ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು: ಬರಡು‌ ಭೂಮಿಗೆ ಕಲ್ಯಾಣಿ ವರದಾನ

ಆರ್ಕುಂದ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣ
Last Updated 26 ಜನವರಿ 2022, 3:17 IST
ಅಕ್ಷರ ಗಾತ್ರ

ಗೌರಿಬಿದನೂರು: ದಶಕಗಳಿಂದ ಬರಡಾಗಿದ್ದ ಭೂಮಿಯಲ್ಲಿ ಮಳೆ ನೀರನ್ನು ಸಂರಕ್ಷಣೆ ಮಾಡಿ ಅಂತರ್ಜಲ ಮಟ್ಟ ವೃದ್ಧಿಸಲು ನರೇಗಾ ಯೋಜನೆಯಡಿ ಗಿಡಗಳನ್ನು ನೆಟ್ಟು ಪೋಷಿಸುವ ಜತೆಗೆ ನೀರಿನ ಸಂಗ್ರಹಣೆಗೆ ತಾಲ್ಲೂಕಿನ ಮಂಚೇನಹಳ್ಳಿ ಹೋಬಳಿಯ ಪುರ ಗ್ರಾ.ಪಂ. ವ್ಯಾಪ್ತಿಯ ಆರ್ಕುಂದ ಗ್ರಾಮದಲ್ಲಿ ವೈಜ್ಞಾನಿಕ ವಿಧಾನದಡಿ ಬೃಹತ್ ಕಲ್ಯಾಣಿ ನಿರ್ಮಿಸಲಾಗಿದೆ.

ಕಳೆದ ಎರಡು ವರ್ಷದಿಂದ ಕೋವಿಡ್‌ನಿಂದ ಸ್ಥಳೀಯ ಕೂಲಿ ಕಾರ್ಮಿಕರು‌ ಕೈಯಲ್ಲಿ ಉದ್ಯೋಗವಿಲ್ಲದೆ ಚಿಂತಿಸುವಂತಾಗಿತ್ತು. ಈ ವೇಳೆ ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಗ್ರಾ.ಪಂ. ಸಹಕಾರದೊಂದಿಗೆ ಗ್ರಾಮದ ಹೊರವಲಯದಲ್ಲಿ ಬರಡಾಗಿದ್ದ ಸರ್ಕಾರಿ ಭೂಮಿಯಲ್ಲಿ ನೆಡುತೋಪು ಕಾಮಗಾರಿ ಆರಂಭಿಸಲಾಯಿತು.

ವಿವಿಧ ಬಗೆಯ ಸುಮಾರು‌ 3 ಸಾವಿರ ಗಿಡಗಳನ್ನು ನೆಟ್ಟು ಪೋಷಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಒಂದೆಡೆ ಸ್ಥಳೀಯರಿಗೆ ಉದ್ಯೋಗಾವಕಾಶ, ಮತ್ತೊಂದೆಡೆ ದಶಕಗಳಿಂದ ಬರಡಾಗಿದ್ದ ಭೂಮಿ ಸ್ವಚ್ಛಗೊಳಿಸಿ ಗಿಡ ನೆಟ್ಟು ಅಲ್ಲಿನ ಪ್ರಾಕೃತಿಕ ಸೌಂದರ್ಯ ಹೆಚ್ಚಿಸುವ ಕಾರ್ಯವಾಗಿದೆ.

ಸಮೀಪದಲ್ಲೆ ಇರುವ ಬೆಟ್ಟದ ಸಾಲಿನಲ್ಲಿ ಬಿದ್ದ ಮಳೆ‌ ನೀರು ವ್ಯರ್ಥವಾಗುತ್ತಿರುವುದನ್ನು ಕಂಡು ಗಿಡಗಳ‌ ಪೋಷಣೆಗಾಗಿ ನೀರಿನ ಅವಶ್ಯಕತೆ ಇರುವ ಕಾರಣ ಈ ಭೂಮಿಯಲ್ಲಿಯೇ ಬೃಹತ್ ಕಲ್ಯಾಣಿ ‌ನಿರ್ಮಾಣ ಮಾಡುವ ಕನಸು ಕಂಡಿದ್ದು ಸ್ಥಳೀಯರು. ಸುಮಾರು 6 ತಿಂಗಳ ಪರಿಶ್ರಮದಿಂದ ವೈಜ್ಞಾನಿಕ ವಿಧಾನದಲ್ಲಿ ಕಲ್ಯಾಣಿ ನಿರ್ಮಾಣ ಮಾಡಿದ್ದಾರೆ.

ಬಳಿಕ ಈ‌ ಭಾಗದಲ್ಲಿ ಸುರಿದ ಉತ್ತಮ ಮಳೆಯಿಂದ ಕಲ್ಯಾಣಿಯ ತುಂಬ ಮಳೆ ನೀರು ಶೇಖರಣೆಯಾಗಿ ಅಂತರ್ಜಲ ಮಟ್ಟ ವೃದ್ಧಿಗೆ ಸಹಕಾರಿಯಾಗಿದೆ. ಜತೆಗೆ ಸಮೀಪದಲ್ಲಿರುವ ಗಿಡಗಳ ಪೋಷಣೆಗೆ ಇದರಲ್ಲಿನ ನೀರು ಆಸರೆಯಾಗಿದೆ. ಸ್ಥಳೀಯ ಕೂಲಿ ಕಾರ್ಮಿಕರ ಶ್ರಮ ಹಾಗೂ ಸಹಕಾರದಿಂದ ಗ್ರಾಮದಲ್ಲಿ ಕಲ್ಯಾಣಿ ನಿರ್ಮಾಣ ಮಾಡಲು ಸಾಧ್ಯವಾಗಿದೆ.

ಭರ್ತಿಯಾಗಿರುವ ಕಲ್ಯಾಣಿಯು‌ ಈ ಭಾಗದಲ್ಲಿ ನಿತ್ಯ ನೂರಾರು ಜನ ಮತ್ತು ಜಾನುವಾರುಗಳಿಗೆ ನೀರಿನ ಆಸರೆಯಾಗಿದೆ. ಸುತ್ತಲೂ ಒಂದೂವರೆ ಕಿ.ಮೀ.ವರೆಗೆ ಯಾವುದೇ ಜಲಮೂಲಗಳ ಆಸರೆಯಿಲ್ಲದ ಕಾರಣ ಇದು ಸಕಾಲದಲ್ಲಿ ಸದ್ಬಳಕೆ ಮಾಡಿಕೊಳ್ಳಲು ಸಹಕಾರಿಯಾಗಿದೆ.

‘ದಶಕಗಳಿಂದ ಬರಡಾಗಿದ್ದ ಭೂಮಿಯಲ್ಲಿ ಸ್ಥಳೀಯರ ‌ಸಹಕಾರದೊಂದಿಗೆ ನರೇಗಾದಡಿ ನಿರ್ಮಾಣವಾದ ಕಾಮಗಾರಿಗಳು ಇಲ್ಲಿನ ಚಿತ್ರಣವನ್ನು ಬದಲಿಸಿವೆ. ಒಂದೆರಡು ವರ್ಷಗಳಲ್ಲಿ ಇಲ್ಲಿನ ಪ್ರಾಕೃತಿಕ ಸೌಂದರ್ಯ ಮತ್ತಷ್ಟು ಹೆಚ್ಚಾಗಿರುವುದು ಸಾರ್ಥಕ‌ ಕಾರ್ಯಕ್ಕೆ ಮಾದರಿಯಾಗಿದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಅಂಜಿನಪ್ಪ.

ಮಾದರಿ ಕಾಮಗಾರಿ:ಸ್ಥಳೀಯ ಕೂಲಿ ಕಾರ್ಮಿಕರ ಆಸಕ್ತಿಯ ಮೇರೆಗೆ ಗ್ರಾ.ಪಂ.ನಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿ ಕಲ್ಯಾಣಿ ನಿರ್ಮಾಣ ಕಾರ್ಯಕ್ಕೆ ವೈಜ್ಞಾನಿಕ ಮಾದರಿಯಲ್ಲಿ ನೀಲನಕ್ಷೆ ನೀಡಲಾಗಿತ್ತು. ಇದರಂತೆ ನಿರೀಕ್ಷೆಗೂ ಮೀರಿ ಮಾದರಿ ಕಲ್ಯಾಣಿ ನಿರ್ಮಾಣ ಮಾಡಲು ಸಾಕ್ಷಿಯಾಗಿದ್ದಾರೆ. ಇದ ರಿಂದ ಅಂತರ್ಜಲ ಕಾಪಾಡಲು ಸಹಕಾರಿ ಯಾಗಿದೆ. ಇಡೀ ತಾಲ್ಲೂಕಿನಲ್ಲಿ ಇದೊಂದು ಮಾದರಿ ಕಾಮಗಾರಿಯಾಗಿದೆ ಎನ್ನುತ್ತಾರೆ ನರೇಗಾ ಎಂಜಿನಿಯರ್ ಅನಿಲ್.

‘ದಶಕಗಳಿಂದ ಬರಡಾಗಿದ್ದ ಭೂಮಿಯಲ್ಲಿ ಗಿಡ ನೆಟ್ಟು ಪೋಷಿಸುವ ಸ್ಥಳೀಯರ ಉತ್ಸಾಹಕ್ಕೆ ಇಲಾಖೆಯಿಂದ ನರೇಗಾದಡಿ ಗಿಡ ನೆಟ್ಟು ಪೋಷಣೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಇದರಂತೆ ಎರಡು ವರ್ಷದಲ್ಲಿ ಸುಮಾರು ಮೂರು‌ ಸಾವಿರ ಗಿಡಗಳನ್ನು ಬೆಳೆಸಲು ಸಾಧ್ಯವಾಗಿದೆ. ಬೇಸಿಗೆಯಲ್ಲಿ ಇವುಗಳ ಪೋಷಣಾ ಕಾರ್ಯಕ್ಕೆ ಕಲ್ಯಾಣಿಯು ವರದಾನವಾಗಿದೆ’ ಎನ್ನುತ್ತಾರೆ ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅಧಿಕಾರಿ ಎನ್. ಪದ್ಮಶ್ರೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT