ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕ ಶುಲ್ಕ ತಡೆಯುವಂತೆ ಒತ್ತಾಯ

ಕನ್ನಡಸೇನೆ ಪದಾಧಿಕಾರಿಗಳಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಮನವಿ
Last Updated 16 ಸೆಪ್ಟೆಂಬರ್ 2020, 12:28 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೋವಿಡ್‌ನ ಈ ಸಂಕಷ್ಟದ ಸಮಯದಲ್ಲಿ ಖಾಸಗಿ ಶಾಲೆಗಳು ಪೋಷಕರಿಂದ ಹೆಚ್ಚಿನ ಪ್ರವೇಶ ಶುಲ್ಕ ವಸೂಲಿ ಮಾಡದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿ, ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿ ಕನ್ನಡಸೇನೆ ಪದಾಧಿಕಾರಿಗಳು ಬುಧವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಜಿ.ನಾಗೇಶ್‌ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕನ್ನಡಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ವಿ.ರವಿಕುಮಾರ್, ‘ಕೋವಿಡ್-19 ಕಾರಣಕ್ಕೆ ಸಮಾಜದ ವಿವಿಧ ವರ್ಗದವರು ಒಂದಲ್ಲಾ ಒಂದು ರೀತಿಯ ಸಂಕಷ್ಟದಲ್ಲಿದ್ದಾರೆ. ಜನರ ಉದ್ಯೋಗ ಹಾಗೂ ಆದಾಯದ ಮೂಲ ಬತ್ತಿಹೋಗಿದೆ. ಹೀಗಿರುವಾಗ ರಾಜ್ಯ ಸರ್ಕಾರ ಖಾಸಗಿ ಶಾಲೆಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ವಿದ್ಯಾರ್ಥಿಗಳ ಶುಲ್ಕವನ್ನು ಪಾವತಿಸಲು ಗಡುವು ವಿಧಿಸಿರುವುದು ಜನ ವಿರೋಧಿ ಧೋರಣೆಯಾಗಿದೆ’ ಎಂದು ಹೇಳಿದರು.

‘ಖಾಸಗಿ ಶಾಲೆಗಳ ಶುಲ್ಕ ಪ್ರಮಾಣಕ್ಕೆ ಸರ್ಕಾರ ಯಾವುದೇ ಮಿತಿ ಹೇರಿಲ್ಲ. ಈ ಕಾರಣದಿಂದ ಕೆಲವು ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ಮನಸ್ಸಿಗೆ ಬಂದಂತೆ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಸಂಪೂರ್ಣವಾಗಿ ಖಾಸಗಿ ಶಿಕ್ಷಣ ಲಾಬಿಗೆ ಮಣಿದಿದೆ’ ಎಂದು ಆರೋಪಿಸಿದರು.

‘ಸರ್ಕಾರ ಶಾಲಾ ಕಾಲೇಜುಗಳ ಶುಲ್ಕ ಪಾವತಿಗೆ ವಿಧಿಸಿರುವ ಗಡುವನ್ನು ವಿಸ್ತರಿಸಬೇಕು. ನಿಗದಿತ ಶುಲ್ಕಕ್ಕಿಂತ ಶೇ 50ರಷ್ಟು ಶುಲ್ಕ ಪಾವತಿಸಿದರೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು ಎಂಬ ನಿರ್ದೇಶನವನ್ನು ಶಿಕ್ಷಣ ಸಂಸ್ಥೆಗಳಿಗೆ ನೀಡಬೇಕು. ಅಧಿಕ ಶುಲ್ಕ ವಸೂಲಿ ಮಾಡುವ ಶಾಲೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ಪದಾಧಿಕಾರಿಗಳಾದ ನವೀನ್‌ ಕುಮಾರ್, ವಾಸು, ಸಂದೀಪ್ ಕುಮಾರ್, ಹರೀಶ್‌, ಶಶಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT