ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಧರ್ಮರಾಯ ಹೂವಿನ ಕರಗ

Last Updated 9 ಮೇ 2022, 2:46 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಇಲ್ಲಿ ಶನಿವಾರ ರಾತ್ರಿ ಆರಂಭಗೊಂಡ ಭಗತ್‌ಸಿಂಗ್ ನಗರದ ಧರ್ಮರಾಯಸ್ವಾಮಿ ದೇವಾಲಯದ 38ನೇ ವರ್ಷದಧರ್ಮರಾಯಸ್ವಾಮಿ ಹೂವಿನ ಕರಗ ಭಾನುವಾರ ಬೆಳಗಿನಜಾವದವರೆಗೂ ವೈಭವಯುತವಾಗಿ ನಡೆಯಿತು. ಅಪಾರ ಸಂಖ್ಯೆಯ ಭಕ್ತರು ಉತ್ಸವಕ್ಕೆ ಸಾಕ್ಷಿಯಾದರು.

ಭಗತ್‌ಸಿಂಗ್‌ ನಗರದ ಧರ್ಮರಾಯಸ್ವಾಮಿ ದೇಗುಲದ ಸುತ್ತಲಿನ ಪ್ರದೇಶ ವಿದ್ಯುತ್‌ ದೀಪಗಳ ಅಲಂಕಾರ ಮಾಡಲಾಗಿತ್ತು. ಪ್ರಮುಖ ರಸ್ತೆಗಳಲ್ಲಿ ಕೂಡ ದೀಪಾಲಂಕಾರ ಮಾಡಲಾಗಿತ್ತು. ದೇವಸ್ಥಾನದಲ್ಲಿ ಶನಿವಾರ ಮಧ್ಯಾಹ್ನ ದ್ರೌಪದಮ್ಮನವರ ಕಲ್ಯಾಣೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು.

ಅರಿಶಿನ ಬಣ್ಣದ ಸೀರೆ ಉಟ್ಟು, ಬಳೆ ತೊಟ್ಟು, ದ್ರೌಪದಿಯಂತೆ ಸರ್ವಾಲಂಕಾರ ಭೂಷಿತರಾಗಿದ್ದ ಕರಗದ ಪೂಜಾರಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂನ ಎಂ.ಬಾಲಾಜಿ ಅವರು, ಹೂವಿನ ಕರಗ ಹೊತ್ತು ರಾತ್ರಿ 10.30ರ ಸುಮಾರಿಗೆ ಒಂದು ಕೈಯಲ್ಲಿ ಕತ್ತಿ ಮತ್ತೊಂದು ಕೈಯಲ್ಲಿ ಮಂತ್ರದಂಡ ಹಿಡಿದು ಧರ್ಮರಾಯಸ್ವಾಮಿ ದೇವಾಲಯದ ಗರ್ಭಗುಡಿಯಿಂದ ಹೊರಕ್ಕೆ ಬರುತ್ತಿದ್ದಂತೆ ತಮಟೆ ವಾದನ, ಮಂಗಳ ವಾದ್ಯಗಳು ಮೊಳಗಿದವು. ಖಡ್ಗ ಹಿಡಿದಿದ್ದ ವೀರಕುಮಾರರು ‘ಗೋವಿಂದಾ. ಗೋವಿಂದಾ..’ ಎಂದು ನಾಮಸ್ಮರಣೆ ಮಾಡುತ್ತ ಅವರ ಹಿಂದೆ ಹೆಜ್ಜೆ ಹಾಕಿದರು.

ಮಲ್ಲಿಗೆ ಹೂವು, ಕನಕಾಂಬರ ಹೂವಿನ ಎಸಳುಗಳ ಅಲಂಕಾರ, ಮೇಲ್ತುದಿಯಲ್ಲಿ ಬೆಳ್ಳಿ ಛತ್ರಿಯಿಂದ ಆಕರ್ಷಕವಾಗಿ ಕಂಗೊಳಿಸುತ್ತಿದ್ದ ‘ಕರಗ’ ಸೂಸುತ್ತಿದ್ದ ಮಲ್ಲಿಗೆಯ ಪರಿಮಳ ದಾರಿಯುದ್ದಕ್ಕೂ ಭಕ್ತರನ್ನು ಪರವಶಗೊಳಿಸಿತು.

ವೇದಿಕೆ ಮೇಲೆ ಕರಗ ಹೊತ್ತ ಬಾಲಾಜಿ ಅವರು ತಮಟೆಯ ಸದ್ದಿನ ನಡುವೆ ಕೆಲ ಹೊತ್ತು ವಿವಿಧ ಭಂಗಿಗಳಲ್ಲಿ ಪ್ರದರ್ಶಿಸಿದ ಮೈನವಿರೇಳಿಸುವ ನೃತ್ಯ ಅಲ್ಲಿ ನೆರೆದಿದ್ದ ಭಕ್ತ ಸಮೂಹವನ್ನು ಮೂಕವಿಸ್ಮಿತರನ್ನಾಗಿ ಮಾಡಿತು. ಅನೇಕರು ಆ ದೃಶ್ಯವನ್ನು ತಮ್ಮ ಮೊಬೈಲ್‌ಗಳಲ್ಲಿ ಚಿತ್ರೀಕರಿಸಿದರು. ಎರಡು ವೇದಿಕೆಗಳ ಬಳಿ ನೆರೆದಿದ್ದ ಅಪಾರ ಜನಸಮೂಹದ ಕರತಾಡನದ ಸದ್ದು ಮುಗಿಲು
ಮುಟ್ಟಿತ್ತು.

ನಗರದ ಬಹುತೇಕ ವಾರ್ಡ್‌ಗಳ ಮುಖ್ಯರಸ್ತೆ ಮತ್ತು ಅಡ್ಡರಸ್ತೆಗಳಲ್ಲಿ ಕರಗ ಸಾಗಿ ಬಂದಾಗ ಸ್ಥಳೀಯರು ಪೂಜೆ ಸಲ್ಲಿ­ಸಿ ಭಕ್ತಿ ಸಮರ್ಪಿಸುತ್ತಿದ್ದ ದೃಶ್ಯಗಳು ಗೋಚರಿಸಿದವು. ಎಂ.ಜಿ.ರಸ್ತೆಯಲ್ಲಿ ‘ಸಾಸಲ ಚಿನ್ನಮ್ಮ’ ಪೌರಾಣಿಕ ನಾಟಕ ಪ್ರದರ್ಶನ ಜರುಗಿತು. ವಿವಿಧ ರಸ್ತೆಗಳಲ್ಲಿ ವಾದ್ಯಗೋಷ್ಠಿಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT