ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ | ಡಾ.ಕೆ.ಸುಧಾಕರ್ ಗೆಲುವು: ಜೆಡಿಎಸ್‌ನಿಂದ ವಿಜಯೋತ್ಸವ

Published 6 ಜೂನ್ 2024, 14:30 IST
Last Updated 6 ಜೂನ್ 2024, 14:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಇಲ್ಲಿನ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಗುರುವಾರ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಡಾ.ಕೆ.ಸುಧಾಕರ್ ಗೆಲುವು ಸಾಧಿಸಿದ್ದಕ್ಕೆ ಜೆಡಿಎಸ್‌ನಿಂದ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ಮುಖಂಡರು ಸಹ ವಿಜಯೋತ್ಸವಕ್ಕೆ ಸಾಥ್ ನೀಡಿದರು.

ನಗರ ಸ್ಥಳೀಯ ಸಂಸ್ಥೆಗಳು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಸೇರಿದಂತೆ ಮುಂದೆ ನಡೆಯುವ ಎಲ್ಲ ಚುನಾವಣೆಗಳನ್ನು ಇದೇ ರೀತಿಯಲ್ಲಿ ಒಗ್ಗಟ್ಟಿನಿಂದ ಎದುರಿಸಬೇಕು ಎಂದು ಎರಡೂ ಪಕ್ಷದ ಮುಖಂಡರು ಪ್ರತಿಪಾದಿಸಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮುನಿಯಪ್ಪ ಮಾತನಾಡಿ, ‘ಮುಂದೆ ಯಾವುದೇ ಚುನಾವಣೆಗಳು ನಡೆದರೂ ಇದೇ ರೀತಿಯಲ್ಲಿ ಒಗ್ಗಟ್ಟಿನಿಂದ ಎದುರಿಸಬೇಕು. ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿವೆ. ಮುಂದೆ ಈ ಕ್ಷೇತ್ರಗಳಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಯಾವುದೇ ವೈಷಮ್ಯವಿಲ್ಲದೆ ಒಗ್ಗಟ್ಟಿನಿಂದ ನಡೆಯಬೇಕು’ ಎಂದು ಹೇಳಿದರು. 

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮಾಜಿ ಶಾಸಕರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು. ಆಗ ಏನೊ ಬದಲಾವಣೆ ಆಗುತ್ತದೆ ಎಂದುಕೊಂಡರು. ಆದರೆ ಪಕ್ಷ ನಿಷ್ಠರು ಎಚ್‌.ಡಿ.ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಆದೇಶಕ್ಕೆ ಬದ್ಧವಾಗಿ ಕೆಲಸ ಮಾಡಿದರು. ಜೂನ್‌ 8ರಂದು ಎಚ್‌.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗುವರು ಎಂದರು. 

ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ ಮಾತನಾಡಿ, ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದ ಪರಿಣಾಮ ಗೆಲುವು ಸಾಧಿಸಿದೆವು. ಎಚ್‌.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗುತ್ತಿದ್ದು ಅವರಿಂದ ರಾಜ್ಯಕ್ಕೆ ಮತ್ತಷ್ಟು ಕೊಡುಗೆ ದೊರೆಯಲಿದೆ ಎಂದು ಹೇಳಿದರು.

ಗೌರಿಬಿದನೂರು ಜೆಡಿಎಸ್ ಮುಖಂಡ ಸಿ.ಆರ್.ನರಸಿಂಹಮೂರ್ತಿ, ಜಿಲ್ಲೆಯನ್ನು  ಕಾಂಗ್ರೆಸ್ ಮುಕ್ತಮಾಡಬೇಕು. ಆ ಕಾರಣದಿಂದ ಎರಡೂ ಪಕ್ಷಗಳ ಮುಖಂಡರು ಒಗ್ಗಟ್ಟಿನಿಂದ ಮುನ್ನಡೆಯಬೇಕು. ಒಂದು ಮತ ಹೆಚ್ಚು ಪಡೆದರೆ ರಾಜೀನಾಮೆ ನೀಡುವೆ ಎನ್ನುವ ಪ್ರದೀಪ್ ಈಶ್ವರ್ ಅವರ ಮಾತು ದುರಹಂಕಾರದ್ದು. ಇದು ಒಳ್ಳೆಯದಲ್ಲ ಎಂದು ಹೇಳಿದರು. 

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೇಶವರೆಡ್ಡಿ, ಬಿಜೆಪಿ 17 ಸ್ಥಾನಗಳನ್ನು ಪಡೆಯಬೇಕಾದರೆ ಜೆಡಿಎಸ್ ಸಹಕಾರವೇ ಪ್ರಮುಖವಾಗಿದೆ ಎಂದರು.

ಬಿಜೆಪಿ ಮುಖಂಡ ಕೆ.ವಿ.ನಾಗರಾಜ್, ನಾವೆಲ್ಲರೂ ಜೆಡಿಎಸ್‌ನಲ್ಲಿ ಇದ್ದವರು. ನಾನು ಮತ್ತು ಕೇಶವರೆಡ್ಡಿ ಅವರು ಜೆಡಿಎಸ್ ಜಿಲ್ಲಾ ಅಧ್ಯಕ್ಷರಾಗಿದ್ದೆವು. ಈ ಪಕ್ಷ ಕಟ್ಟಿ ಬೆಳೆಸಿದ್ದೆವು. ಆ ಬೇರುಗಳು ಬಹಳ ಆಳಕ್ಕೆ ಹೋಗಿವೆ. ಪ್ರಧಾನಿ ನರೇಂದ್ರ ಮೋದಿ  ಮತ್ತು ದೇವೇಗೌಡರು ಒಳ್ಳೆಯ ತೀರ್ಮಾನ ತೆಗೆದುಕೊಂಡರು ಎಂದರು. 

ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾ ನಾರಾಯಣಗೌಡ, ನಗರಸಭೆ ಸದಸ್ಯ ಆರ್.ಮಟಮಪ್ಪ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕೊಳವನಹಳ್ಳಿ ಮುನಿರಾಜು, ಬಾಬಾಜಾನ್, ನಾರಾಯಣಗೌಡ ಹಾಗೂ ಎರಡೂ ಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT