ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ವೃದ್ಧಿಗೆ ಸಮಗ್ರ ಕೃಷಿ ಸಹಕಾರಿ

Last Updated 22 ನವೆಂಬರ್ 2020, 4:23 IST
ಅಕ್ಷರ ಗಾತ್ರ

ಚಿಂತಾಮಣಿ: ‘ರೈತರು ಸಮಗ್ರ ಕೃಷಿ ಪದ್ಧತಿ ಅನುಸರಿಸಿದರೆ ಸಮಸ್ಯೆಗಳಿಂದ ದೂರವಾಗಿ ಕೃಷಿಯೂ ಲಾಭದಾಯಕವಾಗುತ್ತದೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ತನ್ವೀರ್ ಅಹ್ಮದ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಊಲವಾಡಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ಮಣ್ಣು ಆರೋಗ್ಯ ಅಭಿಯಾನ ಮತ್ತು ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಏಕ ಬೆಳೆ ಪದ್ಧತಿ, ಬೆಳೆ ನಷ್ಟ, ಕೃಷಿ ಕಾರ್ಮಿಕರ ಕೊರತೆ, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದಿರುವುದು ಮತ್ತಿತರ ಸಮಸ್ಯೆಗಳನ್ನು ರೈತರು ಎದುರಿಸುತ್ತಿದ್ದಾರೆ. ಸಮಸ್ಯೆಗಳಿಂದ ಕಂಗೆಟ್ಟ ರೈತರು ಆತ್ಮಹತ್ಯೆಗೂ ಮುಂದಾಗುತ್ತಿರುವುದು ದುರಂತ ಎಂದರು.

ಸಣ್ಣ ರೈತರು ಸತತವಾಗಿ ಒಂದೇ ಬೆಳೆ ಬೆಳೆದು, ಆ ಬೆಳೆಗೆ ಸೂಕ್ತ ಬೆಲೆ ಸಿಗದೆ ಅಥವಾ ಬೆಳೆ ನಷ್ಟವಾದರೆ ಜೀವನ ಮಾಡುವುದು ತುಂಬಾ ಕಷ್ಟವಾಗುತ್ತದೆ. ಈ ಸಮಸ್ಯೆಗಳಿಂದ ಹೊರಬರಲು ಸಮಗ್ರ ಕೃಷಿ ಪದ್ಧತಿ ಸಹಕಾರಿಯಾಗಿದೆ. ಇದರಿಂದ ಸುಸ್ಥಿರ ಆದಾಯವೂ ದೊರೆಯುತ್ತದೆ ಎಂದು ಹೇಳಿದರು.

ತೋಟಗಾರಿಕೆ ಬೆಳೆಯ ಜತೆಗೆ ಕೃಷಿ ಬೆಳೆ, ಹೈನುಗಾರಿಕೆ, ರೇಷ್ಮೆ, ಜೇನುಕೃಷಿ, ಮೀನು ಸಾಕಾಣಿಕೆ, ಕೃಷಿ ಅರಣ್ಯ, ಮೇವು ಉತ್ಪಾದನೆ, ಕುರಿ-ಕೋಳಿ ಸಾಕಾಣಿಕೆ ಮಾಡಬೇಕು. ಒಂದರಲ್ಲಿ ನಷ್ಟವಾದರೂ ಮತ್ತೊಂದು ಕೈಹಿಡಿಯುತ್ತದೆ ಎಂದು ಸಲಹೆ ನೀಡಿದರು.

ಕೃಷಿ ಅಧಿಕಾರಿ ನೇತ್ರಾವತಿ ಮಾತನಾಡಿ, ಕೃಷಿ ಇಲಾಖೆಯಿಂದ ರೈತರಿಗೆ ದೊರೆಯುವ ವಿವಿಧ ಸೌಲಭ್ಯ ಕುರಿತು ಮಾಹಿತಿ ನೀಡಿದರು. ಸುತ್ತಮುತ್ತಲಿನ ಗ್ರಾಮಗಳ ಅನೇಕ ರೈತರು ಭಾಗವಹಿಸಿ ಅಧಿಕಾರಿಗಳು ಮತ್ತು ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT