ಮಂಗಳವಾರ, ಏಪ್ರಿಲ್ 13, 2021
23 °C
ಸಾಲ ನೀಡುವಲ್ಲಿ ತಾರತಮ್ಯ: ಡಿಸಿಸಿ ಬ್ಯಾಂಕ್‌ ನಿರ್ದೇಶಕರ ವಿರುದ್ಧ ಆರೋಪ

ಜೆಡಿಎಸ್‌ ಕಾರ್ಯಕರ್ತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಸಾಲ ನೀಡುವುದರಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರು ಮತ್ತು ಅಧಿಕಾರಿಗಳು ಪಕ್ಷಪಾತದ ಧೋರಣೆ ತಳೆದಿದ್ದು, ಬ್ಯಾಂಕಿನ ಅಧ್ಯಕ್ಷ ಗೋವಿಂದಗೌಡ ಅವರೂ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಶನಿವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ನಗರದ ಪ್ರವಾಸಿ ಮಂದಿರದಲ್ಲಿ ಜಮಾವಣೆಯಾದರು. ಬ್ಯಾಂಕಿನ ನಿರ್ದೇಶಕರು, ಅಧ್ಯಕ್ಷರ ವಿರುದ್ಧ ಧಿಕ್ಕಾರದ ಫಲಕ ಹಾಗೂ ಭಿತ್ತಿಪತ್ರಗಳನ್ನು ಹಿಡಿದು ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದರು. ಸ್ಥಳೀಯ ನಿರ್ದೇಶಕರು ಮತ್ತು ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿದರು. ಮೆರವಣಿಗೆಯು ಡಿಸಿಸಿ ಬ್ಯಾಂಕ್ ಬಳಿ ಮುಕ್ತಾಯವಾಗಿ ಧರಣಿ ಕುಳಿತರು.

ನಗರಸಭೆ ಸದಸ್ಯರಾದ ಅಗ್ರಹಾರ ಮುರಳಿ, ದೇವಳಂ ಶಂಕರ್, ಮಾಜಿ ಸದಸ್ಯ ವೆಂಕಟರವಣಪ್ಪ, ಆರ್. ಪ್ರಕಾಶ್, ಯುವ ಮುಖಂಡ ವಿ. ಅಮರ್ ಸೇರಿದಂತೆ ಹಲವಾರು ಜೆಡಿಎಸ್ ಮುಖಂಡರು ಮಾತನಾಡಿ, ಬ್ಯಾಂಕಿನ ಸಾಲ ವಿತರಣೆಯಲ್ಲಿ ಪಕ್ಷಪಾತದ ಧೋರಣೆ ಅನುಸರಿಸಲಾಗುತ್ತಿದೆ. ಸ್ಥಳೀಯ ನಿರ್ದೇಶಕ ನಾಗಿರೆಡ್ಡಿ ತಮ್ಮ ಸ್ವಂತ ಆಸ್ತಿ ಎಂಬಂತೆ ವರ್ತಿಸುತ್ತಿದ್ದಾರೆ. ನ್ಯಾಯಬದ್ಧ ಹಾಗೂ ಕಾನೂನುಬದ್ಧವಾಗಿ ಸಾಲ ವಿತರಿಸುತ್ತಿಲ್ಲ ಎಂದು ಟೀಕಿಸಿದರು.

ಸ್ತ್ರಿಶಕ್ತಿ ಸಂಘಗಳಿಗೆ ಸಾಲ ವಿತರಣೆ ಮಾಡುವಾಗ ಯಾವ ಪಕ್ಷದ ಸದಸ್ಯರು, ಬೆಂಬಲಿಗರು ಎಂದು ಕೇಳಿ ಸಾಲವನ್ನು ನೀಡುತ್ತಿದ್ದಾರೆ. ಮಾಜಿ ಶಾಸಕರ ಮನೆಯಲ್ಲಿ ಸಾಲದ ಚೆಕ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ಪಕ್ಷಪಾತ ಧೋರಣೆ ಹಾಗೂ ಅವ್ಯವಹಾರದ ದೂರುಗಳು ಬರುತ್ತಿದ್ದರೂ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ದೂರಿದರು.

ಸಾಲ ಮಂಜೂರಾದ ಸ್ತ್ರೀಶಕ್ತಿ ಸಂಘಗಳ ಸದಸ್ಯರ ಖಾತೆಗಳಿಗೆ ಆರ್‌ಟಿಜಿಎಸ್‌ ಮೂಲಕ ಹಣ ವರ್ಗಾವಣೆ ಮಾಡಬೇಕು. ನಿರ್ದೇಶಕರು ಮಾಜಿ ಶಾಸಕರ ಮನೆಗೆ ಮಹಿಳೆಯರನ್ನು ಕರೆದುಕೊಂಡು ಹೋಗಿ ಚೆಕ್ ವಿತರಣೆ ಮಾಡುತ್ತಾರೆ. ಮುಂದಿನ ಚುನಾವಣೆಯಲ್ಲಿ ನಮಗೆ ಮತ ನೀಡಬೇಕು ಎಂದು ಒತ್ತಾಯಿಸಿ ಪ್ರಮಾಣ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಪ್ರತಿಭಟನಾಕಾರರು ಆರೋಪಗಳ ಸುರಿಮಳೆಯನ್ನೇ ಸುರಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಶೋಭೆ ತರುವುದಿಲ್ಲ: ಬ್ಯಾಂಕಿನ ಅಧ್ಯಕ್ಷನಾಗಿ ಸ್ಥಳಕ್ಕೆ ಭೇಟಿ ನೀಡಿ, ಅವರ ಜತೆಯಲ್ಲಿ ಕುಳಿತು ಚರ್ಚೆ ನಡೆಸಿದೆ. ಎಲ್ಲ ದೂರುಗಳ ಕುರಿತು ಮುಕ್ತವಾಗಿ ಮಾತನಾಡೋಣ ಎಂದು ತಿಳಿಸಿದರೂ ಅವರು ಕೇಳಲಿಲ್ಲ. ಕೇಳುವ ತಾಳ್ಮೆ ಇಲ್ಲ, ನಡವಳಿಕೆ, ಮಾತನಾಡುವ ರೀತಿ ಶೋಭೆ ತರುವುದಿಲ್ಲ. ಸಮಸ್ಯೆಗಳನ್ನು ಬಗೆಹರಿಸುವುದರ ಬದಲಾಗಿ ದೊಡ್ಡದು ಮಾಡುವುದು ಅವರ ಉದ್ದೇಶವಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸುದ್ದಿಗಾರರಿಗೆ ತಿಳಿಸಿದರು.

ಕಳೆದ 3 ತಿಂಗಳುಗಳಿಂದ ಎಟಿಎಂ ಕಾರ್ಡ್ ಮೂಲಕ ಹಣ ವಿತರಣೆ ಮಾಡಲಾಗುತ್ತಿದೆ. ಆರೋಪ, ಪ್ರತ್ಯಾರೋಪಗಳಿಗೆ ಬಗ್ಗೆ ಮಾತನಾಡುವುದಿಲ್ಲ. ಬಡವರಿಗೆ ಸಮರ್ಪಕವಾಗಿ ಸಾಲ ನೀಡುವುದಕ್ಕೆ ಮಾತ್ರ ನಾನು ಆದ್ಯತೆ ನೀಡುತ್ತೇನೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶ್ರೀನಿವಾಸರೆಡ್ಡಿ, ಕೈವಾರ ಸುಬ್ಬಾರೆಡ್ಡಿ, ದೊಡ್ಡಬೊಮ್ಮನಹಳ್ಳಿ ವೆಂಕಟರೆಡ್ಡಿ, ಕುರುಬೂರು ನಟರಾಜ್, ಸಿ.ಎನ್. ವೆಂಕಟೇಶ್, ಡಿ.ವಿ. ಬೈರಾರೆಡ್ಡಿ, ನಗರಸಭೆ ಸದಸ್ಯರು, ಮಾಜಿ ಸದಸ್ಯರು, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಮುಖಂಡರು ಸೇರಿದಂತೆ ಜೆಡಿಎಸ್ ಮುಖಂಡರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.