ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಧುಮ್ಮಿಕ್ಕಿದ ಜರಮೊಡಗು ಜಲಪಾತ

Last Updated 27 ಆಗಸ್ಟ್ 2021, 2:54 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಸುತ್ತಮುತ್ತಲು ಹಚ್ಚ ಹಸಿರಿನ ನಿಸರ್ಗ ಸೌಂದರ್ಯ. ಪ್ರಕೃತಿ ಸೊಬಗಿನಿಂದ ಮೈದುಂಬಿರುವ, ಪಂಚಗಿರಿಗಳಿಂದ ಹರಿದು ಬರುತ್ತಿರುವ ಜೀವಜಲ. ತನ್ನ ಅನನ್ಯ ಸೌಂದರ್ಯದಿಂದ ಮನ ಸೆಳೆಯುತ್ತಿರುವ ಈ ಅಪರೂಪದ ಜಲಪಾತ ಇರುವುದು ಯಾವುದೋ ಮಲೆನಾಡು ಪ್ರದೇಶದಲ್ಲಿ ಅಲ್ಲ. ಬದಲಿಗೆ ಬಯಲುಸೀಮೆ ಎಂದೇ ಪ್ರಸಿದ್ಧಿಯಾಗಿರುವ ಚಿಕ್ಕಬಳ್ಳಾಪುರ ಹತ್ತಿರದ ಜರಮೊಡಗು ಅಥವಾ ಜರಬಂಡೆ ಜಲಪಾತ.

ಚಿಕ್ಕಬಳ್ಳಾಪುರ ನಗರದಿಂದ ಕೇತೇನಹಳ್ಳಿ ಮಾರ್ಗದಲ್ಲಿ ಕೇವಲ 12 ಕಿ.ಮೀ ದೂರದಲ್ಲಿದೆ ಈ ಜಲಪಾತ. ಸುತ್ತಲಿನ ಅರಣ್ಯಕ್ಕೆ ಅಂಟಿಕೊಂಡಿರುವ ಪಂಚಗಿರಿಗಳಾದ ಆವಲಬೆಟ್ಟ, ಭೀಮೇಶ್ವರಬೆಟ್ಟ, ನರಸಿಂಹಸ್ವಾಮಿಬೆಟ್ಟ, ಕೌರವನಬೆಟ್ಟ ಹಾಗೂ ದೇವರಬೆಟ್ಟದ ಮೇಲೆ ಮಳೆ ನೀರು ಬಿದ್ದು ಹಳ್ಳಕೊಳ್ಳಗಳು ತುಂಬಿ ಹರಿದು ಇಲ್ಲಿ ಜಲಧಾರೆ ಧುಮ್ಮಿಕ್ಕುತ್ತಿದೆ. ಈ ಸೊಬಗು ಸವಿಯುತ್ತಿರುವ ಸ್ಥಳೀಯರು ಅದರಲ್ಲೂ ಯುವಕ, ಯುವತಿಯರು ಜಲಪಾತದೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಾ, ನೀರಿನಲ್ಲಿ ಆಡುತ್ತಾ ಆನಂದಿಸುತ್ತಿದ್ದಾರೆ.

ಮಲೆನಾಡು ಪ್ರದೇಶವನ್ನು ಹೋಲುವ ಕೇತೇನಹಳ್ಳಿಯ ಕಾಡಿನಲ್ಲಿರುವ ಈ ಜಲಪಾತ ಯುವಜನರ ಮನಸೂರೆಗೊಳ್ಳುತ್ತಿದೆ. ತಂಪಾದ ತಂಗಾಳಿಯಲ್ಲಿ ನೀರಿನ ಝರಿಗಳು ಮತ್ತು ಜಲಪಾತಗಳನ್ನು ನೋಡಿ ಮೇಲಿಂದ ಬಳುಕುತ್ತಾ ಧುಮ್ಮಿಕ್ಕುವ ನೀರಿನಲ್ಲಿ ಕುಣಿದು ಕುಪ್ಪಳಿಸಿ ಮನ ತಣಿಸಿಕೊಳ್ಳಲು ಸ್ಥಳೀಯರಷ್ಟೇ ಅಲ್ಲದೇ ದೂರದೂರುಗಳಿಂದ ಬರುವ ಪ್ರವಾಸಿಗರು ಹೆಚ್ಚಾಗುತ್ತಿದ್ದಾರೆ.

ಕೇತೇನಹಳ್ಳಿ ಮತ್ತು ಜಂಗಮಾರಪ್ಪನಹಳ್ಳಿ ಬಳಿ ಇರುವುದರಿಂದ ಜಂಗಮಾರಪ್ಪನಹಳ್ಳಿ ಮತ್ತು ಕೇತೇನಹಳ್ಳಿ ಜಲಪಾತ ಎಂದು ಕೂಡ ಕರೆಯಲಾಗುತ್ತದೆ. ಮತ್ತೊಂದೆಡೆ ಇದಕ್ಕೆ ವಿವೇಕಾನಂದ ಫಾಲ್ಸ್ ಮತ್ತು ವಿಶ್ವೇಶ್ವರಯ್ಯ ಜಲಪಾತ ಎಂದೂ ಕರೆಯುತ್ತಾರೆ. ಆದರೆ, ಸ್ಥಳೀಯರು ಇದನ್ನು ಜರಮೊಡಗು ಅಥವಾ ಜರಬಂಡೆ ಜಲಪಾತ ಎನ್ನುವರು.

ಕೇವಲ ಮಳೆ ಬಿದ್ದಾಗ ಮಾತ್ರ ಹರಿಯುವ ಜರಮೊಡಗು ಜಲಪಾತ ಚಿಕ್ಕಬಳ್ಳಾಪುರದ ಅಪರೂಪದ ತಾಣ. ಕಳೆದ ಮೂರು ದಿನಗಳ ಹಿಂದೆ ಸುರಿದ ಮಳೆಗೆ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು, ಜಲರಾಶಿಯ ಸೌಂದರ್ಯ ಸವಿಯಲು ಎರಡು ಕಂಗಳು ಸಾಲದು. ಬರದಿಂದ ಕಂಗೆಟ್ಟಿದ್ದ ಬಯಲುಸೀಮೆ ಜನತೆಗೆ ಜಲಪಾತ ಮುದ ನೀಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT