ಮಂಗಳವಾರ, ಜೂನ್ 28, 2022
21 °C

ಆರೋಗ್ಯ ಸಚಿವ ಸುಧಾಕರ್ ಚಿಕ್ಕಬಳ್ಳಾಪುರಕ್ಕೆ ಬಂದಾಗಲೆಲ್ಲ ಕೋವಿಡ್ ನಿಯಮ ಬ್ರೇಕ್

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಕೋವಿಡ್ ನಾಲ್ಕನೇ ಅಲೆ ಬರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಉಗುಳಿದರೆ ದಂಡ...ಹೀಗೆ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. 

ನಾಲ್ಕನೇ ಅಲೆಯ ಸಾಧ್ಯತೆಯ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಮಾಸ್ಕ್ ಕಡ್ಡಾಯ, ಉಗುಳಿದರೆ ದಂಡದ ನಿಯಮಗಳ ಬಗ್ಗೆಯೂ ಚರ್ಚೆಗಳು ನಡೆದಿವೆ. ಆದರೆ ಈ ಕೋವಿಡ್ ಸಂದರ್ಭದಲ್ಲಿ ಜಿಲ್ಲೆಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಭೇಟಿ ನೀಡಿದಾಗ ಕೋವಿಡ್ ನಿಯಮಗಳು, ಮಾರ್ಗಸೂಚಿಗಳು ಪಾಲನೆ ಆಗುತ್ತಿವೆಯೇ? ಎಂದು ನೋಡಿದರೆ ‘ಇಲ್ಲ’ ಎನ್ನುವ ಉತ್ತರ ಜನರಿಂದ ತಟ್ಟನೆ ಬರುತ್ತದೆ. 

ಸರ್ಕಾರದ ನಿಯಮಗಳು, ಮಾರ್ಗಸೂಚಿಗಳು ಬರಿ ಹೆಸರಿಗಷ್ಟೇ. ಮಾರ್ಗಸೂಚಿಗಳ ‘ದಂಡ’ ಪ್ರಕ್ರಿಯೆಗಳು ಸಣ್ಣವರ ಮೇಲೆ ಪ್ರಯೋಗವಾಗುತ್ತವೆ. ‘ದೊಡ್ಡವರ’ ಮೇಲಲ್ಲ ಎನ್ನುವುದು ಪ್ರತಿ ಬಾರಿಯೂ ಸಚಿವರು ಜಿಲ್ಲೆಗೆ ಭೇಟಿ ನೀಡಿದಾಗ ಸಾಬೀತಾಗುತ್ತಿದೆ. ಮಾಸ್ಕ್ ಹಾಕಿಲ್ಲ, ಕೋವಿಡ್ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಪೊಲೀಸರು ಕೋವಿಡ್  ಎರಡು ಮತ್ತು ಮೂರನೇ ಅಲೆಯ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ನಿತ್ಯ ಪ್ರಕರಣಗಳನ್ನು ದಾಖಲಿಸಿದರು. 

ಆದರೆ ಸಚಿವ ಡಾ.ಕೆ.ಸುಧಾಕರ್ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಬೆಂಬಲಿಗರು ಸಚಿವರ ಸುತ್ತ ದೊಡ್ಡ ಸಂಖ್ಯೆಯಲ್ಲಿ ನೆರೆದಿರುತ್ತಿದ್ದರು. ಆದರೆ ಕೋವಿಡ್ ನಿಯಮ ಉಲ್ಲಂಘನೆಯ ಪ್ರಕರಣಗಳು ಮಾತ್ರ ದಾಖಲಾಗಲಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯೂ ಬಂದಿತು. 

2021ರ ಜುಲೈ 25ರಂದು ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಪದವಿ ಪೂರ್ವ ‌‌ಕಾಲೇಜು ಆವರಣದಲ್ಲಿ ಕೋವಿಡ್ ಲಸಿಕೆ ಅಭಿಯಾನ, ಕೃಷಿ ಮಾಹಿತಿ ರಥಕ್ಕೆ ಚಾಲನೆ ಹಾಗೂ ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕೋವಿಡ್ ಗರಿಷ್ಠ ಪ್ರಮಾಣದಲ್ಲಿಯೂ ಇತ್ತು. 

ಜನರು ಅಂತರ ಕಾಯ್ದುಕೊಳ್ಳದೆ ಗುಂಪುಗೂಡಿದ್ದರು. ಸಾವಿರಾರು ಜನರು ಸೇರಿದ್ದ ಈ ಕಾರ್ಯಕ್ರಮವು ಡಾ.ಕೆ.ಸುಧಾಕರ್ ಸಮ್ಮುಖದಲ್ಲಿಯೇ ನಡೆಯಿತು. ಲಸಿಕೆ ಪಡೆಯಲು ಬಂದವರು ಒತ್ತೊತ್ತಾಗಿ ನಿಂತಿದ್ದರು. ಹೀಗೆ ಕೋವಿಡ್ ನಿಯಂತ್ರಣಕ್ಕೆ ಲಸಿಕೆ ನೀಡುವ ಕಾರ್ಯಕ್ರಮದಲ್ಲಿಯೇ ಅಂತರವಿರಲಿಲ್ಲ! ಇದು ಒಂದು ನಿಯಮಗಳ ಉಲ್ಲಂಘನೆಯ ಒಂದು ನಿದರ್ಶನವಷ್ಟೇ. 

ಸಚಿವ ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಭೇಟಿ ನೀಡಿದಾಗ, ‘ಕೋವಿಡ್ ನಿಯಮಗಳನ್ನು ಜನರು ಪಾಲಿಸಬೇಕು’ ಎಂದು ಪ‍ದೇ ಪದೇ ಹೇಳುವರು. ಆದರೆ ಅವರ ಸುತ್ತಮುತ್ತಲಿರುವ ಅವರ ಬೆಂಬಲಿಗರೇ ಮಾಸ್ಕ್ ಧರಿಸಿರುವುದು ಅಪರೂಪ! 

ಸೋಮವಾರ ರಾತ್ರಿ ಸಚಿವರ ಸ್ವಗ್ರಾಮ ಪೆರೇಸಂದ್ರದಲ್ಲಿ ನಡೆದ ಕರಗದಲ್ಲಿಯೂ ಜನರ ದಟ್ಟಣೆ ಹೆಚ್ಚು ಇತ್ತು. ಇಲ್ಲಿಯೂ ಬಂದ ಬಹಳಷ್ಟು ಜನರು ಮಾಸ್ಕ್‌ಗಳನ್ನು ಧರಿಸಿರಲಿಲ್ಲ. ಮಂಗಳವಾರ ಸಚಿವರು ಕಣಜೇನಹಳ್ಳಿಯಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ದರು. ಇಲ್ಲಿನ ಕಾರ್ಯಕ್ರಮದಲ್ಲಿಯೂ ಜನರು ಮಾಸ್ಕ್ ಧರಿಸಿದ್ದು ತೀರಾ ಕಡಿಮೆ. 

ಕೋವಿಡ್ ನಾಲ್ಕನೇ ಅಲೆ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮತ್ತು ತಜ್ಞರ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚರ್ಚಿಸುತ್ತಾರೆ. ಆರೋಗ್ಯ ಸಚಿವರು ಸಹ ಈ ಬಗ್ಗೆ ಜನರು ಎಚ್ಚರವಹಿಸಬೇಕು ಎಂದು ಪದೇ ಪದೇ ನುಡಿಯುವರು. ಆದರೆ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಡಾ.ಕೆ.ಸುಧಾಕರ್ ಪ‍್ರವೇಶಿಸುತ್ತಲೇ ಕೋವಿಡ್ ನಿಯಮ, ಮಾರ್ಗಸೂಚಿಗಳು ಅವರ ಸುತ್ತಮುತ್ತಲೇ ಪಾಲನೆ ಆಗುವುದಿಲ್ಲ!

ಮಂಗಳವಾರ ಮಧ್ಯಾಹ್ನದ ಚಿಕ್ಕಬಳ್ಳಾಪುರ ನಗರದಲ್ಲಿ ‘ಕಡ್ಡಾಯವಾಗಿ ಜನರು ಮಾಸ್ಕ್ ಧರಿಸಬೇಕು. ಅಂತರ ಕಾಪಾಡಿಕೊಳ್ಳಬೇಕು’ ಎಂದು ಪೊಲೀಸರು ಮೈಕ್‌ಗಳಲ್ಲಿ ಪ್ರಕಟಿಸುತ್ತಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು