ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೈತರ ಒಕ್ಕಲೆಬ್ಬಿಸಿದರೆ ಹೋರಾಟ: ಜಿ.ಸಿ.ಬಯ್ಯಾರೆಡ್ಡಿ

Published 19 ಫೆಬ್ರುವರಿ 2024, 5:12 IST
Last Updated 19 ಫೆಬ್ರುವರಿ 2024, 5:12 IST
ಅಕ್ಷರ ಗಾತ್ರ

ಚಿಂತಾಮಣಿ: ಅನೇಕ ದಶಕಗಳಿಂದ ಸಾಗುವಳಿ ಮಾಡುತ್ತಿರುವ ಬಡ ರೈತರ ಭೂಮಿಯನ್ನು ಸಕ್ರಮಗೊಳಿಸದೆ ಅರಣ್ಯ ಇಲಾಖೆಯ ಅಧಿಕಾರಿಗಳು ಒಕ್ಕಲೆಬ್ಬಿಸಿದರೆ ಕರ್ನಾಟಕ ಪ್ರಾಂತ ರೈತ ಸಂಘವು ಇತರೆ ಸಮಾನ ಮನಸ್ಕ ಸಂಘಟನೆಗಳ ಸಹಯೋಗದೊಂದಿಗೆ ಹೋರಾಟ ರೂಪಿಸಬೇಕಾಗುತ್ತದೆ ಎಂದು ಕೆಪಿಆರ್‌ಎಸ್‌ನ ರಾಜ್ಯ ಘಟಕದ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಹೇಳಿದರು.

ನಗರದ ಎಪಿಎಂಸಿ ಯಾರ್ಡ್‌ನಲ್ಲಿರುವ ರೈತಭವನದಲ್ಲಿ ಶನಿವಾರ ತಾಲ್ಲೂಕು ಘಟಕವು ಆಯೋಜಿಸಿದ್ದ ಬಗರ್ ಹುಕುಂ ಸಾಗುವಳಿ ಹಿಡುವಳಿದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ರೈತರಿಂದ ಭೂಮಿ ವಶಪಡಿಸಿಕೊಳ್ಳಲು ಅರಣ್ಯ ಇಲಾಖೆ ಯತ್ನಿಸುತ್ತಿದೆ. ದೌರ್ಜನ್ಯ ದಬ್ಬಾಳಿಕೆಯಿಂದ ರೈತರಿಗೆ ಕಿರುಕುಳ ನೀಡಲಾಗುತ್ತಿದೆ. ಕಾನೂನುಬದ್ಧವಾಗಿ ಸಾಗುವಳಿ ಚೀಟಿ ಪಡೆದು ಉಳುಮೆ ಮಾಡುತ್ತಿರುವ ರೈತರನ್ನು ಭೂಮಿಯಿಂದ ಒಕ್ಕಲೆಬ್ಬಿಸುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕೈಬಿಡಬೇಕು. ಸರ್ಕಾರ ಮಂಜೂರು ಮಾಡಿರುವ ಭೂಮಿಯನ್ನು ವಾಪಸ್ ಪಡೆಯುವ ಅಧಿಕಾರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಇಲ್ಲ ಎಂದರು.

ಬಗರ್ ಹುಕುಂ ಭೂಮಿಯ ಸಾಗುವಳಿ ಚೀಟಿ ವಿತರಣೆ ಸಮಿತಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇರುತ್ತಾರೆ. ಆಗ ಮಾತನಾಡದ ಅಧಿಕಾರಿಗಳು, ರೈತರು ಸಾವಿರಾರು ರೂಗಳನ್ನು ಖರ್ಚು ಮಾಡಿ ಜಮೀನನ್ನು ಹದ ಮಾಡಿರುತ್ತಾರೆ. ದಶಕಗಳಿಂದ ಅದರಲ್ಲಿ ಬೆಳೆ ತೆಗೆದು ಬದುಕನ್ನು ಕಟ್ಟಿಕೊಂಡಿದ್ದಾರೆ. ಈಗ ಏಕಾಏಕಿ ಅಧಿಕಾರಿಗಳು ಬಂದು ರೈತರಿಂದ ಜಮೀನು ವಶಪಡಿಸಿಕೊಂಡರೆ ರೈತರು ಎಲ್ಲಿಗೆ ಹೋಗಬೇಕು? ಹೇಗೆ ಜೀವನ ನಡೆಸಬೇಕು ಎಂದು ಪ್ರಶ್ನಿಸಿದರು.

ಸರ್ಕಾರಗಳು ರೈತರಿಂದ ಭೂಮಿ ವಶಪಡಿಸಿಕೊಳ್ಳಲು ನಾನಾ ರೀತಿಯ ನಾಟಕಗಳನ್ನು ಆಡುತ್ತದೆ. ಕೈಗಾರಿಕೆ ಅಭಿವೃದ್ಧಿಯ ಹೆಸರಿನಲ್ಲಿ ಫಲವತ್ತಾದ ಭೂಮಿಯನ್ನು ರೈತರಿಂದ ವಶಪಡಿಸಿಕೊಳ್ಳಲು ಹೊರಟಿರುವುದು ಖಂಡನೀಯ. ದಶಕಗಳಿಂದ ಭೂ ಹೀನರು, ದಲಿತರು, ಹಿಂದುಳಿದವರ್ಗಗಳ ಬಡವರು ಸರ್ಕಾರ ನಿಗದಿಪಡಿಸಿರುವ ನಿಯಮಗಳ ಅಡಿಯಲ್ಲಿ ಸರ್ಕಾರದ ಗೋಮಾಳ, ಹುಲ್ಲುಬನ್ನಿ, ಹಾಗೂ ಸಿ.ಮತ್ತು ಡಿ ದರ್ಜೆಯ ಕಂದಾಯ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಬೆಳೆಗಳನ್ನು ಬೆಳೆದು ದೇಶಕ್ಕೆ ಅನ್ನ ನೀಡುತ್ತಿದ್ದಾರೆ. ಇಂತಹ ಸಾವಿರಾರು ರೈತರು ಅರ್ಜಿ ಸಲ್ಲಿಸಿ ತಮ್ಮ ಬಗರ್ ಹುಕುಂ ಸಾಗುವಳಿ ಜಮೀನನ್ನು ಸಕ್ರಮಗೊಳಿಸುವಂತೆ ಕಾಯುತ್ತಿದ್ದಾರೆ ಎಂದರು.

ಸರ್ಕಾರ ಕೂಡಲೇ ಬಗರ್ ಹುಕುಂ ಸಕ್ರಮ ಸಮಿತಿಗಳ ರಚನೆ ಮಾಡಬೇಕು. ಸಮಿತಿಗಳು ಪ್ರತಿವಾರ ಕಡ್ಡಾಯವಾಗಿ ಸಭೆ ನಡೆಸಿ ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಿ ಅರ್ಹ ರೈತರಿಗೆ ಖಾತೆ, ಪಹಣಿ ಮತ್ತಿತರ ದಾಖಲೆಗಳನ್ನು ಮಾಡಿಕೊಡಬೇಕು. ದಶಕಗಳಿಂದ ಭೂಮಿಯನ್ನು ಅಭಿವೃದ್ಧಿಪಡಿಸಿ ಬೆಳೆಗಳನ್ನು ಬೆಳೆದುಕೊಂಡು ಸ್ವತಂತ್ರ ಬದುಕು ರೂಪಿಸಿಕೊಂಡಿರುವ ರೈತರ ಜಮೀನುಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಕೆಎಐಡಿಬಿ ಭೂಸ್ವಾಧೀನ ಪಡಿಸಿಕೊಳ್ಳುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಾಳಪ್ಪಲ್ಲಿ ಆನಂದ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮಿನಾರಾಯಣರೆಡ್ಡಿ, ಗಡಿಗವಾರಹಳ್ಳಿ ನರಸಿಂಹಪ್ಪ, ನಾರಮಾಕಲಹಳ್ಳಿ ಮುನಿರೆಡ್ಡಿ, ಭಾಷಾಸಾಬಿ, ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT