ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿಯಲ್ಲಿ ಚರ್ಚೆಗೆ ಕಾರಣವಾದ ‘ಮೈತ್ರಿ’ ಮುನ್ನಡೆ

ಸಚಿವ ಡಾ.ಎಂ.ಸಿ.ಸುಧಾಕರ್ ಸ್ವ ಕ್ಷೇತ್ರದಲ್ಲಿ ಜೆಡಿಎಸ್‌–ಬಿಜೆಪಿಗೆ ಹೆಚ್ಚು ಮತ
Published 8 ಜೂನ್ 2024, 7:42 IST
Last Updated 8 ಜೂನ್ 2024, 7:42 IST
ಅಕ್ಷರ ಗಾತ್ರ

ಚಿಂತಾಮಣಿ: ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಮಲ್ಲೇಶಬಾಬು ಮುನ್ನಡೆ ಪಡೆದಿದ್ದಾರೆ. ಇದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಚಿಂತಾಮಣಿ ಕ್ಷೇತ್ರದ ಶಾಸಕರಾಗಿದ್ದಾರೆ. ಹೀಗಿದ್ದರೂ ಜೆಡಿಎಸ್-ಬಿಜೆಪಿ ಅಭ್ಯರ್ಥಿ ಎಂ.ಮಲ್ಲೇಶಬಾಬು ಮುನ್ನಡೆಗಳಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಚಿಂತಾಮಣಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮನ್ನಡೆ ಪಡೆಯುತ್ತದೆ ಎಂದು ಬಹುತೇಕ ಸಮೀಕ್ಷೆಗಳ ವರದಿ ಮಾಡಿದ್ದವು. ವಿಧಾನಸಭಾ ಚುನಾವಣೆ ನಡೆದ ಒಂದೇ ವರ್ಷದಲ್ಲಿ ಮತದಾನದಲ್ಲಿ ಬದಲಾವಣೆ ಆಗಿರುವುದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಾ.ಎಂ.ಸಿ.ಸುಧಾಕರ್ 97,324 ಮತ ಪಡೆದಿದ್ದರು. ಜೆಡಿಎಸ್ ಅಭ್ಯರ್ಥಿ ಎಂ.ಕೃಷ್ಣಾರೆಡ್ಡಿ 68,272, ಬಿಜೆಪಿ ಅಭ್ಯರ್ಥಿ ಜಿ.ಎನ್.ವೇಣುಗೋಪಾಲ್‌ಗೆ 21,711 ಮತಗಳು ಬಂದಿದ್ದವು. ಡಾ.ಎಂ.ಸಿ.ಸುಧಾಕರ್ 29,052 ಮತಗಳ ಅಂತರದಿಂದ ಜಯಶಾಲಿಯಾಗಿದ್ದರು.

ಕಾಂಗ್ರೆಸ್ ಶೇ 51.05, ಜೆಡಿಎಸ್ ಶೇ 35.81, ಬಿಜೆಪಿ ಶೇ 11.39 ಮತಗಳನ್ನು ಪಡೆದಿತ್ತು. ಜೆಡಿಎಸ್ ಮತ್ತು ಬಿಜೆಪಿ ಮತಗಳನ್ನು ಒಟ್ಟುಗೂಡಿಸಿದರೂ ಕಾಂಗ್ರೆಸ್ ನ ಡಾ.ಎಂ.ಸಿ.ಸುಧಾಕರ್ ಗೆ 7,341 ಅಧಿಕ ಮತಗಳು ಪಡೆದಿದ್ದರು. ಶಾಸಕರು ಮಂತ್ರಿಗಳಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಹೀಗಿದ್ದರೂ ಈ ಚುನಾವಣೆಯಲ್ಲಿ ಸಚಿವರ ಕ್ಷೇತ್ರದಲ್ಲೇ ಜೆಡಿಎಸ್ ಅಭ್ಯರ್ಥಿ ಮಲ್ಲೇಶಬಾಬು ಅವರಿಗೆ 7,250 ಮತಗಳು ಹೆಚ್ಚು ಬಂದಿವೆ. 

2018ರ ವಿಧಾನಸಭೆ ಚುನಾವಣೆಯಲ್ಲಿ ಡಾ.ಎಂ.ಸಿ ಸುಧಾಕರ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ತಾನು ಕಾಂಗ್ರೆಸ್‌ನಿಂದ ಹೊರಗಿರಲು ಹಾಗೂ ಸ್ವತಂತ್ರವಾಗಿ ಸ್ಪರ್ಧಿಸಿ ಸೋಲಲು ಅಂದಿನ ಸಂಸದ ಕೆ.ಎಚ್.ಮುನಿಯಪ್ಪ ಕಾರಣ ಎಂದು ಗುಡುಗಿದ್ದರು. 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಮುಂಚೂಣಿಯಲ್ಲಿ ನಿಂತು ಪ್ರಚಾರ ಮಾಡಿದ್ದರು. ಬಿಜೆಪಿಯನ್ನು ಗೆಲ್ಲಿಸಿ, ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸಲೇಬೇಕು ಎಂದು ಕೋಲಾರ ಜಿಲ್ಲೆಯಾದ್ಯಂತ ಪ್ರಚಾರ ನಡೆಸಿದ್ದರು.

2019ರ ಲೋಕಸಭಾ ಚುನಾವಣೆಯಲ್ಲಿ ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ 93,694, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ 69,566 ಮತಗಳನ್ನು ಪಡೆದಿದ್ದರು. ಅಂದು ಡಾ.ಎಂ.ಸಿ.ಸುಧಾಕರ್‌ಗೆ ಅಧಿಕಾರ ದೊರೆತಿರಲಿಲ್ಲ. ಕಾಂಗ್ರೆಸ್ ಪಕ್ಷದಲ್ಲೂ ಇರಲಿಲ್ಲ. ಆದರೂ ಬಿಜೆಪಿಗೆ ತನ್ನ ಕ್ಷೇತ್ರದಿಂದ 24,128 ಮತಗಳ ಲೀಡ್ ಕೊಡಿಸಿದ್ದರು.

ಈಗ ಪ್ರಭಾವಿ ಸಚಿವರಾಗಿದ್ದಾರೆ. ಅಭ್ಯರ್ಥಿ ಆಯ್ಕೆಯಲ್ಲೂ ಮೇಲುಗೈ ಸಾಧಿಸಿದ್ದರು. ಅಧಿಕಾರದ ಅವಧಿಯಲ್ಲಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್ಚು ಮತ ಪಡೆದಿದ್ದು, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮುಂದೆ ಕಾಂಗ್ರೆಸ್ ಸೋಲು ಅನುಭವಿಸಿರುವುದು ಸಚಿವರಿಗೆ ಮುಖಭಂಗವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ವಿಧಾನಸಭ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆದು ಬೀಗಿದ್ದ ಸಚಿವರಿಗೆ ಒಂದು ವರ್ಷ ಕಳೆಯುವಷ್ಟರಲ್ಲಿ ಕ್ಷೇತ್ರದಲ್ಲಿ ಹಿಡಿತ ಕಳೆದುಕೊಳ್ಳುವಂತಾಗಿರುವುದು ದೊಡ್ಡ ಅಘಾತವಾಗಿದೆ ಎನ್ನಲಾಗಿದೆ.

ಕ್ಷೇತ್ರದಲ್ಲಿ ಘಟಬಂಧನ್ ನಾಯಕರ ಹಟಮಾರಿ ಧೋರಣೆ, ಗೊಂದಲದ ಹೇಳಿಕೆಗಳು, ಆರೋಪ, ಪ್ರತ್ಯಾರೋಪಗಳು ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲೂ ಮತದಾನದ ಮೇಲೆ ಪ್ರಭಾವ ಬೀರಿದೆ. ಕ್ಷೇತ್ರದಲ್ಲಿ ಪರಿಶಿಷ್ಟಜಾತಿ, ಪಂಗಡ ಮತ್ತು ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಾಗಿವೆ. ಘಟಬಂಧನ್ ನಾಯಕರು ತಮ್ಮ ಸ್ವಾರ್ಥಕ್ಕಾಗಿ ಎಡ-ಬಲ ಸೃಷ್ಟಿ ಮಾಡಿದರು ಎಂಬ ಕೋಪ ಪರಿಶಿಷ್ಟಜಾತಿ ಪಂಗಡದವರಲ್ಲಿತ್ತು. ಕೆಲವು ನಾಯಕರು ಬಹಿರಂಗವಾಗಿ ಒಕ್ಕಲಿಗ ಸಮುದಾಯವನ್ನು ಹೀಗೆಳೆದಿದ್ದರಿಂದ ಅವರು ಪ್ರತೀಕಾರಕ್ಕಾಗಿ ಕಾಯುತ್ತಿದ್ದರು. ಹೀಗೆ ಎರಡು ಪ್ರಬಲ ಸಮುದಾಯಗಳು ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದರು ಎಂದು ವಿಶ್ಲೇಷಣೆ ನಡೆಯುತ್ತಿದೆ.

ಕ್ಷೇತ್ರದಲ್ಲಿ ಹಿಂದಿನ ಚುನಾವಣೆಗಳನ್ನು ಅವಲೋಕಿಸಿದರೆ ಮತದಾರರು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಭಿನ್ನವಾಗಿ ಮತದಾನ ಮಾಡಿದ್ದಾರೆ.  ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವ ಸಹ ಈ ಕ್ಷೇತ್ರದಲ್ಲಿ ಆಗಿದೆ. 

ಸಚಿವರ ಭೇಟಿ ಕಷ್ಟ? ಸಚಿವ ಎಂ.ಸಿ.ಸುಧಾಕರ್ ಅವರಿಗೂ ಇದು ಎಚ್ಚರಿಕೆ ಗಂಟೆಯಾಗಿದೆ. ಶಾಸಕರಾಗಿದ್ದಾಗಲೇ ಜನರ ಸಂಪರ್ಕದಲ್ಲಿದ್ದರು. ಸಚಿವರಾದ ನಂತರ ಜನಸಂಪರ್ಕ ಕಡಿಮೆಯಾಯಿತು. ಚುನಾವಣೆಯಾಗಿ ಒಂದು ವರ್ಷ ಕಳೆದರೂ ಕನಿಷ್ಠ ಪಂಚಾಯಿತಿವಾರು ಜನರನ್ನು ಭೇಟಿ ಮಾಡಿ ಕಷ್ಟ-ಸುಖ ಹಾಗೂ ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡಲಿಲ್ಲ. ಮನೆಗೆ ಹೋದರೂ ಸಾಮಾನ್ಯ ಜನರು ಸಚಿವರನ್ನು ಭೇಟಿ ಮಾಡುವುದು ಕಷ್ಟ. ನಾಯಕರೇ ಜನಜಾತ್ರೆಯಂತೆ ತುಂಬಿರುತ್ತಾರೆ ಎಂಬ ಆರೋಪವೂ ಕೇಳಿಬರುತ್ತಿದೆ. ಒಂದು ವರ್ಷವಾದರೂ ಕ್ಷೇತ್ರದಲ್ಲಿ ಯಾವುದೇ ಯೋಜನೆಗಳು ಕಾರ್ಯಕ್ರಮಗಳು ಆರಂಭವಾಗಿಲ್ಲ. ಗ್ಯಾರಂಟಿ ಯೋಜನೆಗಳಿಂದ ಅನುದಾನದ ಕೊರತೆಯಾಗಿದೆ ಎಂದು ಪಕ್ಷದ ನಾಯಕರೇ ಹೇಳಿಕೊಂಡು ತಿರುಗಾಡುತ್ತಿದ್ದರು. ಇದು ಸಹ ಜನರ ಮನಸ್ಸಿನಲ್ಲಿ ಬೇಸರ ತರಿಸಿದೆ ಎನ್ನಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT