ ನಡುವೆಯೇ ಸಮನ್ವಯದ ಕೊರತೆ ಎದ್ದು ಕಾಣುತ್ತದೆ. ಸಣ್ಣ ನೀರಾವರಿ ಇಲಾಖೆ ನೀಡಿರುವ ಮಾಹಿತಿಗಳೇ ಇಲಾಖೆಗಳ ನಡುವೆ ಸಮನ್ವಯ ಇಲ್ಲ ಎನ್ನುವುದನ್ನು ತೋರಿಸುತ್ತಿದೆ.

ಎಚ್‌.ಎನ್. ವ್ಯಾಲಿ ಜಿಲ್ಲೆಯ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಒಂದು. ಜಿಲ್ಲೆಗೆ ಈ ಯೋಜನೆಯಡಿ ನೀರು ಹರಿಯುತ್ತಿದೆ. ಮತ್ತೊಂದು ಕಡೆ ಯೋಜನೆಯ ನೀರನ್ನು ಮೂರು ಹಂತದಲ್ಲಿ ಸಂಸ್ಕರಿಸಬೇಕು ಎನ್ನುವ ಕೂಗು ನೀರಾವರಿ ಹೋರಾಟಗಾರರಿಂದ ಕೇಳುತ್ತಲೇ ಇದೆ. ಆದರೆ ಆ ಕೂಗು ಸರ್ಕಾರಕ್ಕೆ ಮುಟ್ಟುತ್ತಿಲ್ಲ.

ಬೆಂಗಳೂರು ನಗರದ ಹೆಬ್ಬಾಳ–ನಾಗವಾರ ವ್ಯಾಲಿಯಲ್ಲಿನ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ಎರಡನೇ ಹಂತದಲ್ಲಿ ಕೊಳಚೆ ನೀರು ಸಂಸ್ಕರಿಸಿ, ಅದನ್ನು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿನ 65 ಕೆರೆಗಳಿಗೆ ತುಂಬಿಸುವ ಏತ ನೀರಾವರಿ ಯೋಜನೆ ಇದಾಗಿದೆ. ಇದಕ್ಕೆ ₹ 883.54 ಕೋಟಿಗಳಿಗೆ ಅನು ಮೋದನೆ ನೀಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ 44 ಕೆರೆಗಳು‌ ಎಚ್.ಎನ್.ವ್ಯಾಲಿ ಯೋಜನೆ ವ್ಯಾಪ್ತಿಗೆ ಒಳಪಡುತ್ತವೆ.

2017ರ ಮಾ.31ರಂದು ಗುತ್ತಿಗೆದಾರರಿಗೆ ಕಾರ್ಯಾದೇಶ ಸಹ ನೀಡಲಾಗಿದೆ. ಕಾಮಗಾರಿ ಪೂರ್ಣಗೊಳಿಸಲು ಮಳೆಗಾಲವೂ ಸೇರಿದಂತೆ 18 ತಿಂಗಳು ಕಾಲಾವಧಿ ನೀಡಲಾಗಿತ್ತು. ಆ ಪ್ರಕಾರ 2018ರ ಸೆ.30ರ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕಾಗಿತ್ತು. ಆದರೆ ಇಂದಿಗೂ ಪೂರ್ಣ ಪ್ರಮಾಣದಲ್ಲಿ ಯೋಜನೆಯ ಕಾಮಗಾರಿ ಮುಗಿದಿಲ್ಲ!

ಈಗಾಗಲೇ ಯೋಜನೆಯಡಿ 134.07 ಕಿ.ಮೀ ಪೈಪ್‌ಲೈನ್ ಅಳವಡಿಸ ಲಾಗಿದೆ. 5 ಲಿಫ್ಟ್‌ಗಳ ಪಂಪ್‌ಹೌಸ್ ಕಾಮಗಾರಿ ಪೂರ್ಣ ಗೊಳಿಸ ಲಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಒದಗಿಸುತ್ತಿರುವ 130 ಎಂಎಲ್‌ಡಿ ನೀರನ್ನು ಕೆರೆಗಳಿಗೆ ಹರಿಸಲಾಗುತ್ತಿದೆ.

2021ರಲ್ಲಿ ಸೆಪ್ಟೆಂಬರ್‌ನಿಂದ ನವೆಂಬರ್‌ನಲ್ಲಿ ಸುರಿದ ಮಳೆಯಿಂದ ಯೋಜನೆಯ 65 ಕೆರೆಗಳ ಪೈಕಿ ಮಳೆ ನೀರು ಸೇರಿದಂತೆ 64 ಕೆರೆಗಳಿಗೆ ನೀರು ಹರಿಸಲಾಗಿದೆ.

ಯೋಜನೆಯಡಿಕೆರೆಗಳ ಹೂಳು ತೆಗೆಯಬೇಕು. ಕೆರೆಗಳಲ್ಲಿ ಬೆಳೆದಿರುವ ಗಿಡ ಮರ (ಜಂಗಲ್ ಕಟ್) ತೆರವುಗೊಳಿಸಬೇಕು. ಏರಿ ಮತ್ತು ಕೋಡಿ ಅಭಿವೃದ್ಧಿಗೊಳಿಸಬೇಕು. ನಾಲೆಗಳ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಬೇಕು. ಇದರಲ್ಲಿ ಬಹಳಷ್ಟು ಕಾಮಗಾರಿಗಳು ಇಂದಿಗೂ ‌ಪ್ರಗತಿಯಲ್ಲಿವೆ.

ರೈಸಿಂಗ್ ಮೆನ್ ಪೈಪ್‌ಲೈನ್ ಅಳವಡಿಸಲು ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ಲೋಕೋಪಯೋಗಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ನಿಗದಿತ ಅವಧಿಯ ಒಳಗೆ ಅನುಮತಿ ದೊರೆಯದೇ ಇರುವುದು ಸಹ ಕಾಮಗಾರಿಯು ನಿಗದಿತ ಅವಧಿಯಲ್ಲಿ ನಿರ್ವಹಿಸಲು ಸಾಧ್ಯವಾಗಿಲ್ಲ ಎಂದು ಸಣ್ಣ ನೀರಾವರಿ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT