ಭಾನುವಾರ, ಆಗಸ್ಟ್ 1, 2021
21 °C
ಲಾಕ್‌ಡೌನ್ ನಡುವೆಯೂ ನರ್ಸರಿ ಕಸಿ ಸಸಿಗಳ ಮಾರಾಟ ಹೆಚ್ಚಳ

ತೋಟಗಾರಿಕೆ ಇಲಾಖೆಗೆ ಹೆಚ್ಚಿದ ಆದಾಯ

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಲಾಕ್‌ಡೌನ್ ನಡುವೆಯೂ ಜಿಲ್ಲೆಯ ತೋಟಗಾರಿಕಾ ಇಲಾಖೆ ಉತ್ತಮ ಆದಾಯಗಳಿಸಿದೆ. ಕೋವಿಡ್, ಲಾಕ್‌ಡೌನ್ ಪರಿಣಾಮ ನಗರಗಳನ್ನು ತೊರೆದು ಜನರು ಸ್ವಗ್ರಾಮಗಳಿಗೆ ಮರಳುವಂತೆ ಮಾಡಿತು. ಅಲ್ಲದೇ, ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಉತ್ತಮ ಮಳೆಯೂ ಆಯಿತು. ಈ ಎಲ್ಲ ಕಾರಣದಿಂದ ಪ್ರಸಕ್ತ ವರ್ಷ ತೋಟಗಾರಿಕಾ ಇಲಾಖೆ ನರ್ಸರಿಯಿಂದ ಸುಮಾರು ಒಂದು ಲಕ್ಷ  ಸಸಿಗಳನ್ನು ಮಾರಾಟ ಮಾಡಲಾಗಿದೆ. ಆ ಮೂಲಕ ₹ 13 ಲಕ್ಷ ಆದಾಯಗಳಿಸಿದೆ.

ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ 2020–21ನೇ ಸಾಲಿನಲ್ಲಿ ಆದಾಯ ಸಹ ಹೆಚ್ಚಿದೆ. 2018–19ನೇ ಸಾಲಿನಲ್ಲಿ ₹ 12.96 ಲಕ್ಷ, 2019–20ನೇ ಸಾಲಿನಲ್ಲಿ ₹ 11.96 ಲಕ್ಷ ಆದಾಯವನ್ನು ಇಲಾಖೆಗಳಿಸಿತ್ತು. ಪ್ರಸಕ್ತ ₹ 13 ಲಕ್ಷ ಆದಾಯ ತೋಟಗಾರಿಕೆ ಇಲಾಖೆಯ ಬೊಕ್ಕಸ ಸೇರಿದೆ. ಈ ಆದಾಯ ಮತ್ತಷ್ಟು ಹೆಚ್ಚುತ್ತದೆ ಎನ್ನುತ್ತವೆ ಇಲಾಖೆ ಮೂಲಗಳು

ಕಳೆದ ವರ್ಷ ಮತ್ತು ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಉತ್ತಮ ಮಳೆ ಆಗಿದೆ. ಕೊರೊನಾ ಸಂದರ್ಭದಲ್ಲಿ ನಗರಗಳಿಂದ ಹಳ್ಳಿಗಳಿಗೆ ಬಂದ ಜನರು ತೋಟಗಾರಿಕಾ ಬೆಳೆಗಳತ್ತ ಗಮನವಹಿಸಿದ್ದಾರೆ. ಈ ಎಲ್ಲ ಕಾರಣದಿಂದ ಜನರು ತೋಟಗಾರಿಕಾ ಕ್ಷೇತ್ರಗಳಿಂದ ಸಸಿಗಳನ್ನು ಖರೀದಿಸಿ ನಾಟಿ ಮಾಡುತ್ತಿದ್ದಾರೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇ 30ರಿಂದ 40ರಷ್ಟು ಸಸಿಗಳ ಮಾರಾಟ ಹೆಚ್ಚಿದೆ.

ಪ್ರಸಕ್ತ ವರ್ಷ 14,500 ಮಾವಿನ ಸಸಿಗಳು, 9,000 ನೇರಳೆ, 3,500 ನಿಂಬೆ, 6,000 ನುಗ್ಗೆ, 6,000 ಕರಿಬೇವು, 20,000 ತಿಪಟೂರು ಟಾಲ್ ತೆಂಗಿನ ಸಸಿಗಳು, 4,500 ಸೀಬೆ ಸಸಿಗಳು ಹೀಗೆ ವಿವಿಧ ಸಸಿಗಳು ಮಾರಾಟವಾಗಿವೆ.

ಚಿಕ್ಕಬಳ್ಳಾಪುರದ ತೋಟಗಾರಿಕಾ ಇಲಾಖೆಯ ಸಸ್ಯಕ್ಷೇತ್ರ, ಸೊಪ್ಪಳ್ಳಿ, ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕದಾಸರಹಳ್ಳಿ, ಚಿಂತಾಮಣಿ ತಾಲ್ಲೂಕಿನ ಮಾಡಿಕೆರೆ ಮತ್ತು ಗುಡಿಬಂಡೆ ತಾಲ್ಲೂಕಿನ ಪಸುಪಲೋಡು ಸಸ್ಯ ಕ್ಷೇತ್ರಗಳಲ್ಲಿ ಇಲಾಖೆ ಪ್ರಮುಖವಾಗಿ ಸಸಿಗಳನ್ನು ಬೆಳೆಸುತ್ತಿದೆ.

‘ಒಂದು ಎಕರೆಯಲ್ಲಿ ಮಲ್ಲಿಕಾ, ದಶೇರಿ ಮಾವಿನ ತಳಿಗಳನ್ನು ನಾಟಿ ಮಾಡಿದರೆ ಅವು ಮೂರು ವರ್ಷಕ್ಕೆ ಫಲ ಬಿಡುತ್ತದೆ. ಆಗ ವರ್ಷಕ್ಕೆ ಸರಾಸರಿ ₹ 1 ಲಕ್ಷ ಆದಾಯ ಪಡೆಯಬಹುದು. ನಂತರದ ಮೂರ್ನಾಲ್ಕು ವರ್ಷಗಳಲ್ಲಿ ಆದಾಯ ಹೆಚ್ಚುತ್ತದೆ. ಈ ಕಾರಣದಿಂದ ಜಿಲ್ಲೆಯಲ್ಲಿ ಪ್ರಮುಖವಾಗಿ ಮಲ್ಲಿಕಾ ಮತ್ತು ದಶೇರಿ ಮಾವಿನ ತಳಿಗಳ ನಾಟಿ ಹೆಚ್ಚಿದೆ’ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುವರು. 

ಬಾಗೇಪಲ್ಲಿ ತಾಲ್ಲೂಕಿನ ಚಿನ್ನೆಪಲ್ಲಿ ತೋಟಗಾರಿಕಾ ಕ್ಷೇತ್ರದಲ್ಲಿ ತೆಂಗಿನ ಸಸಿಗಳನ್ನು ಬೆಳೆಸಲಾಗುತ್ತಿದೆ. ಅಲ್ಲಿ ಸದ್ಯ ಮೂರೂವರೆ ಸಾವಿರ ಸಸಿಗಳು ಮಾರಾಟಕ್ಕಿವೆ. ಇದಲ್ಲದೆ ಮಾವು, ನೇರಳೆ, ನುಗ್ಗಿ, ನಿಂಬೆ, ಕರಿಬೇವಿನ ಸಸಿಗಳು ಸದ್ಯ ತೋಟಗಾರಿಕಾ ಇಲಾಖೆಯಿಂದ
ದೊರೆಯುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.