ಭಾನುವಾರ, ಸೆಪ್ಟೆಂಬರ್ 19, 2021
24 °C
ಜಿಲ್ಲೆಯ ಎಲ್ಲೆಡೆ ಸುಗಮವಾಗಿ ನಡೆದ ಪರೀಕ್ಷೆ

ಚಿಕ್ಕಬಳ್ಳಾಪುರ: ಎಸ್ಸೆಸ್ಸೆಲ್ಸಿ; 44 ವಿದ್ಯಾರ್ಥಿಗಳು ಗೈರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಸುಗಮವಾಗಿ ನಡೆಯಿತು. ಒಟ್ಟು 17,102 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಇವರಲ್ಲಿ 44 ವಿದ್ಯಾರ್ಥಿಗಳು ಗೈರಾಗಿದ್ದರು.

ಜಿಲ್ಲೆಯಲ್ಲಿ ಮೊದಲ ಬಾರಿಗೆ ಪರೀಕ್ಷೆ ಬರೆಯಲು 15,859 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ಇವರಲ್ಲಿ 33 ವಿದ್ಯಾರ್ಥಿಗಳು ಗೈರಾಗಿದ್ದರು. ಖಾಸಗಿ ಅಭ್ಯರ್ಥಿಗಳಲ್ಲಿ ಮೂರು ಹಾಗೂ ಪುನರಾವರ್ತಿತ ಅಭ್ಯರ್ಥಿಗಳಲ್ಲಿ ಎಂಟು ಮಂದಿ ಗೈರಾಗಿದ್ದರು. ಪರೀಕ್ಷಾ ಕೇಂದ್ರಗಳಿಗೆ ಬೆಳಿಗ್ಗೆ 8.30ಕ್ಕೆ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಬರಲು ಆರಂಭಿಸಿದರು.

ಜಿಲ್ಲೆಯಲ್ಲಿ ಒಟ್ಟು 99 ಪರೀಕ್ಷಾ ಕೇಂದ್ರಗಳಿದ್ದು ಎಲ್ಲ ಕೇಂದ್ರಗಳ ಮುಂದೆ ವಿದ್ಯಾರ್ಥಿಗಳು ತಾವು ಪರೀಕ್ಷೆ ಬರೆಯಲು ಕೂರಬೇಕಾದ ಕೊಠಡಿ ಸಂಖ್ಯೆಯನ್ನು ತಿಳಿಯಲು ಮೂರು ಕಡೆ ನಾಮಫಲಕಗಳನ್ನು ಅಳವಡಿಸಿದ್ದರು. ವಿದ್ಯಾರ್ಥಿಗಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸಿಬ್ಬಂದಿ ಗುಂಪುಗೂಡದಂತೆ ಪದೇ ಪದೇ ಹೇಳಿದ್ದರು.

ಶಾಲಾ ಆವರಣಕ್ಕೆ ಬಂದ ವಿದ್ಯಾರ್ಥಿಗಳಿಗೆ ಮೊದಲು ಸ್ಯಾನಿಟೈಸ್ ನೀಡಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು. ನಂತರ ಕೊಠಡಿಯ ಒಳಗೆ ಒಬ್ಬಬ್ಬರಾಗಿಯೇ ಕಳುಹಿಸಲಾಯಿತು. ಪ್ರತಿ ಕೊಠಡಿಯಲ್ಲಿ 12 ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಟ್ಟಿದ್ದು ಮತ್ತು ಹೆಚ್ಚು ಪರೀಕ್ಷಾ ಕೇಂದ್ರಗಳನ್ನು ತೆರೆದ ಕಾರಣ ಹೆಚ್ಚಿನ ವಿದ್ಯಾರ್ಥಿ ದಟ್ಟಣೆಯೂ ಕಂಡು ಬರಲಿಲ್ಲ.

ಜಿಲ್ಲಾಧಿಕಾರಿ ಭೇಟಿ: ನಗರದ ಸರ್ಕಾರಿ ಜೂನಿಯರ್ ಕಾಲೇಜಿನ ಪರೀಕ್ಷಾ ಕೇಂದ್ರ, ಪಾಪಸಂದ್ರ ಪರೀಕ್ಷಾ ಕೇಂದ್ರ ಸೇರಿದಂತೆ ವಿವಿಧ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಆರ್.ಲತಾ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಯಾವುದೇ ಆತಂಕವಿಲ್ಲದೆ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಎಂದು ಸಲಹೆ ನೀಡಿದರು.

ಮಧ್ಯಾಹ್ನ ಪರೀಕ್ಷೆ ಮುಗಿಯುತ್ತಿದ್ದಂತೆ ವಿದ್ಯಾರ್ಥಿಗಳು ಸಂಭ್ರಮದಿಂದ ಹೊರ ಬಂದರು. ಈ ವೇಳೆ ಕಾಯುತ್ತಿದ್ದ ಪೋಷಕರು ತಮ್ಮ ಮಕ್ಕಳಿಂದ ಪರೀಕ್ಷೆ ಬಗ್ಗೆ ಮಾಹಿತಿ ಪಡೆದರು.

‘ಯಾವುದೇ ಗೊಂದಲಗಳು ಇಲ್ಲದಂತೆ ಪರೀಕ್ಷೆ ನಡೆದಿದೆ. ಎಲ್ಲರೂ ಸಹಕಾರ ನೀಡಿದ್ದಾರೆ‘ ಎಂದು ಡಿಡಿಪಿಐ ಜಯರಾಮರೆಡ್ಡಿ ಹೇಳಿದರು.

‘ಪರೀಕ್ಷೆ ಮಾಡಿರುವುದು ಖುಷಿ ತಂದಿದೆ. ಪರೀಕ್ಷೆ ಸುಲಭವಾಗಿತ್ತು. ಪರೀಕ್ಷೆ ಬರೆದಿದ್ದು ನನಗೆ ಖುಷಿ ನೀಡಿದೆ’ ಎಂದು ನಗರದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಅರ್ಪಿತಾ ತಿಳಿಸಿದರು.‘ಪರೀಕ್ಷೆಯನ್ನು ಒತ್ತಡವಿಲ್ಲದಂತೆ ಬರೆದಿದ್ದೇನೆ. ಬಹುಆಯ್ಕೆ ಪ್ರಶ್ನೆ ಪತ್ರಿಕೆ ಸುಲಭವಾಗಿತ್ತು’ ಎಂದು ಮಂಚನಬಲೆ ಬಿಜಿಎಸ್ ಪ್ರೌಢಶಾಲೆಯ ಶಿವಕುಮಾರ್ ಹೇಳಿದರು. ‌

‘ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಪರೀಕ್ಷೆ ಗೊಂದಲ ಇಲ್ಲದೆ ನಡೆಯಿತು. ಈ ಕೇಂದ್ರದಲ್ಲಿ ಯಾರೂ ಗೈರಾಗಿರಲಿಲ್ಲ’ ಎಂದು ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಪ್ರಭಾವತಿ ‘ಪ್ರಜಾವಾಣಿ’ಗೆ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು