ಚಿಂತಾಮಣಿ: ಮಾರುಕಟ್ಟೆಯಲ್ಲಿ ತರಕಾರಿ ಮತ್ತು ಕೋಳಿ ಮೊಟ್ಟೆ ಬೆಲೆ ಗಗನಕ್ಕೇರಿದ್ದು ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟ ಒದಗಿಸುವುದು ಶಿಕ್ಷಕರಿಗೆ ಸವಾಲ್ ಆಗಿದೆ.
ಚಿಲ್ಲರೆ ಅಂಗಡಿಗಳಲ್ಲಿ ಕೋಳಿ ಮೊಟ್ಟೆ ಬೆಲೆ ₹ 7ಕ್ಕೆ ಮಾರಾಟವಾಗುತ್ತಿದೆ. ಆದರೆ, ಸರ್ಕಾರ ಮೊಟ್ಟೆ ಖರೀದಿಗಾಗಿ ₹ 5 ಅನುದಾನ ನೀಡುತ್ತಿದೆ. ಮೊಟ್ಟೆ ಸಾಗಾಣಿ ಹಾಗೂ ಬೇಯಿಸಲು ₹ 1 ವಿತರಿಸುತ್ತಿದೆ. ಹಾಗಾಗಿ ದರ ಹೆಚ್ಚಳದ ಬಿಸಿ ಶಿಕ್ಷಕರ ಜೇಬಿಗೆ ಕತ್ತರಿಯಾಕಿದೆ.
ಶಾಲೆಗಳಲ್ಲಿ ವಾರಕ್ಕೆ ಎರಡು ದಿನ ಮೊಟ್ಟೆ ವಿತರಿಸಬೇಕಿದೆ. ಒಂದು ದಿನ ಮೊಟ್ಟೆ ನೀಡದಿದ್ದರೆ ದೂರುಗಳ ಸುರಿಮಳೆಯಾಗುತ್ತವೆ. ಹಾಗಾಗಿ ನಮ್ಮ ಕೈಯಿಂದ ಹಣ ಹಾಕಿ ಮೊಟ್ಟೆ ಖರೀದಿಸುವಂತಾಗಿದೆ ಎಂಬುದು ಬಿಸಿಯೂಟದ ಉಸ್ತುವಾರಿ ವಹಿಸಿಕೊಂಡಿರುವ ಶಿಕ್ಷಕರ ಅಳಲಾಗಿದೆ.
ತಾಲ್ಲೂಕಿನಲ್ಲಿ 198 ಸರ್ಕಾರಿ ಪ್ರಾಥಮಿಕ ಶಾಲೆಗಳು, 144 ಸರ್ಕಾರಿ/ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗಳು, 36 ಸರ್ಕಾರಿ/ಅನುದಾನಿತ ಪ್ರೌಢಶಾಲೆಗಳಿವೆ. ಪ್ರಾಥಮಿಕ ಶಾಲೆಗಳ 9,722 ವಿದ್ಯಾರ್ಥಿಗಳು, ಹಿರಿಯ ಪ್ರಾಥಮಿಕ ಶಾಲೆಗಳ 5,393, ಪ್ರೌಢಶಾಲೆಗಳಲ್ಲಿ 3,699 ವಿದ್ಯಾರ್ಥಿಗಳು ಹಾಗೂ ಕೆಪಿಎಸ್ ಶಾಲೆಯ 60 ಎಲ್‌ಕೆಜಿ/ಯುಕೆಜಿ ಮಕ್ಕಳು ಸೇರಿ ಒಟ್ಟು 18,874 ಮಂದಿ ಬಿಸಿಯೂಟದ ಫಲಾನುಭವಿಗಳಿದ್ದಾರೆ. 600 ಮಂದಿ ಅಡುಗೆ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
ಮೊಟ್ಟೆ ಸೇವಿಸದ ವಿದ್ಯಾರ್ಥಿಗಳಿಗೆ ಎರಡು ಬಾಳೆಹಣ್ಣು ನೀಡಬೇಕು. ಬಾಳೆಹಣ್ಣಿಗೆ ₹ 5.50, ಸಾಗಾಣೆಗೆ ₹ 50 ಪೈಸೆ ಸೇರಿಸಿ ಒಟ್ಟು ಒಬ್ಬ ವಿದ್ಯಾರ್ಥಿಗೆ ₹6 ಅನುದಾನ ನೀಡಲಾಗುತ್ತಿದೆ. ಏಲಕ್ಕಿ ಬಾಳೆಹಣ್ಣು ಒಂದು ಕೆ.ಜಿ ₹80, ಪಚ್ಚಬಾಳೆ ₹50 ಇದೆ. ₹6ಕ್ಕೆ ಎರಡು ಬಾಳೆ ಹಣ್ಣು ಖರೀದಿಸಲು ಸಾಧ್ಯವಾಗುತ್ತಿಲ್ಲ.
ಬಿಸಿಯೂಟ ಯೋಜನೆಯಲ್ಲಿ ಆಹಾರ ಪದಾರ್ಥಗಳನ್ನು ಸರ್ಕಾರ ಪೂರೈಕೆ ಮಾಡುತ್ತದೆ. ತರಕಾರಿ, ಸಾಂಬಾರು ಪುಡಿ, ಉಪ್ಪು ಖರೀದಿಸಲು ಅನುದಾನ ನೀಡುತ್ತದೆ. 1 ರಿಂದ 5 ನೇ ತರಗತಿಯವರೆಗೆ ಪ್ರತಿ ವಿದ್ಯಾರ್ಥಿಗೆ ₹ 1.93 ಹಾಗೂ 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ತಲಾ ₹ 2.89 ಅನುದಾನ ನೀಡುತ್ತಿದೆ. ಪ್ರಸ್ತುತ ತರಕಾರಿ ಬೆಲೆ ಗಗನಕ್ಕೇರಿದ್ದು, ತರಕಾರಿ ಹಾಗೂ ಮೊಟ್ಟೆ ಕೊಳ್ಳಲು ಶಿಕ್ಷಕರು ತಮ್ಮ ಜೇಬಿನಿಂದ ವ್ಯಯಮಾಡಬೇಕಾಗಿದೆ.
ತರಕಾರಿ ಬೆಲೆಯನ್ನು ಯಾರು ಕೇಳುವುದಿಲ್ಲ. ಸಾಂಬಾರಿನಲ್ಲಿ ತರಕಾರಿ ಇಲ್ಲದಿದ್ದರೆ ವಿದ್ಯಾರ್ಥಿಗಳು, ಪೋಷಕರು, ಅಧಿಕಾರಿಗಳು ಆಕ್ಷೇಪಣೆ ಮಾಡುತ್ತಾರೆ. ಅನೇಕ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಕಡಿಮೆ ಇರುತ್ತದೆ. ಕನಿಷ್ಠ ಒಬ್ಬ ವಿದ್ಯಾರ್ಥಿಯಿಂದ ಹಿಡಿದು ಗರಿಷ್ಠ 20 ವಿದ್ಯಾರ್ಥಿಗಳಿರುವ ಶಾಲೆಗಳ ಹೆಚ್ಚಿವೆ.
20 ವಿದ್ಯಾರ್ಥಿಗಳಿರುವ ಶಾಲೆಗೆ ತರಕಾರಿ ಮತ್ತು ಸಾಂಬಾರು ಪುಡಿ, ಉಪ್ಪು ಖರೀದಿಸಲು ಒಂದು ದಿನಕ್ಕೆ ₹38.60 ಅನುದಾನ ಬರುತ್ತದೆ. ಇಷ್ಟು ಕಡಿಮೆ ಮೊತ್ತದಲ್ಲಿ ಈಗಿರುವ ಬೆಲೆಯಲ್ಲಿ ಅರ್ಧ ಕೆ.ಜಿ.ಟೊಮೆಟೊ ಖರೀದಿಸಲೂ ಆಗುವುದಿಲ್ಲ. ಇತರೆ ತರಕಾರಿ ಸಾಂಬಾರು ಪುಡಿ ಖರೀದಿಸುವುದು ಹೇಗೆ ಎಂಬುದು ಶಿಕ್ಷಕರ ಪ್ರಶ್ನೆಯಾಗಿದೆ.
ಮಕ್ಕಳಿಗೆ ಪೌಷ್ಟಿಕಾಂಶವಿರುವ ಆಹಾರ ಕೊಡಬೇಕು ಎಂದು ಸರ್ಕಾರ ಮತ್ತು ಇಲಾಖೆ ಹೇಳುತ್ತದೆ. ಪೈಸೆ ಲೆಕ್ಕದಲ್ಲಿ ಅನುದಾನ ನೀಡಿದರೆ ಹೇಗೆ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವುದು. ತರಕಾರಿ ಇಲ್ಲದ ಸಾಂಬಾರು ಅಥವಾ ರಸಂ ಕೊಟ್ಟರೂ ಆರೋಪ ಬರುತ್ತದೆ. ಬಿಸಿಯೂಟ ಯೋಜನೆಯನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದು ಸಮಸ್ಯೆ ಆಗಿದೆ ಎಂಬುದು ಶಿಕ್ಷಕರೊಬ್ಬರ ಅಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.