ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಐಗೆ ಆನ್‌ಲೈನ್‌ ಪರೀಕ್ಷೆ ಬೇಡ: ಎನ್‍ಎಸ್‌ಯುಐ ಪ್ರತಿಭಟನೆ

ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‍ಎಸ್‌ಯುಐ) ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಎದುರು ವಿದ್ಯಾರ್ಥಿಗಳ ಪ್ರತಿಭಟನೆ
Last Updated 22 ಜನವರಿ 2020, 14:06 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೈಗಾರಿಕೆ ತರಬೇತಿ ಕಾಲೇಜು (ಐಟಿಐ) ವಿದ್ಯಾರ್ಥಿಗಳಿಗೆ ಏಕಾಏಕಿ ಜಾರಿಗೆ ತಂದಿರುವ ಆನ್‌ಲೈನ್ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‍ಎಸ್‌ಯುಐ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಎನ್‍ಎಸ್‌ಯುಐ ರಾಜ್ಯ ಘಟಕದ ಸಂಚಾಲಕ ಕುಂದಲಗುರ್ಕಿ ಮುನೀಂದ್ರ, ‘ರಾಜ್ಯದಲ್ಲಿ ಸರ್ಕಾರಿ ಅನುದಾನಿತ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳು ಸಿಟಿಎಸ್ ಯೋಜನೆಯಲ್ಲಿ ಎನ್‌ಸಿವಿಟಿ ಸಂಯೋಜನೆಯೊಂದಿಗೆ ತರಬೇತಿ ನೀಡುತ್ತಿವೆ. ಕೇಂದ್ರ ಸರ್ಕಾರ ಯಾವುದೇ ಪೂರ್ವ ತಯಾರಿ ಇಲ್ಲದೆ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಆನ್‌ಲೈನ್ ಪರೀಕ್ಷೆ ನಡೆಸುವುದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ’ ಎಂದು ಹೇಳಿದರು.

‘ಎಸ್ಸೆಸ್ಸೆಲ್ಸಿಯಲ್ಲಿ ಶೇ60ಕ್ಕಿಂತ ಕಡಿಮೆ ಫಲಿತಾಂಶ ಮಾಡಿದ ಬಡ ವಿದ್ಯಾರ್ಥಿಗಳು ಐಟಿಐ ಪ್ರವೇಶ ಪಡೆದಿರುತ್ತಾರೆ. ಇಂತಹ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ಇರುವುದಿಲ್ಲ. ಖಾಸಗಿ ಸಂಸ್ಥೆಗಳಲ್ಲಿ ಕಂಪ್ಯೂಟರ್ ಸೌಲಭ್ಯ ಇರುವುದಿಲ್ಲ. ಹೀಗಾಗಿ ಆನ್‌ಲೈನ್ ಪರೀಕ್ಷೆ ರದ್ದು ಮಾಡಬೇಕು. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಕಾಲೇಜುಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಏಕಕಾಲಕ್ಕೆ ಪರೀಕ್ಷೆ ಬರೆಯುವಷ್ಟು ಕಂಪ್ಯೂಟರ್ ಸೌಲಭ್ಯಗಳು ಇರುವುದಿಲ್ಲ. ಇದರಿಂದ ಶಿಕ್ಷಣ ಸಂಸ್ಥೆಗಳ ಹೆಸರಿಗೆ ಧಕ್ಕೆ ಬರಬಹುದು’ ಎಂದು ತಿಳಿಸಿದರು.

‘ಪ್ರಮುಖವಾಗಿ ಐಟಿಐ ಕೌಶಲಪೂರ್ಣ ತರಬೇತಿ ಕೋರ್ಸ್ ಆಗಿದೆ. ರೇಖಾ ಚಿತ್ರ ಹಾಗೂ ಕೈಬರಹ ಪರೀಕ್ಷೆ ಮಾಡುವುದರಿಂದ ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳ ಗುಣಮಟ್ಟ ಹೆಚ್ಚಿಸಲು ಸಾಧ್ಯವಾಗುವುದಿಲ್ಲ. ಐಟಿಐ ಪಾಸಾದ ನಂತರ ಕಾರ್ಖಾನೆಗಳಲ್ಲಿ ಕೇವಲ ಕಾರ್ಮಿಕರಂತೆ ಕಾರ್ಯನಿರ್ವಹಿಸುತ್ತಾರೆ. ಅವರಿಗೆ ಈ ಪರೀಕ್ಷೆ ಬೇಕೆ? ಐಟಿಐ ಪರೀಕ್ಷೆಯನ್ನು ಪಿಯುಸಿ ಮಾದರಿಯಲ್ಲಿ ಮೊದಲ ವರ್ಷ ಆಯಾ ಸಂಸ್ಥೆಗಳಲ್ಲಿ ನಡೆಸಬೇಕು. ಎರಡನೇ ವರ್ಷದ ಪರೀಕ್ಷೆಯನ್ನು ಬೋರ್ಡ್ ಪದ್ಧತಿ ಪ್ರಕಾರ ನಡೆಸಬೇಕು’ ಎಂದು ಆಗ್ರಹಿಸಿದರು.

‘ಐಟಿಐ ಕೋರ್ಸ್‌ನಲ್ಲಿ ಪ್ರಾಯೋಗಿಕಕ್ಕೆ ಇರುವಷ್ಟೇ ಮಹತ್ವ ಥಿಯರಿಗೂ ಇದೆ. ಒಬ್ಬ ವಿದ್ಯಾರ್ಥಿ ತರಬೇತಿಯನ್ನು ಪೂರೈಸಿದ ಬಳಿಕ ಆತನ ಕೌಶಲ ನೋಡಿ ಮೌಲ್ಯಮಾಪನ ಮಾಡಬೇಕೇ ವಿನಾ, ಆನ್‌ಲೈನ್‌ ಮೂಲಕ ಅಲ್ಲ. ಎಂಜಿನಿಯರಿಂಗ್ ಕೋರ್ಸ್‌ಗೂ ಇಲ್ಲದ ಆನ್‌ಲೈನ್‌ ಪರೀಕ್ಷೆಯನ್ನು ಐಟಿಐಗೆ ಜಾರಿಗೊಳಿಸುತ್ತಿರುವುದು ಖಂಡನೀಯ. ವಿದ್ಯಾರ್ಥಿಗಳ ಮೇಲೆ ಇಲ್ಲದ ಪ್ರಯೋಗ ನಡೆಸುವುದು ಕೈಬಿಟ್ಟು ಹಿಂದಿನ ಪದ್ಧತಿಯಲ್ಲೇ ಪರೀಕ್ಷೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಅವರ ಮೂಲಕ ಪ್ರಧಾನಮಂತ್ರಿ ಅವರಿಗೆ ಮನವಿ ಸಲ್ಲಿಸಿದರು. ವಿದ್ಯಾರ್ಥಿ ಮುಖಂಡರಾದ ದೀಪಕ್, ವೆಂಕಟೇಶ್‌, ಮಂಜುನಾಥ್, ಪ್ರವೀಣ್, ನಿಖಿಲ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT