ಚಿಕ್ಕಬಳ್ಳಾಪುರ: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೇಂದ್ರದಲ್ಲಿ ಮಂಗಳವಾರ ನಡೆದ ಕೆಎಎಸ್ ಪೂರ್ವಭಾವಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಕೆಲ ಅಭ್ಯರ್ಥಿಗಳು ದೂರು ನೀಡಿದ್ದಾರೆ.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೊಠಡಿ ಸಂಖ್ಯೆ 3ರಲ್ಲಿ ಪ್ರಶ್ನೆಪತ್ರಿಕೆ ‘ಪತ್ರಿಕೆ 1’ ರ ಬಂಡಲ್ ತೆರೆದಿತ್ತು. ಅದರಲ್ಲಿದ್ದ ಒಂದು ಪ್ರಶ್ನೆ ಪತ್ರಿಕೆ ತೆರೆದಿದೆ. ಅಲ್ಲದೆ, 15 ನಿಮಿಷ ತಡವಾಗಿ ಪ್ರಶ್ನೆ ಪತ್ರಿಕೆ ನೀಡಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆಯಾಗಿ ಅಕ್ರಮ ನಡೆದಿದೆ ಎಂದು ಚಿಕ್ಕಬಳ್ಳಾಪುರ ಕೆಎಎಸ್ ಪರೀಕ್ಷಾ ಕೇಂದ್ರದ ಪರೀಕ್ಷಾ ನಿಯಂತ್ರಕರಿಗೆ ಅಭ್ಯರ್ಥಿಗಳಾದ ಎನ್.ಪ್ರವೀಣ್ ಮತ್ತಿತರರು ದೂರಿನಲ್ಲಿ ತಿಳಿಸಿದ್ದಾರೆ.
ಯಾವುದೇ ಸೋರಿಕೆ ಆಗಿಲ್ಲ: ಪ್ರಶ್ನೆಪತ್ರಿಕೆ ಸೀಲ್ ಮಾಡಿದ ಟ್ರಂಕ್‌ನಲ್ಲಿ ಬಂದಿದೆ. ತಹಶೀಲ್ದಾರ್, ತಾ.ಪಂ ಇಒ ಮತ್ತು ಪೊಲೀಸರ ಮೂಲಕ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿದ್ದೇವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ಭಾಸ್ಕರ್ ‘ಪ್ರಜಾವಾಣಿ’ ಗೆ ತಿಳಿಸಿದರು.
ಪರೀಕ್ಷೆ ನಡೆಯುವ ಶಾಲೆ ಅಥವಾ ಕಾಲೇಜಿನಲ್ಲಿ ಸ್ಥಳೀಯ ತಪಾಸಣಾ ಅಧಿಕಾರಿ ಇರುತ್ತಾರೆ. ಅವರ ಮುಂದೆ ಪೆಟ್ಟಿಗೆ ತೆರೆಯುತ್ತೇವೆ. ಯಾವ ಪರೀಕ್ಷಾ ಕೇಂದ್ರದ ಯಾವ ಕೊಠಡಿಗೆ ಈ ಪ್ರಶ್ನೆ ಪತ್ರಿಕೆಗಳು ಎಂದು ಮೊದಲೇ ನಮೂದಾಗಿರುತ್ತದೆ ಎಂದು ತಿಳಿಸಿದರು.
ಅಭ್ಯರ್ಥಿಗಳ ಮುಂದೆ ತೋರಿಸಿ ಅವರಿಂದ ಸಹಿ ಪಡೆದ ನಂತರ ತೆರೆಯುತ್ತೇವೆ. ಈ ಎಲ್ಲವೂ ನಿಯಮ ಬದ್ಧವಾಗಿ ನಡೆದಿದೆ ಎಂದರು.